ಮಾದಕವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಿ

KannadaprabhaNewsNetwork | Published : Mar 10, 2025 12:21 AM

ಸಾರಾಂಶ

ಯುವಕರ ಆರೋಗ್ಯ ಮತ್ತು ಮಾದಕ ವಸ್ತುಗಳ ವ್ಯಸನದಿಂದ ಮುಕ್ತಗೊಳಿಸಿದರೆ ಸದೃಢ ಭಾರತವನ್ನು ಕಟ್ಟಲು ಸಾಧ್ಯವಾಗುತ್ತದೆ, ನಮ್ಮ ದೇಶದ ಯುವ ಸಮೂಹವೂ ಮಾದಕ ವಸ್ತುಗಳ ದಾಸರಾಗದೆ, ಭವಿಷ್ಯ ರೂಪಿಸಿಕೊಳ್ಳುವತ್ತಾ ಮುಖ ಮಾಡಬೇಕು, ಒಂದೊಮ್ಮೆ ವ್ಯಸನಿಗಳಾದರೆ ಇಡೀ ಸಮಾಜದಿಂದ ದೂರ ಇರಬೇಕಾದ ಪರಿಸ್ಥಿತಿ ಎದುರಾಗಲಿದೆ.

ಕನ್ನಡಪ್ರಭ ವಾರ್ತೆ ಕೆಜಿಎಫ್ ಮಾದಕ ಪದಾರ್ಥಗಳ ಸಾಗಾಣಿಕೆ ಬಳಕೆ ಮತ್ತು ವ್ಯಸನ ಸಂಘಟಿತ ಅಪರಾಧ ಚಟುವಟಿಕೆಯಾಗಿ ಬೆಳೆದಿದೆ, ಧೂಮಪಾನ, ಮದ್ಯಪಾನ, ಗಾಂಜಾ, ಡ್ರಗ್ಸ್ ಸಂಬಂಧಿ ಪದಾರ್ಥಗಳ ಸೇವನೆ ಪಿಡುಗನ್ನು ತಡೆಗಟ್ಟಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಮುಜಫರ್ ಎ ಮಾಂಜರಿ ಹೇಳಿದರು.

ಕೆಜಿಎಫ್‌ನ ನಗರಸಭೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಡ್ರಗ್ಸ್ ಮುಕ್ತ ಕರ್ನಾಟಕ ಎಂಬ ಘೋಷವಾಕ್ಯದೊಂದಿಗೆ ಕೆಜಿಎಫ್ ಜಿಲ್ಲಾ ಪೊಲೀಸ್ ಮತ್ತು ಎಸ್‌ಬಿಐ ನ ಸಹಯೋಗದೊಂದಿಗೆ ೫ ಕೆ ಮ್ಯಾರಥಾನ್ ಉದ್ಘಾಟಿಸಿ ಮಾತನಾಡಿದರು.

ಜನಜಾಗೃತಿ ಮೂಡಿಸಲು ಓಟ

ಮಾದಕವಸ್ತುಗಳಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ಜನಜಾಗೃತಿ ಮೂಡಿಸಲು ಪೊಲೀಸ್ ಇಲಾಖೆಯು ಎಸ್‌ಬಿಐ ಸಹಯೋಗದೊಂದಿಗೆ ೫ ಕಿಲೋಮೀಟರ್‌ ಓಟದ ಸ್ಪರ್ಧೆಯನ್ನು ಏರ್ಪಡಿಸಿ ಸಮಾಜ ಮುಕ್ತ ಮಾದಕ ವಸ್ತುಗಳ ನಿರ್ಮೂಲನೆಗೆ ಪಣತೊಟ್ಟಿರುವುದು ಶ್ಲಾಘನೀಯ ಎಂದರು.

ಮಾದಕ ವಸ್ತುಗಳಿಂದ ದೂರವಿರಿ

ಯುವಕರ ಆರೋಗ್ಯ ಮತ್ತು ಮಾದಕ ವಸ್ತುಗಳ ವ್ಯಸನದಿಂದ ಮುಕ್ತಗೊಳಿಸಿದರೆ ಸದೃಢ ಭಾರತವನ್ನು ಕಟ್ಟಲು ಸಾಧ್ಯವಾಗುತ್ತದೆ, ನಮ್ಮ ದೇಶದ ಯುವ ಸಮೂಹವೂ ಮಾದಕ ವಸ್ತುಗಳ ದಾಸರಾಗದೆ, ಭವಿಷ್ಯ ರೂಪಿಸಿಕೊಳ್ಳುವತ್ತಾ ಮುಖ ಮಾಡಬೇಕು, ಒಂದೊಮ್ಮೆ ವ್ಯಸನಿಗಳಾದರೆ ಇಡೀ ಸಮಾಜದಿಂದ ದೂರ ಇರಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಯುವ ಸಮುದಾಯಕ್ಕೆ ಕೆಜಿಎಫ್ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಕಿವಿ ಮಾತು ಹೇಳಿದರು. ಮಾದಕ ವಸ್ತುಗಳ ವ್ಯಸನಿಯಾದರೆ, ಜೀವನದಲ್ಲಿ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ, ಇದರಿಂದ ಅಪರಾಧ ಪ್ರಕರಣಗಳು ಹೆಚ್ಚಾಗಲಿದೆ, ಜತೆಗೆ ಸಮಾಜದಲ್ಲಿನ ಸುಖ ಹಾಗೂ ಶಾಂತಿಯೂ ಹಾಳಾಗುತ್ತದೆ, ಯುವ ಸಮೂಹ ಮಾದಕ ವಸ್ತುಗಳ ವ್ಯಸನಿಯಾಗುತ್ತಿರುವುದನ್ನು ಗಮನಿಸಿದ ವಿಶ್ವ ಸಂಸ್ಥೆ ಪ್ರತಿ ವರ್ಷ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನ ಆಚರಣೆ ಮಾಡುತ್ತಿದ್ದು, ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಬಾಲಕರು, ವೃದ್ಧರೂ ಭಾಗಿ

೫ ಕೆ ಒಟವು ನಗರಸಭೆ ಮೈದಾನದಿಂದ ಸೂರಜ್‌ಮಲ್ ವೃತ್ತ, ಉರಿಗಾಂ ರೈಲ್ವೆ ಅಂಡರ್ ಪಾಸ್ ಮೂಲಕ, ಬೆಸ್ಕಾಂ ಕಚೇರಿ, ಟನೆಟ್ ವೃತ್ತದ ಮೂಲಕ ಸಲ್ಡಾನ ವೃತ್ತಿದಿಂದ ನಗರಸಭೆ ಮೈದಾನದವರೆಗೆ ೫ ಕಿ.ಮೀಟರ್ ವ್ಯಾಪ್ತಿಯಲ್ಲಿ ಮಾರ್ಕ್ ಮಾಡಲಾಗಿತ್ತು. ಓಟದ ಸ್ಪರ್ದೆಯಲ್ಲಿ ೧೦ ೭೦ ವರ್ಷದ ವೃದ್ದರೊಬ್ಬರು ಬಾಗವಹಿಸಿದ್ದು ವಿಶೇಷವಾಗಿತ್ತು, ಅಂದಾಜು ಒಂದು ಸಾವಿರ ಒಟದ ಸ್ಪರ್ಧೆಗೆ ಯುವ ಸಮೂಹ ಬಾಗವಹಿಸಿತ್ತು.

ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎನ್.ರಾಜಗೋಪಾಲಗೌಡ ಮಾತನಾಡಿ,ಯುವ ಸಮೂಹ ಮೊಬೈಲ್ ಹಾಗೂ ಟಿವಿ ದಾಸರಾಗುವ ಬದಲು, ನಿತ್ಯ ಪತ್ರಿಕೆಗಳನ್ನು ಓದಬೇಕು, ಅದು ವಿದ್ಯಾರ್ಥಿಗಳಿಗೆ ಅರಿವು ತಂದುಕೊಡುತ್ತದೆ, ಪೊಷಕರ ಬಳಿ ಮೊಬೈಲ್ ಟಿವಿ ಬದಲು ಪತ್ರಿಕೆಗಳಿಗಾಗಿ ಬೇಡಿಕೆ ಇಡಬೇಕು, ಮಾದಕ ವಸ್ತುಗಳ ಸೇವನೆಯೂ ಇಡೀ ಜೀವನವನ್ನೇ ನಾಶ ಮಾಡುತ್ತದೆ ಎಂದರು. ಸಮಾಜದ ಮೇಲೆ ದುಷ್ಪರಿಣಾಮ

ಮಾದಕ ದ್ರವ್ಯ ಬಳಕೆಯ ಅಡ್ಡ ಪರಿಣಾಮಗಳು, ಸಮಾಜದ ಮೇಲಾಗುವ ದುಷ್ಪಾರಿಣಾಮ, ಹದಗೆಡುವ ಕುಟುಂಬ ವ್ಯವಸ್ಥೆ, ಹಣಕಾಸಿನ ಸಮಸ್ಯೆ ಎಲ್ಲದರ ಅರಿವು, ಯುವ ಸಮೂಹದ ಉತ್ತಮ ಆರೋಗ್ಯಕ್ಕಾಗಿ ೫.ಕೆ ಒಟವು ಕೆಜಿಎಫ್ ಪೊಲೀಸ್ ಜಿಲ್ಲೆಯ ಯುವ ಸಮೂಹಕ್ಕೆ ಸಹಕಾರಿಯಾಗಿದೆ ಎಂದು ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ನರಸಿಂಹ ಮೂರ್ತಿ ತಿಳಿಸಿದರು.

Share this article