ಒಳಮೀಸಲಾತಿ ಕಲ್ಪಿಸಲು ಮಾದಿಗ ಸಮುದಾಯ ಆಗ್ರಹ

KannadaprabhaNewsNetwork |  
Published : Aug 01, 2025, 11:45 PM IST
ಒಳಮೀಸಲಾತಿ ಜಾರಿಗೊಳಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಮತ್ತು ಕೂಡಲೇ ಜಾರಿಗೊಳಿಸುವಂತೆ ಆಗ್ರಹಿಸಿ ಮಾದಿಗ ಸಮಾಜದ ಸಾವಿರಾರು ಜನರು ಶುಕ್ರವಾರ ಯಾದಗಿರಿಯಲ್ಲಿ ಬೃಹತ್ ಪ್ರತಿಭಟನಾ ಪಾದಯಾತ್ರೆ ನಡೆಸಿದರು. | Kannada Prabha

ಸಾರಾಂಶ

ಒಳಮೀಸಲಾತಿ ಜಾರಿಗೊಳಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಮತ್ತು ಕೂಡಲೇ ಜಾರಿಗೊಳಿಸುವಂತೆ ಆಗ್ರಹಿಸಿ ಮಾದಿಗ ಸಮಾಜದ ಜಿಲ್ಲೆಯ ಸಾವಿರಾರು ಜನರು ಶುಕ್ರವಾರ ಬೃಹತ್ ಪ್ರತಿಭಟನಾ ಪಾದಯಾತ್ರೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಒಳಮೀಸಲಾತಿ ಜಾರಿಗೊಳಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಮತ್ತು ಕೂಡಲೇ ಜಾರಿಗೊಳಿಸುವಂತೆ ಆಗ್ರಹಿಸಿ ಮಾದಿಗ ಸಮಾಜದ ಜಿಲ್ಲೆಯ ಸಾವಿರಾರು ಜನರು ಶುಕ್ರವಾರ ಬೃಹತ್ ಪ್ರತಿಭಟನಾ ಪಾದಯಾತ್ರೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ದೇವೇಂದ್ರನಾಥ ನಾದ್ ಮತ್ತು ನಗರಸಭೆ ಸದಸ್ಯ ಹಣಮಂತ ಇಟಗಿ ನೇತೃತ್ವದಲ್ಲಿ ಬೆಳಿಗ್ಗೆ ತಹಸೀಲ್ ಕಚೇರಿ ಬಳಿ ಜಮಾಯಿಸಿದ ಮಾದಿಗ ಸಮಾಜದ ಸಾವಿರಾರು ಜನರು ಜೈ ಮಾದಿಗ, ಜೈ ಜೈ ಮಾದಿಗ ಎಂಬ ಘೋಷಣೆಗಳನ್ನು ಕೂಗಿ ಒಳಮೀಸಲಾತಿಗೆ ಆಗ್ರಹಿಸಿದರು. ಅಲ್ಲಿಂದ ಹೊರಟ ಪ್ರತಿಭಟನಾ ಪಾದಯಾತ್ರೆ ಲಾಲ್‌ ಬಹದ್ದೂರ್‌ ಶಾಸ್ತ್ರಿ ಚೌಕ್‌ ಮೂಲಕ ನೇತಾಜಿ ಸುಭಾಶ್ಚಂದ್ರ ಭೋಸ್‌ ವೃತ್ತದ ಬಳಿ ಬಂದು ಜಮಾಗೊಂಡಿತು.

ಅಲ್ಲಿ‌ ಸೇರಿದ್ದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ನಾದ್ ಹಾಗೂ ಇಟಗಿ, ಕಳೆದ 30 ವರ್ಷಗಳಿಂದ ನಡೆಸಿದ ವಿವಿಧ ಹಂತದ ಹೋರಾಟಗಳ ಫಲವಾಗಿ ಸುಪ್ರೀಂ ಕೋರ್ಟ್ ಕಳೆದ ಹಲವಾರು ತಿಂಗಳ ಹಿಂದೆಯೇ ಒಳಮೀಸಲಾತಿ ಜಾರಿ ಮಾಡುವಂತೆಯೇ ಆದೇಶ ನೀಡಿದೆ. ಆದರೆ, ಸಿಎಂ ಸಿದ್ದರಾಮಯ್ಯ ಕೆಲವರ ಒತ್ತಡಕ್ಕೆ ಮಣಿದು ಇಲ್ಲದೊಂದು ನೆಪ ಹೇಳಿ ಮುಂದಕ್ಕೆ ಹಾಕುವ ಮೂಲಕ ಮಾದಿಗ ಸಮಾಜಕ್ಕೆ ಘೋರ ಅನ್ಯಾಯ ಮಾಡುತ್ತಿದ್ದಾರೆಂದು ಆರೋಪಿಸಿದರು.

ದೇಶದ ಬೇರೆ, ಬೇರೆ ರಾಜ್ಯಗಳಲ್ಲಿ ಈಗಾಗಲೇ ಒಳಮೀಸಲಾತಿ ಜಾರಿ ಮಾಡಲಾಗಿದೆ. ಅಲ್ಲಿ ಇರದ ತೊಂದರೆ ನಮ್ಮ ರಾಜ್ಯದಲ್ಲಿ ಅಂತಾದ್ದೇನು ತೊಂದರೆ ಇದೆ ಎಂದು ಅವರು ಪ್ರಶ್ನಿಸಿದರು. ಸಂವಿಧಾನಬದ್ಧ ಹಕ್ಕು ಪಡೆಯಲು ಮೂರು ದಶಕಗಳ ಕಾಲ ಹೋರಾಟವೇ ಆಗಿದೆ. ದೂರದಲ್ಲಿ ಕುಳಿತಿರುವ ಯಾರದ್ದೋ ಮಾತು ಕೇಳಿ, ಕಾಲಹರಣ ಮಾಡುವ ಮೂಲಕ ಈ ದೊಡ್ಡ ಸಮಾಜಕ್ಕೆ ಮಾಡುತ್ತಿರುವ ಅನ್ಯಾಯಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಮಾಜದ ಮುಖಂಡರಾದ ಚೆನ್ನಯ್ಯ ಮಾಳಿಕೇರಿ, ಮಲ್ಲಣ್ಣ ದಾಸನ್ನಕೇರಿ, ಭೀಮಾಶಂಕರ್ ಬಿಲ್ಲವ. ವಾಸುದೇವ ಕಟ್ಟಿಮನಿ, ಬಸವರಾಜ್ ಹಗರಟಗಿ, ದಾನಪ್ಪ ಕಟ್ಟಿಮನಿ, ತಾಯಪ್ಪ ಬಡ್ಡೇಪಲ್ಲಿ, ಸಿದ್ದಣ್ಣ ಮೇಲಿನಮನಿ, ಮಲ್ಲಿಕಾರ್ಜುನ ಜಲ್ಲಪ್ಪನೋರ್, ನಿಂಗಪ್ಪ ವಡ್ಡನಲ್ಲಿ, ಚೆನ್ನಯ್ಯ ಮ್ಯಾಳಿ ಕೇರಿ ಆಂಜೆನೇಯ ಬಬಲಾದ ಮುಂತಾದವರಿದ್ದರು.

ಜಿಲ್ಲೆಯ ಸುರಪುರ, ಶಹಾಪುರ, ಯಾದಗಿರಿ, ವಡಗೇರಾ, ಕೊಡೆಕಲ್, ಕೆಂಭಾವಿ, ಗುರುಮಠಕಲ್, ಹುಣಸಗಿ ತಾಲೂಕುಗಳಿಂದ ಅಪಾರ ಸಂಖ್ಯೆಯಲ್ಲಿ ಸಮಾಜದ ಜ‌ನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರಿಗೆ ಮುಖಂಡರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಕೂಡಲೇ ಸರ್ಕಾರಕ್ಕೆ ಕಳುಹಿಸುವುದಾಗಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ