ತನ್ನ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳಿಂದ ಯುವ ಸಂಸತ್ತು ಸಭೆ ನಡೆಯುತ್ತಿರುವುದು, ಇಂತಹ ಸಭೆಯ ಉದ್ಘಾಟನೆ ಮಾಡುತ್ತಿರುವುದು ನಿಜಕ್ಕೂ ತನ್ನ ಸೌಭಾಗ್ಯವೇ ಸರಿ ಎಂದು ಶಾಸಕ ಡಿಜಿ.ಶಾಂತನಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ತನ್ನ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳಿಂದ ಯುವ ಸಂಸತ್ತು ಸಭೆ ನಡೆಯುತ್ತಿರುವುದು, ಇಂತಹ ಸಭೆಯ ಉದ್ಘಾಟನೆ ಮಾಡುತ್ತಿರುವುದು ನಿಜಕ್ಕೂ ತನ್ನ ಸೌಭಾಗ್ಯವೇ ಸರಿ ಎಂದು ಶಾಸಕ ಡಿಜಿ.ಶಾಂತನಗೌಡ ಹೇಳಿದರು.
ತಾಲೂಕು ಆಡಳಿತ, ಉನ್ನತ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಹೊನ್ನಾಳಿ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಎಚ್.ಕಡದಕಟ್ಟೆ ಸಮೀಪ ಇರುವ ಸಾಯಿಗುರುಕುಲ ವಸತಿಯುತ ಶಾಲೆಯಲ್ಲಿ ಆಯೋಜಿಸಿದ್ದ ಯುವ ಸಂಸತ್ತು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಕಾಲೇಜು ಜೀವನ ಮುಗಿಸಿದ ನಂತರ ತಾಲೂಕನ್ನು ಪ್ರತಿನಿಧಿಸಿ ತಮ್ಮ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ನೀವೂ ಕೂಡ ಕಾರಣೀಭೂತರಾಗಬೇಕು ಎಂದು ವಿಧ್ಯಾರ್ಥಿಗಳಿಗೆ ಕರೆ ನೀಡಿದರು.
ಇತ್ತೀಚಿಗೆ ಅಧಿವೇಶನಗಳು ರಾಜಕೀಯ ತಿಕ್ಕಾಟದ ಬಗ್ಗಯೇ ಹೆಚ್ಚು ಚರ್ಚೆಯಾಗುತ್ತಿದೆಯೇ ಹೊರತು ರಾಜ್ಯದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುವ ಚರ್ಚೆಗಳು ತೀರಾ ಕಡಿಮೆ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು.
ಕೇವಲ ಸ್ವಾರ್ಥ ರಾಜಕೀಯ ಚರ್ಚೆಗಳೇ ನಡೆಯುತ್ತಿದೆಯೇ ಹೊರತು, ಅಗತ್ಯವಾಗಿ ನಡೆಯಬೇಕಿದ್ದ ಚರ್ಚೆಗಳು ನಡೆಯುವುದಿಲ್ಲ ಎಂದ ಅವರು, ರಾಜ್ಯದ 224 ಕ್ಷೇತ್ರಗಳಲ್ಲೂ ಜನತೆ ನಮ್ಮ ಕ್ಷೇತ್ರದ ಪ್ರತಿನಿಧಿಯಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಎಂಬ ನಿರೀಕ್ಷೆಯಲ್ಲಿ ಆಯ್ಕೆ ಮಾಡಿ ಕಳುಹಿಸುತ್ತಾರೆ, ಅಧಿವೇಶನ ಕರೆದಾಗ ನಮ್ಮ ನಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಬೆಳಕು ಚೆಲ್ಲಲಿಕ್ಕೆ ಒಂದು ಸುವರ್ಣ ಅವಕಾಶ, ಆದರೆ ಅಂತಹ ಸದಾವಶಕಾವನ್ನು ಅಲ್ಲಿ ಉಪಯೋಗಿಸಿಕೊಳ್ಳದೆ ಇರುವುದರಿಂದ ನಮ್ಮ ಮತದಾರರು ನಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ದ್ರೋಹ ಬಗೆದಂತಾಗುತ್ತದೆ, ವಿದ್ಯಾರ್ಥಿಗಳು ತಮ್ಮ ಕಾಲೇಜು ವ್ಯಾಸಂಗವನ್ನು ಮುಗಿಸಿ ರಾಜಕಾರಣಕ್ಕೆ ಬನ್ನಿ ಆಗ ಸ್ವಚ್ಚ ರಾಜಕಾರಣವನ್ನು ನಿಮ್ಮ ಮುಖಾಂತರ ನೋಡಬಹುದು ಎಂದರು.
ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಸಂವಿಧಾನದ ಉದ್ದೇಶವೇ ಭಾರತೀಯರೆಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವುದು, ಸಂವಿಧಾನ ನಮ್ಮ ಮೂಲಮಂತ್ರವಾಗಬೇಕು, ಆ ನಿಟ್ಟಿನಲ್ಲಿ ವಿಧ್ಯಾರ್ಥಿಗಳು ಸಂವಿಧಾನವನ್ನು ಪೂರ್ಣ ಅಧ್ಯಯನ ಮಾಡಬೇಕು ಎಂದು ವಿಧ್ಯಾರ್ಥಿಗಳಿಗೆ ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರ ಅಭಿಪ್ರಾಯಕ್ಕೂ ಮಹತ್ವ ಇದೆ, ಭಿನ್ನಾಬಿಪ್ರಾಯಗಳನ್ನು ಗೌರವಿಸುವುದರೊಂದಿಗೆ ತಾರ್ಕಿಕವಾಗಿ ತಮ್ಮ ವಿಚಾರಗಳನ್ನು ಮಂಡಿಸುವುದು ಅಗತ್ಯ ಎಂದರು.
ಪ್ರಾಸ್ತಾವಿಕವಾಗಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಧನಂಜಯ ಮಾತನಾಡಿ, ಜನತಂತ್ರ ವ್ಯವಸ್ಥೆಯಲ್ಲಿ ವಾಮ ಮಾರ್ಗದಿಂದ ಚುನಾವಣೆ ಗೆಲ್ಲುವ ಬದಲು ಗೌರವದಿಂದ ಸೋಲನ್ನು ಒಪ್ಪಿಕೊಳ್ಳುವುದು ಸೂಕ್ತ, ಇತ್ತೀಚಿನ ರಾಜಕೀಯ ಬೆಳವಣಿಗೆ ಬಗ್ಗೆ ಮಾರ್ಮಿಕವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಹೊನ್ನಾಳಿ ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ ಮಾತನಾಡಿದರು. ಹೊನ್ನಾಳಿ ತಹಸೀಲ್ದಾರ್ ಕವಿರಾಜ್, ನ್ಯಾಮತಿ ತಹಸೀಲ್ದಾರ್ ವಿಶ್ವನಾಥ್ ಮುರುಡಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮಾ, ತಾ.ಪಂ. ಇಒ ಧರಣೇಶ್, ಬಿಇಒ ನಿಂಗಪ್ಪ, ಬಿಆರ್‌ಸಿ ತಿಪ್ಪೇಶಪ್ಪ, ವಕೀಲರ ಸಂಘದ ಅಧ್ಯಕ್ಷ ಗುಡ್ಡಪ್ಪ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಕಾಲೇಜಿನ ವಿಧ್ಯಾರ್ಥಿಗಳು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.