ಆನಂದ್ ಎಂ.ಸೌದಿ
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ ಕಂಪನಿಗಳಿಂದಾಗುತ್ತಿರುವ ಪರಿಸರ ಮಾಲಿನ್ಯ ಹಾಗೂ ಜನ- ಜಲ ಜೀವನದ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ಅಂತಾರಾಷ್ಟ್ರೀಯ ಮಟ್ಟದ ಪರಿಸರ ತಜ್ಞರ ಮೂಲಕ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಯತ್ನಿಸಲಾಗುವುದು ಎಂದು ಜನಸಂಗ್ರಾಮ ಪರಿಷತ್ ಮುಂದಾಗಿದೆ.
ರಾಯಚೂರು-ಯಾದಗಿರಿ ಮಧ್ಯೆದ ಈ ಕೈಗಾರಿಕಾ ಪ್ರದೇಶದಲ್ಲಿನ ಅಪಾಯಕಾರಿ ರಾಸಾಯನಿಕ ಫಾರ್ಮಾ ಕಂಪನಿಗಳಿಂದ ಹೊರಸೂಸುತ್ತಿರುವ ವಿಷಗಾಳಿ ಹಾಗೂ ದುರ್ನಾತದಿಂದಾಗಿ, ಭವಿಷ್ಯದ ಪೀಳಿಗೆಯ ಮೇಲೆ ಆಪತ್ತು ಕಾದಿದೆ ಎಂದು ‘ಕನ್ನಡಪ್ರಭ’ದೊಡನೆ ಮಾತನಾಡಿದ ಜನಸಂಗ್ರಾಮ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಹಿರಿಯ ಸಾಮಾಜಿಕ ಹೋರಾಟಗಾರ ರಾಯಚೂರಿನ ರಾಘವೇಂದ್ರ ಕುಷ್ಟಗಿ, ಕಡೇಚೂರು ಬಾಡಿಯಾಳ ಭಾಗದ ಹತ್ತಾರು ಹಳ್ಳಿಗಳ ಜನರ ಹೋರಾಟಕ್ಕೆ ಹೆಜ್ಜೆ ಹಾಕುವ ಜನಸಂಗ್ರಾಮ ಪರಿಷತ್, ಕಾನೂನಾತ್ಮಕ ಹೋರಾಟಗಳ ಮೂಲಕ ದನಿಯಾಗಲಿದೆ ಎಂದು ಹೇಳಿದರು.ಬಳ್ಳಾರಿ ಅಕ್ರಮ ಗಣಿಗಾರಿಕೆ ಸೇರಿದಂತೆ, ವಿವಿಧ ಪರಿಸರ ಹೋರಾಟಗಳಲ್ಲಿ ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ತಂಡದಲ್ಲಿರುವ ರಾಘವೇಂದ್ರ ಕುಷ್ಟಗಿ, ಜನಸಂಗ್ರಾಮ ಪರಿಷತ್ ಮೂಲಕ ಬಳ್ಳಾರಿ ಜಿಲ್ಲೆಯ ಸಂಡೂರಿನ ವಿವಿಧೆಡೆ ಅಕ್ರಮ ಗಣಿಗಾರಿಕೆ ತಡೆಗಟ್ಟುವಲ್ಲಿನ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದವರು.
ದೇಶದ ವಿವಿಧೆಡೆ ಕೈಗಾರಿಕೆಗಳಿಂದ ಪರಿಸರದ ಮೇಲೆ ಅಡ್ಡಪರಿಣಾಮಗಳ ಸಂದರ್ಭದಲ್ಲಿ ಇಂತಹದ್ದೊಂದು ಅಧ್ಯಯನದ ಮೂಲಕ, ಸರ್ಕಾರದ ಕಣ್ತೆರೆಸಿ, ಜನಾಂದೋಲನ ರೂಪಿಸಲು ಕಾರಣವಾಗಿರುವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ತಜ್ಞರ ತಂಡವೊಂದನ್ನು ಕಡೇಚೂರು ಬಾಡಿಯಾಳ ಪ್ರದೇಶಕ್ಕೆ ಕರೆತರಲು ಮಾತುಕತೆ ನಡೆಸಿದ್ದೇವೆ. ಈ ಮೂಲಕ ಕಾನೂನಾತ್ಮಕ ದಾಖಲೆಗಳನ್ನೂ ಸಂಗ್ರಹಿಸಿ, ಕೈಗಾರಿಕೆಗಳ ಅಟ್ಟಹಾಸಕ್ಕೆ ಕೊನೆಹಾಡುವ ಪ್ರಯತ್ನ ಮಾಡುತ್ತೇವೆ. ರಾಘವೇಂದ್ರ ಕುಷ್ಟಗಿ, ಸಂಸ್ಥಾಪಕರ ಅಧ್ಯಕ್ಷ, ಜನಸಂಗ್ರಾಮ ಪರಿಷತ್, ರಾಯಚೂರು.
ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕೆ ನಾವು ಕೃಷಿ ಜಮೀನುನ್ನು ನೀಡಿದ್ದೇವೆ. ಇದಕ್ಕೆ ಪ್ರತಿಫಲವಾಗಿ ಇಂದು ನಮಗೆ ದುರ್ನಾತ ಸೇವನೆ ಮಾಡಿ ಎಂದು ಸರ್ಕಾರ ರಾಸಾಯನಿಕ ಕಂಪನಿಗಳನ್ನು ಕೊಡುಗೆಯಾಗಿ ನೀಡಿದೆ. ಅನೇಕರು ಗ್ರಾಮಗಳನ್ನು ತೊರೆದು ಪಟ್ಟಣಗಳಿಗೆ ಸೇರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮಗಳಲ್ಲಿ ಸ್ಮಶಾನಮೌನಕ್ಕೆ ಸಾಕ್ಷಿಯಾಗಲಿದೆ ಎಂಬ ಆತಂಕ ಉಂಡಾಗಿದೆ. ಓಟು ಹಾಕಲು ಮಾತ್ರ ಜನರು ಬೇಕು, ನಂತರ ಸರ್ಕಾರಕ್ಕೆ ಉದ್ಯಮಿಗಳ ಗೆಳತನ ಬೇಕಾಗಿದೆ. ಇದರಿಂದ ಇಲ್ಲಿನ ಮುಗ್ಧ ಬಡ ಜನರ ಪ್ರಾಣ ಹಿಂಡುತ್ತಿದೆ.