ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಿ

KannadaprabhaNewsNetwork |  
Published : Aug 01, 2025, 11:45 PM IST
ಸಿಕೆಬಿ-1ನಗರ ಹೊರವಲಯದ ಕೈಗಾರಿಕಾ ಪ್ರದೇಶದ ಮೈಕ್ರೊಟೆಕ್ ಮೆಷಿನ್ಸ್ ಲಿಮಿಟೆಡ್ ಆವರಣದಲ್ಲಿ ನಡೆದ ವ್ಯಸನಮುಕ್ತ ದಿನಾಚರಣೆ ಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿದರು  | Kannada Prabha

ಸಾರಾಂಶ

ಆಧುನಿಕ ವ್ಯವಸ್ಥೆಯು ಯುವ ಜನಾಂಗದ ಮೇಲೆ ನಿಂತಿದೆ. ಅವರೇ ವ್ಯಸನಿಗಳಾದರೆ ದೇಶದ ಅರ್ಥವ್ಯವಸ್ಥೆಗೆ ತೊಂದರೆಯಾಗಲಿದೆ. ಮಾದಕ ವಸ್ತುಗಳ ಮೇಲೆ ಹಾನಿಕಾರಕ ಎಂಬ ಮಾಹಿತಿ ಇದ್ದರೂ ಯುವಜನತೆ ಅದಕ್ಕೆ ಬಲಿಯಾಗುತ್ತಿರುವುದು ವಿಷಾದನೀಯ. ಇದರಿಂದ ದೇಶದಲ್ಲಿ ಅನೇಕ ಕುಟುಂಬಗಳು ಬೀದಿಪಾಲಾಗುತ್ತಿವೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಾನವನ ಜೀವನವು ಬಹು ದೊಡ್ಡದು ಅದನ್ನು ದುಶ್ಚಚಟಗಳಿಗೆ ಅಥವಾ ವ್ಯಸನಗಳಿಗೆ ದಾಸರಾಗಿ ಯಾರೊಬ್ಬರೂ ಜೀವನವನ್ನು ಹಾಳುಮಾಡಿಕೊಳ್ಳಬಾರದು, ಮಾದಕ ಮತ್ತು ಮದ್ಯಪಾನ ಸೇರಿದಂತೆ ಇತರ ಕೆಟ್ಟ ವ್ಯಸನಗಳಿಗೆ ದಾಸರಾಗಲು ಯಾರೂ ಕಾರಣರಲ್ಲ ನೀವೇ ಕಾರಣರಾಗುವಿರಿ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.

ನಗರ ಹೊರವಲಯದ ಕೈಗಾರಿಕಾ ಪ್ರದೇಶದ ಮೈಕ್ರೊಟೆಕ್ ಮೆಷಿನ್ಸ್ ಲಿಮಿಟೆಡ್ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವ್ಯಸನಮುಕ್ತ ದಿನಾಚರಣೆ ಯನ್ನು ಉದ್ಘಾಟಿಸಿ ಮಾತನಾಡಿ, ಪ್ರಲೋಭನೆಗಳಿಗೆ, ಸಹವಾಸ ದೋಷದಿಂದ ಅನಾರೋಗ್ಯಕರ ಕುತೂಹಲಗಳಿಗೆ ಮನಸು ನೀಡಿ ವ್ಯಸನಗಳಿಗೆ ಬಲಿಯಾಗುತ್ತಿರುವುದು ಕಂಡುಬರುತ್ತಿದೆ ಎಂದರು.

ಸಮಾಜಕ್ಕೆ ಕೊಡುಗೆ ನೀಡಿ

ಅದರ ಪರಿಣಾಮವು ವಯಸ್ಸಾದಂತೆ ದೈಹಿಕ ಮತ್ತು ಮಾನಸಿಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಕೆಲವೊಮ್ಮೆ ಮಾರಣಾಂತಿಕ ಕಾಯಿಲೆಗೂ ಒಳಗಾಗುವುದು ಕಾಣುತ್ತಿದ್ದೇವೆ. ತಾಯ ಗರ್ಭದಿಂದ ಜನಿಸಿ ಭೂಮಂಡಲಕ್ಕೆ ಬರುವಾಗ ಕೇವಲ ಉಸಿರು ಇರುತ್ತದೆ. ಭೂಮಿ ಬಿಟ್ಟು ಹೋಗುವಾಗ ಉಸಿರು ಇರುವುದಿಲ್ಲ. ಅದರ ಮಧ್ಯೆ ಈ ಸಮಾಜಕ್ಕೆನೀನು ಕೊಡುಗೆ ನೀಡಿದ್ದರೆ ಮಾತ್ರ ನಿನ್ನ ಹೆಸರಿರುತ್ತದೆ ಇಲ್ಲದಿದ್ದರೆ ಬದುಕಿದ್ದು ವ್ಯರ್ಥ ಎಂದರು.

ಇಂದಿನ ಆಧುನಿಕ ವ್ಯವಸ್ಥೆಯು ಯುವ ಜನಾಂಗದ ಮೇಲೆ ನಿಂತಿದೆ. ಅವರೇ ವ್ಯಸನಿಗಳಾದರೆ ದೇಶದ ಅರ್ಥವ್ಯವಸ್ಥೆಗೆ ತೊಂದರೆಯಾಗಲಿದೆ. ಮಾದಕ ವಸ್ತುಗಳ ಮೇಲೆ ಹಾನಿಕಾರಕ ಎಂಬ ಮಾಹಿತಿ ಇದ್ದರೂ ಯುವಜನತೆ ಅದಕ್ಕೆ ಬಲಿಯಾಗುತ್ತಿರುವುದು ವಿಷಾದನೀಯ. ಇದರಿಂದ ದೇಶದಲ್ಲಿ ಅನೇಕ ಕುಟುಂಬಗಳು ಬೀದಿಪಾಲಾಗುತ್ತಿವೆ. ಸುಂದರ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಯುವಕರು ಸನ್ನದ್ಧರಾಗಬೇಕು ಎಂದರು.

ಮಾದಕ ವಸ್ತುಗಳಿಂದ ದೂರವಿರಿ

ಮಾದಕ ವಸ್ತುಗಳ ಮಾಯಾಜಾಲಕ್ಕೆ ಒಳಗಾಗದಿರಲು, ಅವುಗಳ ಕಬಂಧ ಬಾಹುಗಳ ಹಿಡಿತಕ್ಕೆ ಸಿಕ್ಕದಿರಲು ಇರುವ ಸರಳ, ಸುಲಭ ಮಾರ್ಗವೆಂದರೆ, ಅವುಗಳನ್ನು ಹತ್ತಿರ ಬರಗೊಡದೆ ದೂರದಲ್ಲೇ ಇಟ್ಟಿರುವುದು. ಎಂತಹ ಆಕರ್ಷಣೆ ಇರಲಿ, ಪರಿಸರದಿಂದ ಎಂತಹ ಒತ್ತಡ ಒತ್ತಾಸೆ ಬರಲಿ ಮಾದಕ ವಸ್ತುವನ್ನು ಸೇವಿಸುವುದಿಲ್ಲ ಸ್ನೇಹಿತರ ಅಪಹಾಸ್ಯಕ್ಕೆ ಕೋಪಕ್ಕೆ ತುತ್ತಾದರೂ ಚಿಂತೆಯಿಲ್ಲ, ಮಾದಕ ವಸ್ತುವನ್ನು ಸೇವಿಸಲು ಒತ್ತಾಯಿಸುವ ಸ್ನೇಹಿತ, ಸ್ನೇಹಿತನಲ್ಲ, ಹಿತ ಶತ್ರು ಎಂದು ವ್ಯಕ್ತಿ ತಿಳಿಯಬೇಕು ಎಂದು ಕಿವಿಮಾತು ಹೇಳಿದರು.

ಹೆಚ್ಚುತ್ತಿರುವ ವ್ಯಸನಿಗಳ ಸಂಖ್ಯೆ

ಮಾದಕ ವಸ್ತುಗಳ ಸೇವನೆ ಪ್ರತಿ ವರ್ಷ ಶೇ.15ರಷ್ಟು ಹೆಚ್ಚುತ್ತಿದೆ ಎಂದು ಹೇಳಲಾಗಿದೆ. 16 ರಿಂದ 30 ವರ್ಷ ವಯಸ್ಸಿನ ಶಾಲಾ ಕಾಲೇಜು ವಿದ್ಯಾರ್ಥಿಗಳೇ ಈ ಚಟಕ್ಕೆ ಬಲಿಯಾಗುತ್ತಿರುವವರು ಮಾದಕ ವಸ್ತುಗಳ ಮಾರಾಟ ಮಾಡುವವರಿಗೆ 10 ರಿಂದ 20 ವರ್ಷ ಶಿಕ್ಷೆ ಹಾಗೂ ಒಂದರಿಂದ ಎರಡು ಲಕ್ಷ ರೂಪಾಯಿ ದಂಡ ವಿಧಿಸುವ ಕಾನೂನು ಚಾರಿಯಲ್ಲಿದೆ. ಈಗಾಗಲೇ ಮಾದಕ ವಸ್ತುವಿನ ಮೇಲೆ ಅವಲಂಬನೆ ಅಥವಾ ಚಟ ಬೆಳೆಸಿಕೊಂಡವರಿಗೆ ವೈದ್ಯಕೀಯ ನೆರವು ಹಾಗೂ ಅವರು ಪುನರ್ಪದಸ್ಥಿತರಾಗಲು ನೈತಿಕ ಹಾಗೂ ಸಾಮಾಜಿಕ ಸಹಾನುಭೂತಿ, ಆಸರೆ, ನೆರವನ್ನು ವ್ಯವಸ್ಥೆಗೊಳಿಸೋಣ ಎಂದು ತಿಳಿಸಿದರು.

ವಿಶೇಷ ಉಪನ್ಯಾಸ:

ಈ ವೇಳೆ ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆಯ ಮನೋವೈದ್ಯ ಡಾ.ಜಿ. ಹೇಮಂತ್‌ ಕುಮಾರ್ ವಿಶೇಷ ಉಪನ್ಯಾಸವನ್ನು ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಶಿವಕುಮಾರ್ ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ, ಸಹಾಯಕ ಮಂಜುನಾಥ್, ಸರ್ವೇಕ್ಷಣಾಧಿಕಾರಿ ಡಾ.ಕೃಷ್ಣಪ್ರಸಾದ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಪ್ರಕಾಶ್, ಮೈಕ್ರೊಟೆಕ್ ಮೆಷಿನ್ಸ್ ಲಿಮಿಟೆಡ್ ನ ಕಾರ್ಖಾನೆ ಸಾಮಾನ್ಯ ನಿರ್ವಾಹಕ ವಿ.ರಾಜಕುಮಾರ್, ಕಾರ್ಖಾನೆ ನಿರ್ವಾಹಕಿ ಎನ್.ಕವಿತ,ಜಿಲ್ಲಾ ಕಾರ್ಮಿಕ ಅಧಿಕಾರಿ ಶಭನಾ ಅಜ್ಮಿ, ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''