ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ನಂತರ ಒನಕೆ ಓಬವ್ವ ವೃತ್ತದಲ್ಲಿ ಒಂದು ಗಂಟೆಗಳಿಗೂ ಹೆಚ್ಚು ಕಾಲ ಬಹಿರಂಗ ಸಭೆ ನಡೆಸಿದರು. ಸಭೆ ನಂತರ ಇದ್ದಕ್ಕಿದ್ದಂತೆ ರೊಚ್ಚಿಗೆದ್ದ ಪ್ರತಿಭಟಾಕಾರರು ಪೊಲೀಸ್ ಬ್ಯಾರಿಕೇಡ್‍ಗಳನ್ನು ತಳ್ಳಿಕೊಂಡು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ನುಗ್ಗಿ ಧಿಕ್ಕಾರಗಳನ್ನು ಕೂಗಿದರು. ಇದೇ ವೇಳೆ ಒಂದಿಷ್ಟು ಮಂದಿ ಡಿಸಿ ಕಚೇರಿ ಮೆಟ್ಟಿಲುಗಳ ಹತ್ತಿ ಚೇಂಬರ್ ವರೆಗೂ ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಇದಕ್ಕೂ ಮುನ್ನ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸೂರನಹಳ್ಳಿ ಶ್ರೀನಿವಾಸ್ ಎಪ್ಪತ್ತು ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷ ಮಾದಿಗರ ಮತಗಳನ್ನು ಪಡೆದು ವಂಚಿಸಿಕೊಂಡು ಬರುತ್ತಿದೆ. ಸುಪ್ರೀಂಕೋರ್ಟ್ ತೀರ್ಪು ನೀಡಿ ಇಂದಿಗೆ ಒಂದು ವರ್ಷಗಳು ಮುಗಿದಿದ್ದರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ಇನ್ನು ಕಾಲಹರಣ ಮಾಡುತ್ತಿದ್ದಾರೆ. ಆ.15 ರೊಳಗೆ ಒಳ ಮೀಸಲಾತಿಯನ್ನು ಕೊಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಿ ಜೈಲಿಗೆ ಹೋಗಲು ಸಿದ್ದರಿದ್ದೇವೆಂದು ಎಚ್ಚರಿಸಿದರು.ನಾಮಕಾವಸ್ಥೆ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಿದ್ದು, ಈಗ ದತ್ತಾಂಶ ಸಂಗ್ರಹಕ್ಕಾಗಿ ರಾಜ್ಯ ಸರ್ಕಾರ ನಾಗಮೋಹನ್‍ದಾಸ್ ಆಯೋಗ ರಚಿಸಿ ವರದಿಗಾಗಿ ಕಾಯುತ್ತಿದೆ. ವಿಧಾನಸಭೆ ಚುನಾವಣೆ ಪೂರ್ವದಲ್ಲಿಯೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲ ಕ್ಯಾಬಿನೆಟ್‍ನಲ್ಲೇ ಚರ್ಚಿಸಿ ಒಳ ಮೀಸಲಾತಿ ಜಾರಿಗೊಳಿಸುತ್ತೇವೆಂದು ಈಗಿನ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದರು. ಇದುವರೆವಿಗೂ ಈಡೇರಿಲ್ಲ. ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವತನಕ ನಮ್ಮ ಹೋರಾಟ ನಿಲ್ಲುವುದಿಲ್ಲವೆಂದರು.
ದಲಿತ ಮುಖಂಡ ಮಹಾಂತೇಶ್ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮತ ಪಡೆದು ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ರಚನೆಯಾಗಲು ಮಾದಿಗರು ಕಾರಣ ಎನ್ನುವುದನ್ನು ಮರೆತಿದ್ದಾರೆ. ಒಳ ಮೀಸಲಾತಿ ಜಾರಿಯಾಗದಿದ್ದರೆ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಸಿದರು.