ನವಲಗುಂದ: ತಾಲೂಕಿನಾದ್ಯಂತ ಬುಧವಾರ ಸುರಿದ ಮಳೆಯಿಂದಾಗಿ ಹಲವಾರು ಗ್ರಾಮಗಳ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಹೊಲಗಳಲ್ಲಿ ಒಡ್ಡುಗಳು ಒಡೆದು ಬಿತ್ತಿದ ಬೆಳೆಗಳೂ ನೀರು ಪಾಲಾಗಿವೆ.
ಯಮನೂರು ಗ್ರಾಮದಲ್ಲಿನ ಕೆರೆ ತುಂಬಿ ಹರಿದಿದ್ದರಿಂದ ಗ್ರಾಮದ ಹಲವಾರು ಮನೆಗಳು ನೀರಲ್ಲಿ ಮುಳುಗಿದ್ದವು, ತಾಲೂಕಿನ ತಿರ್ಲಾಪುರ ಗ್ರಾಮದಲ್ಲಿಯೂ ಮಳೆ ನೀರಿನಿಂದ ಕೆರೆ ತುಂಬಿ ಗ್ರಾಮಕ್ಕೆ ನೀರು ನುಗ್ಗಿದೆ. ಅರೆಕುರಟ್ಟಿ ಗ್ರಾಮದಲ್ಲಿಯೂ ಬೆಣ್ಣಿಹಳ್ಳದ ನೆರೆಯ ನೀರು ಗ್ರಾಮಕ್ಕೆ ನುಗ್ಗಿದ್ದರಿಂದ ಮನೆಯಲ್ಲಿದ್ದ ದವಸ- ಧಾನ್ಯಗಳು ನೀರು ಪಾಲಾಗಿವೆ.
ಬಳ್ಳೂರು ಗ್ರಾಮದಲ್ಲೂ ಮಳೆಯ ನೀರಿನಿಂದಾಗಿ ಶಾಲಾ ಆವರಣ ತುಂಬಿ ತುಳುಕುತ್ತಿದೆ, ಜಾವೂರು ಹಾಗೂ ಹನಸಿ ಗ್ರಾಮಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದೆ. ತಾಲೂಕಿನ ಗುಮ್ಮಗೋಳ, ಬ್ಯಾಲ್ಯಾಳ, ಮೊರಬ, ಅಳಗವಾಡಿ, ಹಾಲಕುಸುಗಲ್, ಸೊಟಕನಾಳ, ಬೋಗಾನೂರ ಹಾಗೂ ದಾಟನಾಳ ಗ್ರಾಮದಲ್ಲಿ ಒಟ್ಟು 23 ಮನೆಗಳು ಭಾಗಶಃ ಕುಸಿದು ಬಿದ್ದರೆ, 48 ಮನೆಗಳಿಗೆ ಮಳೆಯ ನೀರು ನುಗ್ಗಿ ಹಾನಿಯಾಗಿದೆ.ಪಟ್ಟಣದ ತಗ್ಗು ಪ್ರದೇಶಗಳಲ್ಲಿ ಹೆಚ್ಚಿನ ನೀರು ಹರಿದಿದ್ದರಿಂದ ಹೆಸ್ಕಾಂ ಉಪವಿಭಾಗ ಕಚೇರಿ, ಎಲ್.ಐ.ಸಿ ಕಚೇರಿಗಳ ಆವರಣ ನೀರಿನಿಂದ ತುಂಬಿದೆ. ಬೆಣಿಹಳ್ಳ ಹಾಗೂ ತುಪ್ಪರಿ ಹಳ್ಳಗಳು ಮೈಬುಂಬಿ ಹರಿಯುತ್ತಿರುವುದರಿಂದ ಹಳ್ಳದ ಅಚ್ಚುಕಟ್ಟು ಪ್ರದೇಶದಲ್ಲಿನ ಜಮೀನುಗಳು ನೀರಲ್ಲಿ ಮುಳುಗಿದ್ದು ಬಿತ್ತಿದ ಬೆಳೆಗಳು ನೀರು ಪಾಲಾಗಿವೆ.
ಯಮನೂರು ಗ್ರಾಮದಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಉಪವಿಭಾಗ ಅಧಿಕಾರಿ ಶಾಲಂ ಹುಸೇನ್, ಎಸ್ಪಿ ಗೋಪಾಲ ಬ್ಯಾಕೋಡ, ತಹಸೀಲ್ದಾರ್ ಸುಧೀರ ಸಾಹುಕಾರ, ತಾಪಂ ಇಒ ಭಾಗ್ಯಶ್ರೀ ಜಹಗೀರದಾರ, ಸಿಪಿಐ ರವಿ ಕಪ್ಪತ್ತನವರ, ಎಸ್‍ಐ ಜನಾರ್ದನ ಸೇರಿದಂತೆ ಅಗ್ನಿ ಶಾಮಕದಳ ಸಿಬ್ಬಂದಿ ಪಾಲ್ಗೊಂಡಿದ್ದರು.ದಾಖಲೆ ಮಳೆ: ಕಳೆದ 2 ದಶಗಳಿಂದ ಹಿಂದೆಂದೂ ಕಂಡರಿಯದ ಮಳೆಯಾಗಿದ್ದು, ಬುಧವಾರ ಸಂಜೆ 4.30ರಿಂದ ಗುರುವಾರ ಬೆಳಗಿನ 5ರ ವರೆಗೆ ಒಂದೇ ದಿನ ಒಟ್ಟಾರೆ 125 ಮಿಮೀ ಮಳೆಯಾಗುವ ಮೂಲಕ ದಾಖಲೆಯಾಗಿದೆ.
ನಮ್ಮೂರಿನಲ್ಲಿ ಮಳೆ ಬಂದಾಗೊಮ್ಮೆ ಬೆಣ್ಣಿಹಳ್ಳದ ನೀರು ಹರಿದು ತೊಂದರೆ ಮಾಡುತ್ತಿದೆ. ನಾವು ಒಂದೇ ಮನೆಯಲ್ಲಿ 40 ಜನ ಜೀವದ ಹಂಗು ತೊರೆದು ಬದುಕುವಂತಾಗಿದ್ದರೂ ಆಡಳಿತ ನಡೆಸುವವರು ಚುನಾವಣೆ ಬಂದಾಗ ನೀಡುತ್ತಿರುವ ಭರವಸೆ ಈಡೇರಿಸದೇ ಬಡ ಕುಟುಂಬಗಳ ಜೀವನದ ಜತೆ ಆಟವಾಡುತ್ತಿದ್ದಾರೆ ಎಂದು ಅರೆಕುರಹಟ್ಟಿ ನಿವಾಸಿ ಬಿಬಿಜಾನ ಅಣ್ಣಿಗೇರಿ ಹೇಳಿದರು.