ತದ್ವಿರುದ್ಧ ಸಾಕ್ಷ್ಯ: ರೇಣುಕಾ ತಾಯಿಗೆ ಮತ್ತೆ ಪಾಟಿ ಸವಾಲು

KannadaprabhaNewsNetwork |  
Published : Dec 31, 2025, 02:00 AM IST
೩೦ಶಿರಾ೫: ಶಿರಾ ತಾಲೂಕಿನ ಮಾಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ವಿಜೇತರಾದ ಮೂಗನಹಳ್ಳಿ ರಾಮು ಹಾಗೂ ಎಸ್.ಹೆಚ್ ಮೂರ್ತಿ ಗಿರಿನಾಥನಹಳ್ಳಿ ಅವರನ್ನು ವಿಧಾನ ಪರಿಷತ್ ಸದಸ್ಯರು ಹಾಗೂ ಬಿಜೆಪಿ ಮಧುಗಿರಿ ಸಂಘಟನಾತ್ಮಕ ಜಿಲ್ಲಾಧ್ಯಕ್ಷರಾದ ಚಿದಾನಂದ್ ಎಂ ಗೌಡ ಅವರು ಸನ್ಮಾನಿಸಿ ಅಭಿನಂದಿಸಿದರು. | Kannada Prabha

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತದ್ವಿರುದ್ಧ ಸಾಕ್ಷ್ಯ ನುಡಿದಿರುವ ಹಿನ್ನೆಲೆಯಲ್ಲಿ ಮೃತನ ತಾಯಿ ರತ್ನಪ್ರಭಾ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲಾಗುವುದು ಎಂದು ತನಿಖಾಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತದ್ವಿರುದ್ಧ ಸಾಕ್ಷ್ಯ ನುಡಿದಿರುವ ಹಿನ್ನೆಲೆಯಲ್ಲಿ ಮೃತನ ತಾಯಿ ರತ್ನಪ್ರಭಾ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲಾಗುವುದು ಎಂದು ತನಿಖಾಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪ್ರಕರಣದ ವಿಚಾರಣೆಯನ್ನು ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಮಂಗಳವಾರ ಮುಂದುವರಿಸಿತು.

ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರ ಪಾಟಿ ಸವಾಲು ಪ್ರಕ್ರಿಯೆಯನ್ನು ದರ್ಶನ್‌ ಪರ ವಕೀಲರು ಪೂರ್ಣಗಳಿಸಿದರು. ಆ ಪಾಟಿ ಸವಾಲನ್ನೇ ಯಥಾ ಪ್ರಕಾರ ತಾವೂ ಅಳವಡಿಸಿಕೊಳ್ಳುವುದಾಗಿ ಆರೋಪಿಗಳಾದ ನಂದೀಶ್‌, ಆರ್‌.ನಾಗರಾಜು, ಎಂ.ಲಕ್ಷ್ಮಣ್‌, ರವಿ ಶಂಕರ್‌ ಮತ್ತು ವಿ.ವಿನಯ್‌ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ನಮಗೂ ಪಾಟೀ ಸವಾಲಿಗೆ ಅನುಮತಿ ನೀಡಿ:

ಈ ವೇಳೆ ತನಿಖಾಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭೀಯೋಜಕ ಪಿ.ಪ್ರಸನ್ನ ಕುಮಾರ್‌ ಅವರು, ಪ್ರಾಸಿಕ್ಯೂಷನ್‌ ಸಾಕ್ಷ್ಯದ ವಿಚಾರಣೆ ವೇಳೆ ರತ್ನಪ್ರಭಾ ಅವರು ನುಡಿದಿದ್ದ ಕೆಲವೊಂದು ಸಾಕ್ಷ್ಯಕ್ಕೆ ವಿರುದ್ಧವಾಗಿ ಪವಿತ್ರಾ ಗೌಡ ಹಾಗೂ ದರ್ಶನ್‌ ಪರ ವಕೀಲರು ನಡೆಸಿದ ಪಾಟಿ ಸವಾಲು ಪ್ರಕ್ರಿಯೆಯಲ್ಲಿ ಸಾಕ್ಷ್ಯ ನುಡಿದಿದ್ದಾರೆ. ಅದರ ಆಧಾರದಲ್ಲಿ ರತ್ನಪ್ರಭಾ ಅವರನ್ನು ತಾವು ಸಹ ಪಾಟಿ ಸವಾಲಿಗೆ ಒಳಪಡಿಸಲಿದ್ದೇವೆ. ಅದಕ್ಕಾಗಿ ಅನುಮತಿ ನೀಡಬೇಕು ಎಂದು ಕೋರಿದರು.

ಅಂದರೆ ತನಿಖಾಧಿಕಾರಿಗಳ (ಪ್ರಾಸಿಕ್ಯೂಷನ್‌) ಪರ ಎಸ್‌ಪಿಪಿ ಅವರು ನಡೆಸಿದ ವಿಚಾರಣೆ ವೇಳೆ ರತ್ನಪ್ರಭಾ ಅವರು ಸಾಕ್ಷ್ಯ ನುಡಿದಿದ್ದರು. ಆ ಸಾಕ್ಷ್ಯದ ಕೆಲ ಅಂಶಗಳಿಗೆ ವಿರುದ್ಧವಾಗಿ ಪವಿತ್ರಾ ಗೌಡ ಮತ್ತು ದರ್ಶನ್‌ ಪರ ವಕೀಲರು ನಡೆಸಿದ ಪಾಟಿ ಸವಾಲು ಪ್ರಕ್ರಿಯೆಯಲ್ಲಿ ಸಾಕ್ಷ್ಯ ನುಡಿದಿದ್ದಾರೆ. ಅದರ ಆಧಾರದಲ್ಲಿ ಎಸ್‌ಪಿಪಿ ಅವರು ರತ್ನಪ್ರಭಾ ಅವರನ್ನು ಪಾಟಿ ಸವಾಲಿಗೆ ಗುರಿಪಡಿಸಲು ಉದ್ದೇಶಿಸಿದ್ದಾರೆ.

ಎಸ್‌ಪಿಪಿ ಮತ್ತು ದರ್ಶನ್‌ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಐ.ಪಿ.ನಾಯ್ಕ್‌ ಅವರು ಪ್ರಕರಣದ ಮುಂದಿನ ವಿಚಾರಣೆಯನ್ನು 2026ರ ಜ.5ಕ್ಕೆ ನಿಗದಿಪಡಿಸಿದರು.

ದರ್ಶನ್‌ಗೆ ಜ.5ರವರೆಗೆ ನ್ಯಾಯಾಂಗ ಬಂಧನ:

ದರ್ಶನ್‌, ಪವಿತ್ರಾ ಗೌಡ ಸೇರಿ ಜೈಲಿನಲ್ಲಿರುವ ಪ್ರಕರಣದ ಏಳು ಆರೋಪಿಗಳು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಜಾಮೀನು ಮೇಲಿರುವ ರಾಘವೇಂದ್ರ ಹೊರತುಪಡಿಸಿ ಉಳಿದೆಲ್ಲ 9 ಆರೋಪಿಗಳು ವಿಚಾರಣೆಗೆ ಖುದ್ದು ಹಾಜರಾಗಿದ್ದರು. ಆರೋಪಿಗಳ ಹಾಜರಾತಿ ನ್ಯಾಯಾಲಯ ದಾಖಲಿಸಿಕೊಂಡಿತು. ಜೊತೆಗೆ, ದರ್ಶನ್‌, ಪವಿತ್ರಾ ಗೌಡ ಸೇರಿ ಜೈಲಿನಲ್ಲಿರುವ ಏಳು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಜ.5ರವರೆಗೆ ವಿಸ್ತರಿಸಿ ನ್ಯಾಯಾಲಯ ಆದೇಶಿಸಿತು.

- ಬಾಕ್ಸ್‌-

ಪವಿತ್ರಾಗೌಡಗೆ ಮನೆ ಊಟ

ವಿಚಾರಣೆ ವೇಳೆ ಆರೋಪಿಗಳಾದ ನಟಿ ಪವಿತ್ರಾ ಗೌಡ, ಆರ್‌.ನಾಗರಾಜು ಮತ್ತು ಎಂ.ಲಕ್ಷ್ಮಣ್‌ ಪರ ವಕೀಲರು ಹಾಜರಾಗಿ, ಜೈಲು ಕೈಪಿಡಿಯಲ್ಲಿ ಅವಕಾಶವಿರುವಂತೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿಸುವಂತೆ ತಮ್ಮ ಕಕ್ಷಿದಾರರು ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ಅದಕ್ಕೆ ಜೈಲು ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ. ಅವರು ಜೈಲಿನಿಂದ ಸಹ ಸೂಕ್ತ ಆಹಾರ ಒದಗಿಸುತ್ತಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಈ ಮನವಿಗೆ ಒಪ್ಪಿದ ಮನೆಯಿಂದ ಊಟ ತರಿಸಿಕೊಳ್ಳಲು ಪವಿತ್ರಾಗೌಡ ಹಾಗೂ ಇನ್ನಿಬ್ಬರು ಆರೋಪಿಗಳಿಗೆ ಅನುಮತಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ ವಸತಿ ವ್ಯವಸ್ಥೆ ಕಲ್ಪಿಸಿದರೆ ಕೋರ್ಟ್‌ಗೆ: ಮುತಾಲಿಕ್‌
ಗುರುರಾಜ್ ಹೆಬ್ಬಾರ್ ಸ್ಮರಣಾರ್ಥ ರಕ್ತದಾನ ಶಿಬಿರ