ಸುಸಜ್ಜಿತ ಕಟ್ಟಡ ನಿರ್ಮಿಸಲು ಗುತ್ತಿಗೆದಾರರು ಶ್ರಮಿಸಿ

KannadaprabhaNewsNetwork |  
Published : Jul 07, 2025, 11:47 PM ISTUpdated : Jul 07, 2025, 11:48 PM IST
ರಾಮದುರ್ಗ ತಾಲೂಕಿನ ಕಟಕೋಳದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಅಶೋಕ ಪಟ್ಟಣ ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲು 3 ಜಾಗೆ ಗೊತ್ತು ಪಡಿಸಲಾಗಿತ್ತು. ಪಿಡಿಒ ಮಾಡಿದ ತಪ್ಪಿನಿಂದಾಗಿ ಆದರ್ಶ ಶಾಲೆಯ ಪಕ್ಕದಲ್ಲಿ ಭೂಮಿ ಪೂಜೆ ನೆರವೇರಿಸಲಾಗಿದೆ.

ಕನ್ನಡಪ್ರಭ ವಾರ್ತೆ ರಾಮದುರ್ಗ

ಕಟಕೋಳ ಗ್ರಾಮದಲ್ಲಿ ಸುಮಾರು ₹3.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಸುಸಜ್ಜಿತವಾಗಿ ನಿರ್ಮಿಸಲು ಗುತ್ತಿಗೆದಾರರ ಶ್ರಮವಹಿಸಬೇಕು. ಗ್ರಾಮಸ್ಥರು ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳಬೇಕು ಶಾಸಕ ಅಶೋಕ ಪಟ್ಟಣ ಹೇಳಿದರು.

ತಾಲೂಕಿನ ಕಟಕೋಳದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ 9 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಅವುಗಳನ್ನು ಉನ್ನತೀಕರಿಸಿ ಸಮುದಾಯ ಆರೋಗ್ಯ ಕೇಂದ್ರಗಳನ್ನು ಮಾಡುವ ಕಾರ್ಯಕ್ಕೆ ಮುಂದಾಗುವುದಾಗಿ ತಿಳಿಸಿದರು. ಆಸ್ಪತ್ರೆ ನಿರ್ಮಾಣಕ್ಕೆ ಪಂಚಾಯಿತಿಯವರು ಮತ್ತು ಗ್ರಾಮಸ್ಥರು ಒಮ್ಮತದಲ್ಲಿ ಜಾಗೆ ಗೊತ್ತು ಮಾಡಬೇಕು. ಭೂಮಿ ಪೂಜೆಗೆ ಆಗಮಿಸಿದಾಗ ಮಾತ್ರ ಆಕ್ಷೇಪಣೆ ಮಾಡುವುದು ಸೂಕ್ತವಲ್ಲ. ಒಂದು ವಾರದಲ್ಲಿ ಜಾಗೆ ಗೊತ್ತು ಮಾಡಿದ ನಿರ್ಧಾರದಂತೆ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲು 3 ಜಾಗೆ ಗೊತ್ತು ಪಡಿಸಲಾಗಿತ್ತು. ಪಿಡಿಒ ಮಾಡಿದ ತಪ್ಪಿನಿಂದಾಗಿ ಆದರ್ಶ ಶಾಲೆಯ ಪಕ್ಕದಲ್ಲಿ ಭೂಮಿ ಪೂಜೆ ನೆರವೇರಿಸಲಾಗಿದೆ. ಅಧಿಕಾರಿಗಳು ಮಾಡಿದ ತಪ್ಪಿನಿಂದ ಗ್ರಾಮಸ್ಥರು ಸುಮಾರು 1 ಕಿ.ಮೀ ದೂರ ಕ್ರಮಿಸಬೇಕಾಗಿದೆ. ಗ್ರಾಮಕ್ಕೆ ಹೊಂದಿಕೊಂಡಿರುವ ಮತ್ತು ಸೂಕ್ತ ರಸ್ತೆ ಇರುವ ಕಡೆಯಲ್ಲಿ ಆರೋಗ್ಯ ಕೇಂದ್ರ ನಿರ್ಮಿಸಲು ಗ್ರಾಮಸ್ಥರು ಚಿಂತಿಸಬೇಕು ಎಂದರು.

ಜಿಲ್ಲಾ ವೈದ್ಯಾಧಿಕಾರಿ ಡಾ.ಐ.ಪಿ.ಗಡಾದ ಮಾತನಾಡಿ, ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಬೇಕು ಎಂಬುದನ್ನು ಪಂಚಾಯಿತಿ ನಿರ್ಧರಿಸಿ, ತಹಸೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿದ ನಂತರವೇ ಭೂಮಿ ಪೂಜೆ ಇಟ್ಟುಕೊಳ್ಳಲಾಗಿದೆ. ಕಟಕೋಳ ಸಮುದಾಯ ಆರೋಗ್ಯ ಕೇಂದ್ರವಾಗಲು ಯೋಗ್ಯವಾಗಿದ್ದು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಮತ್ತು ತಾಲೂಕಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷೆ ಪಾರ್ವತಿ ಪಾಠೋಳಿ, ಉಪಾಧ್ಯಕ್ಷೆ ಶೋಭಾ ವಂಟಮೂರಿ, ತಾಲೂಕು ವೈದ್ಯಾಧಿಕಾರಿ ಡಾ.ನವೀನ ನಿಜಗುಲಿ, ಎಇಇ ಅರುಣಕುಮಾರ, ಕಟಕೋಳ ಆರೋಗ್ಯ ಕೇಂದ್ರದ ಡಾ.ಪ್ರಿಯಾಂಕ, ಪಿಡಿಒ ಎಂ.ಬಿ.ಬೈಲವಾಡ ಸೇರಿದಂತೆ ಇತರರು ಇದ್ದರು.

PREV