ಶಿಗ್ಗಾಂವಿ: ತಾಲೂಕಿನ ಭಾವೈಕ್ಯದ ತಾಣವೆಂದೇ ಖ್ಯಾತಿ ಪಡೆದ ಸಂತ ಶಿಶುವಿನಹಾಳ ಶರೀಫ ಶಿವಯೋಗಿಗಳ ಹಾಗೂ ಗುರುಗೋವಿಂದ ಭಟ್ಟರ ಮಹಾರಥೋತ್ಸವ ಸಾವಿರಾರು ಹರ್ಷೋದ್ಗಾರದ ಮಧ್ಯೆ ಭಾನುವಾರ ಸಂಜೆ ನೆರವೇರಿತು.ವಿವಿಧ ಜಿಲ್ಲೆಗಳಿಂದ ತಂಡೋಪ ತಂಡವಾಗಿ ಆಗಮಿಸಿದ್ದ ಸಾವಿರಾರು ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡರು. ಭಾನುವಾರ ಸಂಜೆ 6.08 ಗಂಟೆಗೆ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸುಮಾರು 80 ಮೀಟರ್ ದೂರದಲ್ಲಿರುವ ಪಾದಗಟ್ಟೆಯವರೆಗೆ ತೇರು ಸಾಗಿ ಪೂಜೆ ಸಲ್ಲಿಸಿ ಸ್ವಸ್ಥಾನಕ್ಕೆ ಮರಳಿತು. ರಥೋತ್ಸವ ವೇಳೆ ನೆರೆದಿದ್ದ ಭಕ್ತರು ಹರ್ಷೋದ್ಗಾರ ಕೂಗಿದರು. ಉತ್ಸವಕ್ಕೆ ನಾನಾ ವಾದ್ಯದವರು ಮೆರುಗು ನೀಡಿದರು.
ರಾಣಿಬೆನ್ನೂರು: ಆಧುನಿಕ ಜೀವನಶೈಲಿ ಹಾಗೂ ಒತ್ತಡದ ಬದುಕಿನಿಂದಾಗಿ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವಿಗೀಡಾಗುವ ಪ್ರಕರಣಗಳು ಹೆಚ್ಚಾಗಿವೆ ಎಂದು ಡಾ. ರಾಕೇಶ ತಿಳಿಸಿದರು.ನಗರದ ರೈಲ್ವೆ ಸ್ಟೇಷನ್ ರಸ್ತೆ ಬಳಿಯ ರೋಟರಿ ಸ್ಕೂಲ್‌ನಲ್ಲಿ ಸ್ಥಳೀಯ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ದಾವಣಗೆರೆ ಎಸ್‌ಎಸ್ ನಾರಾಯಣ ಸೂಪರ್ ಸ್ಪೆಷಾಲಿಟಿ ಸೆಂಟರ್ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಉಚಿತ ಹೃದಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಪ್ರತಿದಿನ ನಿಯಮಿತವಾಗಿ ವ್ಯಾಯಾಮ ಮಾಡಬೇಕು ಹಾಗೂ ದೇಹದ ತೂಕ ಹೆಚ್ಚಾಗದಂತೆ ಮುಂಜಾಗರೂಕತೆ ವಹಿಸಬೇಕು. ಹಸಿ ತರಕಾರಿ ಹಾಗೂ ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಧ್ಯಾನ, ಯೋಗ ಮಾಡುವ ಮೂಲಕ ಒತ್ತಡವನ್ನು ನಿವಾರಿಸಿಕೊಂಡು ಉತ್ತಮ ಜೀವನ ಸಾಗಿಸಬೇಕು ಎಂದರು.ರೋಟರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಗೀತಾ ದಾನಪ್ಪನವರ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಶಿಬಿರದಲ್ಲಿ 110 ಜನರು ಹೃದಯದ ತಪಾಸಣೆ ಮಾಡಿಸಿಕೊಂಡರು. ಇನ್ನರ್ ವ್ಹಿಲ್ ಸಂಸ್ಥೆ ಅಧ್ಯಕ್ಷೆ ಸಂಜನಾ ಕುರವತ್ತಿ, ಕಾರ್ಯದರ್ಶಿ ಪ್ರಮೀಳಾ ಜಂಬಗಿ, ಪುಷ್ಪಾ ಮಾಳಗಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.