ವಾಲ್ಮೀಕಿ ಜಯಂತಿ ಅರ್ಥಪೂರ್ಣ ಆಚರಣೆಗೆ ಸಹಕಾರ ನೀಡಿ: ತಹಸೀಲ್ದಾರ ಅಶೋಕ ಶಿಗ್ಗಾಂವಿ

KannadaprabhaNewsNetwork | Published : Oct 10, 2024 2:20 AM

ಸಾರಾಂಶ

ತಾಲೂಕಾಡಳಿತದ ವತಿಯಿಂದ ಅ.17ರಂದು ಶ್ರೀ ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಮಾಜದ ಮುಖಂಡರು ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಸಹಕಾರ ನೀಡಬೇಕು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ತಾಲೂಕಾಡಳಿತದ ವತಿಯಿಂದ ಅ.17ರಂದು ಶ್ರೀ ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಮಾಜದ ಮುಖಂಡರು ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ತಹಸೀಲ್ದಾರ ಅಶೋಕ ಶಿಗ್ಗಾಂವಿ ಹೇಳಿದರು.

ಪಟ್ಟಣದ ತಹಸೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಸುಮಾರು ಮೂರು ವರ್ಷಗಳಿಂದ ಕೋವಿಡ್ ಕಾಲಘಟ್ಟ ಹಾಗೂ ಬರಗಾಲದ ಸಂದರ್ಭದಲ್ಲಿ ಜಯಂತಿಯ ಆಚರಣೆ ಮಾಡಿರಲಿಲ್ಲ. ಈ ವರ್ಷ ತಾಲೂಕಿನ ವಾಲ್ಮೀಕಿ ಸಮಾಜದ ಮುಖಂಡರು ಅದ್ಧೂರಿಯಾಗಿ ಆಚರಣೆಗೆ ಮುಂದಾಗಿದ್ದಾರೆ. ಶಿಷ್ಠಾಚಾರದ ಪ್ರಕಾರ ಆಮಂತ್ರಣ ಮುದ್ರಣ, ಗಣ್ಯರ ಆಹ್ವಾನ, ವೇದಿಕೆ ಕಾರ್ಯಕ್ರಮ, ಮೆರವಣಿಗೆ, ಉಪನ್ಯಾಸ, ಸನ್ಮಾನ ಸಮಾರಂಭ ಅನೇಕ ಕಾರ್ಯಕ್ರಮಗಳನ್ನು ಮಾಡಬೇಕಾಗಿದ್ದು, ಇಲಾಖೆಯ ಅಧಿಕಾರಿಗಳು ಸಹಕಾರ ನೀಡಬೇಕು ಎಂದರು.

ಸಮಾಜದ ಮುಖಂಡರ ಸಲಹೆಯಂತೆ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಯು ಪಟ್ಟಣದ ಬುತ್ತಿ ಬಸವೇಶ್ವರ ದೇವಸ್ಥಾನದಿಂದ ಪಟ್ಟಣದ ಪ್ರಮುಖ ರಾಜಬೀದಿಗಳ ಮೂಲಕ ವಿವಿಧ ವಾದ್ಯಮೇಳ, ಕಲಾತಂಡಗಳ, ಕುಂಭ ಕಳಶಗಳ ಮೂಲಕ ಅದ್ಧೂರಿಯಾಗಿ ತಹಸೀಲ್ದಾರ ಕಾರ್ಯಾಲಯಕ್ಕೆ ತಲುಪುವುದು. ನಂತರ ವೇದಿಕೆಯ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.

ಕಾರ್ಯಕ್ರಮದ ಮುಖ್ಯ ಜವಾಬ್ದಾರಿಗಳಾದ ಮೆರವಣಿಗೆ, ದೀಪಾಲಂಕಾರ, ಊಟ, ಪ್ರತಿಭಾ ಪುರಸ್ಕಾರ, ಕಲಾತಂಡಗಳ ನಿಯೋಜನೆ, ಪೊಲೀಸ್ ಬಂದೋಬಸ್ತ್‌, ಸ್ವಚ್ಛತೆಯನ್ನು ಇಲಾಖೆಗಳ ಮುಖ್ಯಸ್ಥರಿಗೆ ಜವಾಬ್ದಾರಿ ನೀಡಲಾಗಿದ್ದು, ಸರ್ಕಾರಿ ನೌಕರರು ಜಯಂತಿ ಆಚರಣೆಗೆ ಹಾಜರಾಗಬೇಕು, ಇಲ್ಲವಾದರೆ ನೋಟಿಸು ಕೊಡಲಾಗುವುದು ಎಂದು ಎಚ್ಚರಿಸಿದರು.

ವಾಲ್ಮೀಕಿ ಸಮಾಜದ ತಾಲೂಕಾಧ್ಯಕ್ಷ ಮಾನಪ್ಪ ತಳವಾರ, ಜಿಪಂ ಮಾಜಿ ಅಧ್ಯಕ್ಷೆ ಮಾಲತಿ ನಾಯಕ ಮಾತನಾಡಿದರು.

ಈ ಸಂದರ್ಭ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಅಧಿಕಾರಿ ವೀರಪ್ಪ, ಬಿಇಒ ಸುರೇಂದ್ರ ಕಾಂಬಳೆ, ಎಎಸ್‌ಐ ತಾಯಪ್ಪ ಎಂ.ಎಚ್., ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಾಲಚಂದ್ರ ಸಂಗನಾಳ, ಸಿಡಿಪಿಒ ಯಲ್ಲಮ್ಮ ಹಂಡಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ಇದ್ದರು. ಸಮಾಜದ ಮುಖಂಡರಾದ ದೇವಣ್ಣ, ಬಸವರಾಜ ನಾಯಕ, ಜಗ್ಗನಗೌಡ ಪಾಟೀಲ್, ದೇವಪ್ಪ ಗಂಗನಾಳ, ಹನುಮೇಶ ಬುರ್ಲಿ, ಭೀಮನಗೌಡ ನಂದಿಹಾಳ, ದೊಡ್ಡಪ್ಪ ನಾಯಕ, ರಮೇಶ ಕೊಳ್ಳಿ, ದುರಗೇಶ ನಾಯಕ, ದೇವಪ್ಪ ಮೆಣಸಗೇರಿ ಮನೋಹರ ಗೆದಗೇರಿ, ಶರಣಗೌಡ ಪಾಟೀಲ್, ಈರಪ್ಪ ನಾಯಕ, ವೆಂಕಟೇಶ ಗೋತಗಿ, ನರಹರಿಯಪ್ಪ ಬಿಳೆಗುಡ್ಡ ಸೇರಿದಂತೆ ತಾಲೂಕಿನ ಮುಖಂಡರು ಹಾಗೂ ಯುವಕರು ಇದ್ದರು.

Share this article