ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-2016 ಜಾರಿಗೆ ಬಂದು 10 ವರ್ಷಗಳೇ ಕಳೆದಿದ್ದರೂ, ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಸರಿಯಾಗಿ ಅನುಷ್ಠಾನಗೊಂಡಿಲ್ಲವೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ವಿಷಾಧ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-2016 (ಪರಿಷ್ಕರಣೆ-2023) ಹಾಗೂ ಮಕ್ಕಳ ರಕ್ಷಣೆ ಕಾಯ್ದೆ ಕುರಿತು ಡಿಪ್ಲೊಮೋ, ಪಾಲಿಟೆಕ್ನಿಕ್, ಐಟಿಐ ಮತ್ತು ಪ್ಯಾರಾಮೆಡಿಕಲ್ ಕಾಲೇಜು ಪ್ರಾಂಶುಪಾಲರಿಗೆ ಆಯೋಜಿಸಿದ್ದ ತರಬೇತಿ ಉದ್ಘಾಟಿಸಿ ಮಾತನಾಡಿದ ಅವರು . ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ 18 ವರ್ಷದೊಳಗಿನ ಮಕ್ಕಳ ಸುರಕ್ಷತೆಗಾಗಿ ಜಾರಿಗೆ ತರಲಾಗಿರುವ ಮಕ್ಕಳ ರಕ್ಷಣಾ ನೀತಿ ಕಡ್ಡಾಯವಾಗಿ ಅನುಷ್ಠಾನಗೊಳ್ಳಬೇಕು ಎಂದು ತಾಕೀತು ಮಾಡಿದರು.

ರಾಜ್ಯದ ವಿವಿಧ ಜಿಲ್ಲೆಗಳ ಐಟಿಐ, ಪ್ಯಾರಾಮೆಡಿಕಲ್ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಿಗೆ ಭೇಟಿ ನೀಡಿದಾಗ, ಮಕ್ಕಳ ರಕ್ಷಣಾ ನೀತಿಯ ಬಗ್ಗೆ ಅನೇಕ ಪ್ರಾಂಶುಪಾಲರಿಗೆ ಮಾಹಿತಿಯೇ ಇಲ್ಲದಿರುವುದು ಗಮನಕ್ಕೆ ಬಂದಿದೆ. ಈ ರಕ್ಷಣಾ ನೀತಿಯು ಕೇವಲ ಸರ್ಕಾರಿ ಶಾಲೆಗಳಿಗೆ ಮಾತ್ರವಲ್ಲದೆ, ಅನುದಾನಿತ, ಅನುದಾನರಹಿತ ಸಂಸ್ಥೆಗಳು ಹಾಗೂ ಖಾಸಗಿ ಟ್ಯೂಷನ್ ಕೇಂದ್ರಗಳಿಗೂ ಅನ್ವಯಿಸುತ್ತದೆ. ಪ್ರತಿಯೊಂದು ಶಿಕ್ಷಣ ಸಂಸ್ಥೆಯು ಕಡ್ಡಾಯವಾಗಿ ‘ಮಕ್ಕಳ ರಕ್ಷಣಾ ಸಮಿತಿ''''''''ಯನ್ನು ರಚಿಸಬೇಕು ಎಂದು ತಿಳಿಸಿದರು.

ಈ ಹಿಂದೆ ಕೇವಲ ಶಿಕ್ಷಣ ಇಲಾಖೆಗೆ ಸೀಮಿತವಾಗಿದ್ದ ಮಕ್ಕಳ ರಕ್ಷಣಾ ನೀತಿ, ಈಗ ಆಯೋಗದ ಕ್ರಮದಿಂದಾಗಿ 11 ವಿವಿಧ ಇಲಾಖೆಗಳ ಮೂಲಕ 30 ಪುಟಗಳ ಸಮಗ್ರ ಸುತ್ತೋಲೆಯಾಗಿ ಹೊರಬಂದಿದೆ. ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟಲು ಮತ್ತು ಅವರಿಗೆ ಸುರಕ್ಷಿತ ವಾತಾವರಣ ಒದಗಿಸಲು ಅಧಿಕಾರಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್.ವಿಜಯಕುಮಾರ್ ಮಾತನಾಡಿ, 18 ವರ್ಷದೊಳಗಿನ ಎಲ್ಲಾ ಮಕ್ಕಳ ಸುರಕ್ಷತೆಯು ಶಿಕ್ಷಣ ಸಂಸ್ಥೆಗಳ ಆದ್ಯತೆಯಾಗಬೇಕು. ವಿಶೇಷವಾಗಿ ವಿದ್ಯಾರ್ಥಿನಿಲಯ ಮತ್ತು ಕಾಲೇಜುಗಳಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು. ಇತ್ತೀಚೆಗೆ ಭರಮಸಾಗರದ ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆ ಪ್ರಕರಣ ಉಲ್ಲೇಖಿಸಿ, ಅನಾಹುತಗಳು ಸಂಭವಿಸಿದ ನಂತರ ಎಚ್ಚೆತ್ತುಕೊಳ್ಳುವ ಬದಲು, ಮುನ್ನೆಚ್ಚರಿಕೆಯಾಗಿ ಮಕ್ಕಳ ರಕ್ಷಣಾ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ಇರುವ ಸಮಿತಿಗಳು ಕೇವಲ ಕಡತಕ್ಕೆ ಸೀಮಿತವಾಗದೆ, ನಿಯಮಿತವಾಗಿ ಸಭೆ ನಡೆಸಿ, ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಡಿ.ಮಂಜುನಾಥ್, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಜಗದೀಶ್, ರಂಗನಾಥ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎ.ಎಂ.ವೀಣಾ, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲೆಯ ಡಿಪ್ಲೊಮೋ, ಪಾಲಿಟೆಕ್ನಿಕ್, ಐಟಿಐ ಮತ್ತು ಪ್ಯಾರಾಮೆಡಿಕಲ್ ಕಾಲೇಜು ಪ್ರಾಂಶುಪಾಲರು ಇದ್ದರು.