ಬೆಳಗಾವಿ ಅಭಿವೃದ್ಧಿಗೆ ಶೆಟ್ಟರ್‌ ಆಯ್ಕೆಗೆ ಸಹಕರಿಸಿ: ಪ್ರಭಾಕರ ಕೋರೆ

KannadaprabhaNewsNetwork |  
Published : Apr 20, 2024, 01:01 AM IST
ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಪರವಾಗಿ ಡಾ.ಪ್ರಭಾಕರ ಕೋರೆ ಪ್ರಚಾರ ಮಾಡಿದರು | Kannada Prabha

ಸಾರಾಂಶ

ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಜೆಎನ್‌ಎಂಸಿ ಆವರಣದಲ್ಲಿ ಹಾಗೂ ಲಿಂಗರಾಜ ಕಾಲೇಜಿನ ಆವರಣದಲ್ಲಿ ಸಿಬ್ಬಂದಿಯನ್ನು ಭೇಟಿಯಾಗಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಪರವಾಗಿ ರಾಜ್ಯಸಭೆ ಮಾಜಿ ಸದಸ್ಯ, ಕೆಎಲ್‌ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮತಯಾಚನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಭಾರತವನ್ನು ಜಗತ್ತು ನೋಡುವಂತೆ ಮಾಡಿದ್ದರೆ ಅದು ಪ್ರಧಾನಿ ನರೇಂದ್ರ ಮೋದಿಜಿಯವರು. ಅವರ ದಿಟ್ಟ ಹಾಗೂ ಪ್ರಖರವಾದ ಯೋಜನೆಗಳು, ದೇಶದ ಆರ್ಥಿಕತೆ ಬದಲಾಯಿಸಿದೆ. ಭಾರತ ವಿಶ್ವ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದೆ. ಅಂತಹ ಪ್ರಧಾನಿ ದೇಶಕ್ಕೆ ಮತ್ತೊಮ್ಮೆ ಬೇಕು. ಅವರ ಆಡಳಿತದಲ್ಲಿ ಬೆಳಗಾವಿಯಿಂದ ಜಗದೀಶ ಶೆಟ್ಟರ್‌ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿ ಕಳುಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಜೆಎನ್‌ಎಂಸಿ ಆವರಣದ ಸಿಬ್ಬಂದಿ ಹಾಗೂ ಲಿಂಗರಾಜ ಕಾಲೇಜಿನ ಆವರಣದಲ್ಲಿ ಸಿಬ್ಬಂದಿಯನ್ನು ಭೇಟಿಯಾಗಿ ಶೆಟ್ಟರ್‌ ಪರವಾಗಿ ಮತಯಾಚಿಸಿದ ಅವರು, ನಮ್ಮ ವೈರಿ ರಾಷ್ಟ್ರಗಳು ಭಾರತವನ್ನು ಕಂಡು ಹೆದರುತ್ತಿವೆ. ಮೊದಲಿನ ಪರಿಸ್ಥಿತಿ ಇಂದಿಲ್ಲ. ಭಾರತ ತಲೆಎತ್ತಿ ನಿಂತಿದೆ. ಕಳೆದ ಒಂದು ದಶಕದಲ್ಲಿ ವಿಶ್ವದ ಪ್ರಬಲ ರಾಷ್ಟ್ರವಾಗಿ ರೂಪುಗೊಂಡಿದೆ. ಇದೆಲ್ಲ ಸಾಧ್ಯವಾದದ್ದು ನರೇಂದ್ರ ಮೋದಿಜಿಯವರಿಂದ. ಪ್ರಜ್ಞಾವಂತರಾದ ನಾವು ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಜಗದೀಶ ಶೆಟ್ಟರ್‌ಗೆ ಬೆಂಬಲಿಸುವಂತೆ ಮನವಿ ಮಾಡಿದರು.

ಕೆಎಲ್‌ಇ ನೂರು ವರ್ಷಗಳ ತನ್ನ ಚರಿತ್ರೆಯಲ್ಲಿ ಘಟಾನುಘಟಿ ರಾಜಕಾರಣಿಗಳನ್ನು ಬೆಳೆಸಿದೆ. ಸಪ್ತರ್ಷಿಗಳು ಕೂಡ ಶಿಕ್ಷಕ ಮತಕ್ಷೇತ್ರವನ್ನು ಪ್ರತಿನಿಧಿಸಿ ಆರಿಸಿ ಬಂದಿದ್ದರು. ಇಂದು ನಮ್ಮ ಸಂಸ್ಥೆಯ ಹಳೆಯ ವಿದ್ಯಾರ್ಥಿಯಾಗಿ ರಾಜ್ಯದ ಮುಖ್ಯಮಂತ್ರಿ ಹುದ್ದೆ ನಿರ್ವಹಿಸಿದ್ದ ಶೆಟ್ಟರ್‌ ಅವರು ಸಂಸ್ಥೆ ಹಾಗೂ ನಾಡಿಗೆ ಬಹುಮೌಲಿಕ ಕೊಡುಗೆ ನೀಡಿದ್ದಾರೆ. ಅವರ ಅಭಿವೃದ್ಧಿ ಕೆಲಸ ಕಾರ್ಯಗಳು ಇಂದಿಗೂ ಮಹತ್ವಪೂರ್ಣವೆನಿಸಿವೆ. ಅವರು ನಮ್ಮವರು, ಎಲ್ಲಕ್ಕೂ ಮುಖ್ಯವಾಗಿ ಬೆಳಗಾವಿಯ ಅಭಿವೃದ್ಧಿಗಾಗಿ ದಶಕಗಳಿಂದ ಕೈಜೋಡಿಸುತ್ತ ಬಂದಿದ್ದಾರೆ. ಮೋದಿಜಿಯವರ ಸಮರ್ಥ ನೇತೃತ್ವದಲ್ಲಿ ಜರುಗಲಿರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿದರೆ ದೇಶ ಚಿತ್ರಣ ಬದಲಾಗುವುದರಲ್ಲಿ ಸಂದೇಹವಿಲ್ಲ.

ಇದೇ ಸಂದರ್ಭದಲ್ಲಿ ಬೆಳಗಾವಿ ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಜಗದೀಶ ಶೆಟ್ಟರ ಮಾತನಾಡಿ, ನಾನು ಕೂಡ ಕೆಎಲ್‌ಇ ವಿದ್ಯಾರ್ಥಿಯಾಗಿದ್ದು, ಬೆಳಗಾವಿಯ ಸಮಗ್ರ ಅಭಿವೃದ್ಧಿಗೆ ಶ್ರಮವಹಿಸುತ್ತೇನೆ. ಬೆಳಗಾವಿಯೂ ಕೂಡ ನನಗೆ ಅಷ್ಟೇ ಮುಖ್ಯ. ಇದರ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ದಕ್ಷಿಣ ಕರ್ನಾಟಕ ಸಾಕಷ್ಟು ಅಭಿವೃದ್ಧಿಯಾಗಿದೆ. ಅಧಿವೇಶನಕ್ಕೆ ಕೆಎಲ್‌ಇ ಕೊಡುಗೆ ಅನನ್ಯ. ಬೆಳಗಾವಿ ಅಭಿವೃದ್ಧಿ ನನ್ನ ಅಭಿಲಾಷೆ ಎಂದು ಹೇಳಿದರು.

ಸುವರ್ಣಸೌಧಕ್ಕೆ ಅನುಮತಿ ನೀಡಿ ಭೂಮಿಪೂಜೆ ಮಾಡಿದ್ದು ನಾನೇ. ಬೆಳಗಾವಿ ಜೊತೆಗೆ ನನ್ನದು ಅವಿನಾಭಾವ ಸಂಬಂಧ. ನಾನು ಹೊರಗಿನವ ಎನ್ನಬೇಡಿ. ನನಗೂ ಅವಕಾಶ ಕೊಡಿ. ಬೆಳಗಾವಿಗೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬೆಳಗಾವಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವದು, ರೈಲ್ವೆ ಹಾಗೂ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಹೇಳಿದರು.

ಪ್ರಧಾನಿ ಮೋದಿ ಅವರ ಮುಂದಾಳತ್ವದಲ್ಲಿ ಭಾರತ ವಿಶ್ಚದಲ್ಲಿಯೇ ಪ್ರಮುಖ ರಾಷ್ಟ್ರವಾಗಿ ಆರ್ಥಿಕತೆಯಲ್ಲಿ ಸಬಲತೆ ಹೊಂದುತ್ತಿದೆ. ಅವರ ಯೋಜನೆಗಳು ದೇಶಕ್ಕೆ ಭದ್ರವಾದ ಬುನಾದಿ ಹಾಕಿವೆ. ಅವರ ಹೆಸರು ಜನಮಾಸದಲ್ಲಿ ಬೆರೆತುಹೋಗಿದೆ. ಭ್ರಷ್ಟಾಚಾರರಹಿತವಾಗಿ ಆಡಳಿತ ನಡೆಸಿದ್ದಾರೆ. ಒಂದೇ ಒಂದು ಕಪ್ಪುಚುಕ್ಕೆ ಇಲ್ಲದ ವ್ಯಕ್ತಿತ್ವ ಅವರದು. ಅಂತಹ ನಾಯಕನ ಸಾರಥ್ಯದಲ್ಲಿ ಭಾರತೀಯ ಜನತಾ ಪಕ್ಷ ಮುನ್ನಡೆಯುತ್ತಿದೆ. ನಾನೂ ಕೂಡ ಕೆಎಲ್‌ಇ ಸಂಸ್ಥೆಯ ಹಳೆಯ ವಿದ್ಯಾರ್ಥಿ, ಕೆಎಲ್‌ಇ ಸಂಸ್ಥೆಯು ಅನೇಕ ರಾಷ್ಟ್ರನಾಯಕರನ್ನು ಬೆಳೆಸಿದೆ. ನಿಮ್ಮೆಲ್ಲ ಆಶೀರ್ವಾದ ನನ್ನ ಮೇಲೆ ಇರಲೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೆಎಲ್‌ಇ ನಿರ್ದೇಶಕರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಕೆಎಲ್‌ಇ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ ಉಪಸ್ಥಿತರಿದ್ದರು. ಕೆಎಲ್‌ಇ ಸಿಬ್ಬಂದಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ : ಲಕ್ಷ್ಮೀ
ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!