ದಂಡಿನಮಾರಮ್ಮ, ಪಟ್ಟಲದಮ್ಮ ಸಿಡಿ ಹಬ್ಬದ ಯಶಸ್ಸಿಗೆ ಸಹಕಾರ ನೀಡಿ: ಎಂ.ಶಿವಮೂರ್ತಿ

KannadaprabhaNewsNetwork | Published : Jan 20, 2025 1:32 AM

ಸಾರಾಂಶ

ಭಾವಕ್ಯತೆ ಸಂಕೇತವಾಗಿ ಎಲ್ಲಾ ಸಮುದಾಯದ ಜನರು ತಮ್ಮದೇ ಆದ ಜವಾಬ್ದಾರಿಯೊಂದಿಗೆ ಸಿಡಿ ಹಬ್ಬವನ್ನು ಪಟ್ಟಣದಲ್ಲಿ ವಿಜೃಂಬಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಹಬ್ಬಕ್ಕೆ ಬೇಕಾದ ಸ್ವಚ್ಛತೆ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಒದಗಿಸಿ ಹಬ್ಬದ ಯಶಸ್ವಿಗೆ ತಾಲೂಕು ಆಡಳಿತ ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದಲ್ಲಿ ದಂಡಿನಮಾರಮ್ಮ ಹಾಗೂ ಪಟ್ಟಲದಮ್ಮ ಸಿಡಿ ಹಬ್ಬದ ಯಶಸ್ವಿಗೆ ಎಲ್ಲಾ ಸಮುದಾಯದ ಮುಖಂಡರು ಸಹಕಾರ ನೀಡಬೇಕು ಎಂದು ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯ್ತಿಯ ಸಭಾಂಗಣದಲ್ಲಿ ನಡೆದ ಫೆ.4ರ ದಂಡಿನ ಮಾರಮ್ಮನ ಹಾಗೂ ಫೆ.7 ಮತ್ತು 8ರಂದು ನಡೆಯುವ ಸಿಡಿಹಬ್ಬದ ಶಾಂತಿ-ಕಾನೂನು ಸುವ್ಯವಸ್ಥೆ ಹಾಗೂ ಪೂರ್ವಭಾವಿಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕು ಆಡಳಿತದಿಂದ ಎಲ್ಲಾ ಪೂರ್ವ ಸಿದ್ಧತೆಗಳಿಗೆ ಅನುವು ಮಾಡಿಕೊಡಲಾಗುವುದು ಜೊತೆಗೆ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು, ತಾತ್ಕಾಲಿಕ ಸಿಸಿ ಟಿವಿ ಮತ್ತು ಡ್ರೋಣ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪುರಸಭೆಯೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು. ಪ್ರಮುಖವಾಗಿ ಘಟ್ಟಗಳ ಮೆರವಣಿಗೆಗೆ ನಿಗದಿ ಪಡಿಸಿರುವ ಸಮಯವನ್ನು ಪಾಲಿಸಬೇಕು, ಸಮುದಾಯಕ್ಕೆ ಕೊಟ್ಟಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಕೋರಿದರು.

ಹಿರಿಯ ಮುಖಂಡ ಎಂ.ಸಿ.ವೀರೇಗೌಡ ಮಾತನಾಡಿ, ಭಾವಕ್ಯತೆ ಸಂಕೇತವಾಗಿ ಎಲ್ಲಾ ಸಮುದಾಯದ ಜನರು ತಮ್ಮದೇ ಆದ ಜವಾಬ್ದಾರಿಯೊಂದಿಗೆ ಸಿಡಿ ಹಬ್ಬವನ್ನು ಪಟ್ಟಣದಲ್ಲಿ ವಿಜೃಂಬಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

ಹಬ್ಬಕ್ಕೆ ಬೇಕಾದ ಸ್ವಚ್ಛತೆ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಒದಗಿಸಿ ಹಬ್ಬದ ಯಶಸ್ವಿಗೆ ತಾಲೂಕು ಆಡಳಿತ ಮುಂದಾಗಬೇಕು. ಹಬ್ಬದ ವೈಭವವನ್ನು ಎತ್ತಿ ಹಿಡಿಯಲು ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಪುರಸಭೆಯಿಂದ ಸ್ವಚ್ಛತೆ ಕುಡಿಯುವ ನೀರು ಸೇರಿದಂತೆ ಆಗತ್ಯ ಮೂಲ ಸೌಲಭ್ಯ ನೀಡಲಾಗಿದೆ. ತಾಲೂಕು ಆಡಳಿತ ಜೊತೆ ಪುರಸಭೆ ಆಡಳಿತ ಮಂಡಳಿ ಕೈ ಜೋಡಿಸುವುದರ ಮೂಲಕ ಹಬ್ಬದ ಯಶಸ್ವಿಗೆ ಶ್ರಮಿಸಲಾಗುವುದು ಎಂದರು.

ಡಿವೈಎಸ್ಪಿ ವಿ.ಕೃಷ್ಣಪ್ಪ ಮಾತನಾಡಿ, ಸಿಡಿಹಬ್ಬದ ಘಟ್ಟಗಳ ಮೆರವಣಿಯಲ್ಲಿ ನಿಗದಿಪಡಿಸಿದ ಅವಧಿ ಮೀರದಂತೆ ಮುಖಂಡರು ಎಚ್ಚರವಹಿಸಬೇಕು. ಪೊಲೀಸ್ ಇಲಾಖೆಯಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಆಗತ್ಯ ಕ್ರಮ ಕೈಗೊಳ್ಳಲಾಗುವುದು. ಪೊಲೀಸರ ಜೊತೆಗೆ ಸಾರ್ವಜನಿಕರು ಕಾನೂನು ಪಾಲನೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಸಿಪಿಐ ಎಂ.ರವಿಕುಮಾರ್ ಮಾತನಾಡಿ, ಜಾತ್ಯತೀತವಾಗಿ ನಡೆಯುವ ಸಿಡಿಹಬ್ಬಕ್ಕೆ ಸಾರ್ವಜನಿಕರು ಕಾನೂನು ಸುವ್ಯವಸ್ಥೆ ಹದೆಗೆಡದಂತೆ ಸಾರ್ವಜನಿಕರು ಕೈಜೋಡಿಸಬೇಕು. ಡಿಜೆ ಅಳವಡಿಕೆ ಸಂಬಂಧ ಸುಪ್ರೀಂ ಕೋರ್ಟ್ ನಿಯಮ ಪಾಲಿಸಲಾಗುವುದು ಮುಖ್ಯವಾಗಿದೆ ಎಂದು ಸಭೆ ಗಮನಕ್ಕೆ ತಂದರು.

ಸಭೆಯಲ್ಲಿ ತಹಸೀಲ್ದಾರ್ ಎಸ್.ವಿ.ಲೋಕೇಶ್, ತಾಪಂ ಇಒ ಎಚ್.ಜಿ.ಶ್ರೀನಿವಾಸ್, ಪುರಸಭೆ ಉಪಾಧ್ಯಕ್ಷ ಎನ್.ಬಸವರಾಜು, ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಸಿಪಿಐ ಬಿ.ಜಿ.ಮಹೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಪುರಸಭೆ ಮಾಜಿ ಅಧ್ಯಕ್ಷ ಚಿಕ್ಕರಾಜು, ಪುರಸಭೆ ಸದಸ್ಯ ಎಂ.ಟಿ.ಪ್ರಶಾಂತ್, ಮುಖಂಡರಾದ ಕಿರಣ್ ಶಂಕರ್, ನಂಜುಡಸ್ವಾಮಿ, ಅಪ್ಪಾಜಿಗೌಡ, ನಂಜುಂಡಪ್ಪ, ಚಿಕ್ಕಮೊಗಣ್ಣ ಸೇರಿದಂತೆ ಅನೇಕ ಮುಖಂಡರು ಇದ್ದರು.

Share this article