ಕನ್ನಡಪ್ರಭ ವಾರ್ತೆ ಬೆಂಗಳೂರು
ಅಡುಗೆ ಅನಿಲ ಸೋರಿಕೆಯಿಂದಾಗಿ ಪಿ.ಜಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಪಶ್ಚಿಮ ಬಂಗಾಳ ಮೂಲದ 9 ಮಂದಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೆಬ್ಬಗೋಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಬೊಮ್ಮಸಂದ್ರದಲ್ಲಿ ಗುರುವಾರ ಬೆಳಗ್ಗೆ 6.30ಕ್ಕೆ ಈ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ದಿಬಾಸಿಸ್ ಹಲ್ದರ್, ದಿಬಾಸಿಸ್ ಮಲಿಕ್, ಸುಬ್ರತಾ ಬೇರಾ, ರೆಹಮಾನ್, ಸೌರವ್ ಚೌಧರಿ, ಸನತ್ ರೈ, ಸೈಯದ್ ಅಲ್ಲಾವುದ್ದಿನ್, ದಿಸ್‌ವಾನಬ್ ಸೇರಿ 9 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 6 ಮಂದಿ ಕಾರ್ಮಿಕರಿಗೆ ಶೇ.60 ರಷ್ಟು ಸುಟ್ಟು ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ 30-40 ವಯಸ್ಸಿನವರಾಗಿದ್ದಾರೆ.
ಗುರುವಾರ ಬೆಳಗ್ಗೆ 6.30 ರ ಸುಮಾರಿಗೆ ಬೊಮ್ಮಸಂದ್ರದಲ್ಲಿ ಈ ಅವಘಡ ನಡೆದಿದೆ. ಪಶ್ಚಿಮ ಬಂಗಾಳ ಮೂಲದ 9 ಮಂದಿ ಕಾರ್ಮಿಕರು ಒಂದು ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದು, ಎಲ್ಲರೂ ಹೆಬ್ಬಗೋಡಿಯಲ್ಲಿರುವ ಎ.ಸಿ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬೊಮ್ಮಸಂದ್ರದಲ್ಲಿರುವ ಶ್ರೀಸಾಯಿ ಕಂಫರ್ಟ್ಸ್ ಎಂಬ ಪಿಜಿಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಮೂರು ಅಂತಸ್ತಿನ ಪಿಜಿಯಲ್ಲಿ 2ನೇ ಅಂತಸ್ತಿನಲ್ಲಿರುವ ಕೋಣೆಗಳಲ್ಲಿ ವಾಸವಾಗಿದ್ದರು. ಬುಧವಾರ ರಾತ್ರಿ ಕೆಲಸ ಮುಗಿಸಿಕೊಂಡು ಪಿ.ಜಿಗೆ ಬಂದ ಯುವಕರು, ಊಟ ಮಾಡಿ ಕೋಣೆಯ ಕಿಟಕಿಗಳನ್ನು ಹಾಕಿ ಮಲಗಿದ್ದಾರೆ. ತಡರಾತ್ರಿ ಕೋಣೆಯೊಂದರಲ್ಲಿ ಅಡುಗೆ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿದೆ. ಮುಂಜಾನೆ 6 ಗಂಟೆ ಸುಮಾರಿಗೆ ಕೆಟ್ಟ ವಾಸನೆಯಿಂದ ಎಚ್ಚರಗೊಂಡ ಕಾರ್ಮಿಕನೊಬ್ಬ, ತನ್ನ ಕೊಠಡಿಯ ಲೈಟ್ ಆನ್ ಮಾಡಿದ್ದಾನೆ. ಪರಿಣಾಮ ಗ್ಯಾಸ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ 2ನೇ ಮಹಡಿಯಲ್ಲಿದ್ದ 9 ಕೋಣೆಗಳು ಸಂಪೂರ್ಣವಾಗಿ ಬೆಂಕಿ ಹೊತ್ತಿಕೊಂಡಿದ್ದು, ಕೋಣೆಗಳಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಕಟ್ಟಡದ ಬಾಗಿಲುಗಳು ಮತ್ತು ಕಿಟಕಿಗಳು ಪುಡಿಯಾಗಿವೆ. ಇದರ ಪರಿಣಾಮ ಬೇರೆ ಬೇರೆ ಕೋಣೆಗಳಲ್ಲಿದ್ದ 9 ಮಂದಿ ಗಾಯಗೊಂಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ, 9 ಮಂದಿ ಸುಟ್ಟು ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ರಮೇಶ್ ಬಾನೊತ್, ಡಿಸಿಪಿ ನಾರಾಯಣ್, ಹೆಬ್ಬಗೋಡಿ ಠಾಣೆ ಇನ್‌ಸ್ಪೆಕ್ಟರ್ ಸೋಮಶೇಖರ್ ಮತ್ತು ತಂಡ ಭೇಟಿ ನೀಡಿ ಪರಿಶೀಲಿಸಿದೆ. ಈ ಸಂಬಂಧ ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.