ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗೆ ಸಹಕರಿಸಿ

KannadaprabhaNewsNetwork |  
Published : Jun 13, 2025, 02:11 AM ISTUpdated : Jun 13, 2025, 02:12 AM IST
ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ | Kannada Prabha

ಸಾರಾಂಶ

ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನ ಅಂಗವಾಗಿ ನಗರದ ಚಾಮರಾಜೇಶ್ವರ ದೇವಾಲಯದಿಂದ ಏರ್ಪಡಿಸಲಾಗಿದ್ದ ಜಾಗೃತಿ ಜಾಥಾಗೆ ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶರಾದ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ. ಪ್ರಭಾವತಿ ಅವರು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ದತಿ ಸಂಪೂರ್ಣ ನಿರ್ಮೂಲನೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಸೇರಿದಂತೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷೆನ್ಸ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಜಿ.ಪ್ರಭಾವತಿ ಅವರು ತಿಳಿಸಿದರು.ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ’ಪ್ರಗತಿ ಸ್ಪಷ್ಟವಾಗಿದೆ, ಆದರೆ ಇನ್ನೂ ಹೆಚ್ಚಿನದನ್ನು ಮಾಡಬೇಕಿದೆ, ಪ್ರಯತ್ನಗಳನ್ನು ವೇಗ ಗೊಳಿಸೋಣ’ ಘೋಷವಾಕ್ಯದೊಂದಿಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಡತನದಲ್ಲಿರುವ ಮಕ್ಕಳು ಹೆಚ್ಚಾಗಿ ಬಾಲಕಾರ್ಮಿಕ ಪದ್ದತಿಗೆ ತುತ್ತಾಗುತ್ತಿದ್ದು, ಮಕ್ಕಳನ್ನು ಬಾಲಕಾರ್ಮಿಕ ಪದ್ದತಿಗೆ ದೂಡದೇ ಶಾಲೆಗೆ ಕಳುಹಿಸಿ ಉತ್ತಮ ಶಿಕ್ಷಣ ನೀಡುವಂತೆ ಪೋಷಕರಿಗೆ ಅರಿವು ಮೂಡಿಸಬೇಕು. ಶಿಕ್ಷಣದಿಂದ ವಂಚಿತರಾಗಿ ಬಾಲಕಾರ್ಮಿಕರಾಗಿ ಕೆಲಸ ಮಾಡುವ ಮಕ್ಕಳನ್ನು ಗುರುತಿಸಿ ಪುನರ್ವಸತಿ ಕಲ್ಪಿಸುವುದರ ಮೂಲಕ ಕಾರ್ಮಿಕ ಇಲಾಖೆಯು ಸಮಾಜಮುಖಿ ಕೆಲಸ ಮಾಡುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದರು.

ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಮಾತನಾಡಿ, ಕೆಲ ಪೋಷಕರು ಬಡತನ, ಇತರೆ ನೆಪವೊಡ್ಡಿ ಮಕ್ಕಳನ್ನು ದುಡಿಮೆಗೆ ದೂಡುತ್ತಿರುವುದರಿಂದ ಮಕ್ಕಳ ಭವಿಷ್ಯದ ಜೊತೆಗೆ ದೇಶದ ಬೆಳವಣಿಗೆ ಕುಂಠಿತವಾಗಲಿದೆ. ಆರ್ಥಿಕ ಉದ್ದೇಶಕ್ಕಾಗಿ ದುಡಿಯುತ್ತಿರುವ ಮಕ್ಕಳನ್ನು ಗುರುತಿಸಿ ಇಲಾಖೆಯು ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ. ಶಿಕ್ಷಣಕ್ಕೆ ಸಮಾಜವನ್ನು ಬದಲಾಯಿಸುವ ಶಕ್ತಿ ಇರುವುದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಸುಸ್ಥಿರ ಸಮಾಜ ನಿರ್ಮಾಣವಾಗಬೇಕು ಎಂದರು.

ಮುಖ್ಯ ಭಾಷಣ ಮಾಡಿದ ಬೆಂಗಳೂರಿನ ಬಚ್ಪನ್ ಬಚಾವೂ ಆಂದೋಲನದ ರಾಜ್ಯ ಸಂಯೋಜಕರಾದ ಬಿನು ವರ್ಗೀಸ್, ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಇಂಟರ್ ನ್ಯಾಷನಲ್ ಲೇಬರ್ ಆರ್ಗನೈಜೇಷನ್ ವರದಿ ಪ್ರಕಾರ ವಿಶ್ವದಲ್ಲಿ ೧೬೦ ಮಿಲಿಯನ್ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದು, ಈ ಪೈಕಿ ೬೦ ಮಿಲಿಯನ್‌ಗೂ ಅಧಿಕ ಹೆಣ್ಣು ಮಕ್ಕಳಿದ್ದಾರೆ. ಬಾಲ ಕಾರ್ಮಿಕ ಪದ್ದತಿಯಿಂದ ವಿಶ್ವವನ್ನು ಮುಕ್ತಗೊಳಿಸಲು ವಿವಿಧ ಇಲಾಖೆಗಳ ಸಹಕಾರ ಪ್ರಮುಖವಾಗಿದೆ. ಪ್ರತಿಯೊಬ್ಬ ಮಕ್ಕಳಿಗೂ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಅಭಿವೃದ್ಧಿ ಹಕ್ಕು ಹಾಗೂ ಭಾಗವಹಿಸುವ ಹಕ್ಕು ಇದೆ ಎಂದರು.

ಬಾಲಕಾರ್ಮಿಕ ಪದ್ದತಿ ತಡೆಗೆ ಕಾರ್ಮಿಕ ಇಲಾಖೆಯು ಕಂದಾಯ, ಕಾನೂನು, ಪೊಲೀಸ್ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಬೇಕು. ಪ್ರತಿಯೊಂದು ಗ್ರಾಮ, ಗ್ರಾಮ ಪಂಚಾಯಿತಿ, ಹೋಬಳಿ, ತಾಲೂಕು ಹಾಗೂ ಜಿಲ್ಲಾಕೇಂದ್ರಗಳಲ್ಲಿ ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಕುರಿತು ವ್ಯಾಪಕ ಜಾಗೃತಿ ಕಾರ್ಯಕ್ರ್ರಮ ಆಯೋಜಿಸಬೇಕು. ಯಾವುದೇ ಹೋಟೆಲ್, ಗ್ಯಾರೇಜ್‌ಗಳಲ್ಲಿ ಬಾಲಕಾರ್ಮಿಕರು ಕಂಡುಬಂದರೆwww.pencil.gov.inಪೊರ್ಟಲ್ ಮೂಲಕ ದೂರುಗಳನ್ನು ದಾಖಲಿಸಬಹುದು. ಇದಕ್ಕೆ ಪೂರಕವಾಗಿ ಜಿಲ್ಲಾಡಳಿತ ಕ್ರಮ ವಹಿಸಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನ್ಯಾ.ಈಶ್ವರ್ ಮಾತನಾಡಿ, ಮಕ್ಕಳು ಆಡುವ ವಯಸ್ಸಿನಲ್ಲಿ ದುಡಿಮೆಗೆ ದೂಡಬಾರದು. ೧೪ ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಪ್ರತಿ ಮಕ್ಕಳಿಗೂ, ನಾಗರಿಕರಿಗೂ ಬದುಕುವ ಹಕ್ಕಿದೆ. ಮಕ್ಕಳಿಂದ ದುಡಿಸಿಕೊಳ್ಳುವ ಮಾಲೀಕರು, ಪೋಷಕರು ಶಿಕ್ಷೆಗೆ ಮತ್ತು ದಂಡಕ್ಕೆ ಗುರಿಯಾಗಲಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಬೇಕು. ಸತ್ಪ್ರಜೆಗಳಾಗಿ ರೂಪಿಸಬೇಕು ಎಂದರು.

ಇದೇ ವೇಳೆ ವಿಶ್ವ ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಬಗ್ಗೆ ಏರ್ಪಡಿಸಲಾಗಿದ್ದ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಮಿಕ ಇಲಾಖೆಯಿಂದ ಬಾಲಕಾರ್ಮಿಕ ಪದ್ದತಿಯಿಂದ ಮುಕ್ತಗೊಳಿಸಿ ಪುನರ್ವಸತಿ ಕಲ್ಪಿಸಿದ ಮಕ್ಕಳನ್ನು ಸನ್ಮಾನಿಸಲಾಯಿತು. ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಕಾರ್ಮಿಕ ಇಲಾಖೆಯು ದತ್ತು ಪಡೆದಿದ್ದ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಅಪರ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್, ಶಶಿಧರ್, ಜಿಪಂ ಉಪ ಕಾರ್ಯದರ್ಶಿ ಶೃತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್. ಚಿದಂಬರ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟಗೌರಮ್ಮ, ಜಿಲ್ಲಾ ಕಾರ್ಮಿಕ ಅಧಿಕಾರಿ ಡಾ.ಎಂ ಸವಿತ, ಬಾಲಕಾರ್ಮಿಕ ಸೊಸೈಟಿಯ ಯೋಜನಾ ನಿರ್ದೇಶಕ ಎಂ.ಮಹೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಅಂಗವಾಗಿ ಚಾಮರಾಜೇಶ್ವರ ದೇವಾಲಯದಿಂದ ಏರ್ಪಡಿಸಲಾಗಿದ್ದ ಜಾಗೃತಿ ಜಾಥಾಗೆ ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಜಿ.ಪ್ರಭಾವತಿ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ