ಕನ್ನಡಪ್ರಭ ವಾರ್ತೆ ಬೆಂಗಳೂರು

ಮನೆ ಖರ್ಚಿಗೆಂದು ಐದು ಸಾವಿರ ರುಪಾಯಿ ಕೇಳಿದಕ್ಕೆ 65 ವರ್ಷದ ಪತ್ನಿಗೆ ಹೊಡೆದು, ಬೈದ 73 ವರ್ಷದ ಪತಿಯ ವಿರುದ್ಧದ ದಾಖಲಾಗಿರುವ ಕ್ರಿಮಿನಲ್ ಪ್ರಕರಣಕ್ಕೆ ತಡೆಯಾಜ್ಞೆ ನೀಡಿರುವ ಹೈಕೋರ್ಟ್, ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತಗಾಗಿ ಪತ್ನಿಗೆ ಮಾಸಿಕ 10 ಸಾವಿರ ರು‌. ನೀಡಬೇಕು ಎಂದು ಪತಿಗೆ ಕಟ್ಟುನಿಟ್ಟಿನ‌ ನಿರ್ದೇಶನ ನೀಡಿದೆ.

ಪತ್ನಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ತನ್ನ ವಿರುದ್ಧದ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸುವಂತೆ ಕೋರಿ ಬಸವೇಶ್ವರ ನಗರದ ನಿವಾಸಿ 73 ವರ್ಷದ ವೃದ್ಧ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಮಧ್ಯಂತರ ಆದೇಶ ಮಾಡಿದೆ.

ಇದಕ್ಕೂ ಮುನ್ನ ವೃದ್ಧ ಪತಿಯ ಪರ ವಕೀಲರು ಹಾಜರಾಗಿ , ಅರ್ಜಿದಾರು ಹಾಗೂ ದೂರುದಾರರು ವಯೋವೃದ್ಧ ದಂಪತಿ. ಅರ್ಜಿದಾರ ಪತಿಗೆ 73 ವರ್ಷ. ಪತ್ನಿಗೆ 65 ವರ್ಷ. ದಂಪತಿಗೆ ವಯಸ್ಕ ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳಿದ್ದಾರೆ. ಮನೆ ಖರ್ಚಿಗೆಂದು ಹಣ ಕೇಳಿದರು ಎಂಬ ಕಾರಣಕ್ಕೆ ಪತಿ - ಪತ್ನಿ ನಡುವೆ ಬಾಯಿ ಮಾತಿನಲ್ಲಿ ಗಲಾಟೆ ಆಗಿದೆ ಎಂದರು.

ಅದಾಗಲೇ ಅರ್ಜಿ ಹಾಗೂ ಪತ್ನಿ ದಾಖಲಿಸಿದ್ದ ದೂರಿನ ಅಂಶಗಳನ್ನು ಓದಿದ್ದ ನ್ಯಾಯಮೂರ್ತಿಗಳು, ಮನೆ ಖರ್ಚಿಗೆ ಹಣ ಕೇಳಿದರೆ, 73 ವರ್ಷದಲ್ಲೂ ಅರ್ಜಿದಾರರು ಪತ್ನಿಗೆ ಬೈಯ್ದು ಹೊಡೆಯುತ್ತಾರೆಯೇ? ಹೊಡೆಯೋದು ಹಾಗೂ ಬೈಯ್ಯುವುದಕ್ಕೆ ವಯಸ್ಸಿನ ಮಿತಿ ಇಲ್ಲವಲ್ಲ ಎಂದು ಹೇಳುತ್ತಿರಾ 65 ವರ್ಷದ ಪತ್ನಿಯು ಪತಿಯ ವಿರುದ್ಧ ಹಲ್ಲೆ ಮಾಡಿ ಕಿರುಕುಳ ನೀಡಿದ ಆರೋಪ ಮಾಡಿದ್ದಾರೆ. ಪತಿ ಈ ವಯಸ್ಸಿನಲ್ಲೇ ಈ ರೀತಿಯಲ್ಲಿ ವರ್ತಿಸುವುದಾದರೆ ಹಿಂದೆಲ್ಲಾ ಇನ್ನು ಯಾವ ಮಾದರಿಯಲ್ಲಿ ನಡೆದುಕೊಂಡಿರಬೇಕು ಎಂದು ತೀಕ್ಷ್ಣವಾಗಿ ಕೇಳಿದರು.


ಪತಿಯ ಪರ ವಕೀಲರು, ಪ್ರಕರಣ ಸಂಧಾನ ಮೂಲಕ ಇತ್ಯರ್ಥವಾಗುತ್ತದೆ. ಪತಿ-ಪತ್ನಿ ಒಟ್ಟಿಗೆ ವಾಸವಿದ್ದಾರೆ. ಚೆನ್ನಾಗಿಯೇ ಬದುಕುತ್ತಿದ್ದಾರೆ ಎಂದರು. ಆಗ ನ್ಯಾಯಪೀಠ ನ್ಯಾಯಮೂರ್ತಿಗಳು, ಮನೆ ಖರ್ಚಿಗೆಂದು ಪತ್ನಿ ಎಷ್ಟು ಅರ್ಜಿದಾರರ ಬಳಿ ಎಷ್ಟು ಕೇಳಿದ್ದರು ಎಂದು ಪ್ರಶ್ನಿಸಿದರು.

ನಂತರ ಐದು ಸಾವಿರ ರುಪಾಯಿ ಎಂದು ಅರ್ಜಿದಾರ ಪರ ವಕೀಲರು ಉತ್ತರಿಸಿದ್ದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಪತಿಯ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಬೇಕಾದರೆ, ಪತ್ನಿ ಕೇಳಿದ ಮೊತ್ತಕ್ಕಿಂತ ಹೆಚ್ಚು ಹಣ ಕೊಡುತ್ತೀರಾ ಎಂದು ಕೇಳಿದರು.

ಅದಕ್ಕೆ ಪತಿಯ ಪರ ವಕೀಲರು ಒಪ್ಪಿದ ಹಿನ್ನೆಲೆಯಲ್ಲಿ ಅರ್ಜಿಯ‌ ಮುಂದಿನ ವಿಚಾರಣೆವರೆಗೆ ಅರ್ಜಿದಾರರು ತಮ್ಮ ‌ಪತ್ನಿಗೆ ಮಾಸಿಕ‌ 10 ಸಾವಿರ ರುಪಾಯಿ ಪಾವತಿಸಬೇಕು ಎಂದು ಸೂಚಿಸಿದ ನ್ಯಾಯಮೂರ್ತಿಗಳು, ಅರ್ಜಿದಾರ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿ ವಿಚಾರಣೆ ಮುಂದೂಡಿದರು.