ಕೊಟ್ಟೂರು: ಜನಾಕರ್ಷಣೆಯ ರಥೋತ್ಸವ ಎಂದೇ ಬಿಂಬಿತಗೊಂಡಿರುವ ಪ್ರಸಿದ್ಧ ಕೊಟ್ಟೂರು ಕೊಟ್ರೂರೇಶ್ವರ ಸ್ವಾಮಿಯ ಮಹಾ ರಥೋತ್ಸವ ಮಾ. 4ರಂದು ನಡೆಯಲಿದ್ದು, ಪಟ್ಟಣವನ್ನು ಸಂಪರ್ಕಿಸುವ 6 ರಸ್ತೆಗಳನ್ನು ದುರಸ್ತಿಗೊಳಿಸುವ ಕಾರ್ಯವನ್ನ ಶೀಘ್ರಗತಿಯಲ್ಲಿ ಆರಂಭಿಸಬೇಕು. ಇದರಲ್ಲಿ ವಿಳಂಬ ಸಲ್ಲದು ಎಂದು ಶಾಸಕ ಕೆ. ನೇಮರಾಜನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ಸ್ವಾಮಿಯ ಹಿರೇಮಠದ ಮುಂಭಾಗದಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಥೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಕುಡಿಯುವ ನೀರಿನ ತೊಂದರೆ ಬಾಧಿಸದಂತೆ ಹೆಚ್ಚುವರಿಯಾಗಿ ಟ್ಯಾಂಕರ್‌ಗಳನ್ನು ತರಿಸಿಕೊಂಡು ಪಟ್ಟಣದ ಜನತೆ ಮತ್ತು ಜಾತ್ರೆಗೆ ಆಗಮಿಸುವ ಭಕ್ತರಿಗೆ ನೀರು ಪೂರೈಸಬೇಕು. ಈ ನಿಟ್ಟಿನಲ್ಲಿ ಸ್ಥಳಿಯ ಪಟ್ಟಣ ಪಂಚಾಯಿತಿ ಆಡಳಿತ ಗಮನಹರಿಸಬೇಕು ಎಂದ ಅವರು, ಪಟ್ಟಣದ 20 ವಾರ್ಡ್‌ಗಳಲ್ಲಿ ಸ್ವಚ್ಛತಾ ಕೆಲಸ ನಿರಂತರವಾಗಿ ಮಾಡುವ ಮೂಲಕ ಕಸಕಡ್ಡಿಗಳ ರಾಶಿ ಎಲ್ಲಿಯೂ ಕಂಡುಬರದಂತೆ ಮುಖ್ಯಾಧಿಕಾರಿ ಗಮನಹರಿಸಬೇಕು ಎಂದರು.
ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮಾತನಾಡಿ, ರಾಜ್ಯದಲ್ಲಿಯೇ ಹೆಚ್ಚಿನ ಭಕ್ತರು ಆಗಮಿಸುವ ರಥೋತ್ಸವ ಎಂದು ಕೊಟ್ಟೂರೇಶ್ವರ ರಥೋತ್ಸವ ಖ್ಯಾತಿಯಾಗಿದೆ. ಇದಕ್ಕೆ ಅನುಗುಣವಾಗಿ ಪಟ್ಟಣದ ಪ್ರಮುಖ ಬೀದಿಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸುವ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡು ರಥೋತ್ಸವಕ್ಕೆ ಮತ್ತೊಷ್ಟು ಮೆರುಗು ತರಬೇಕು ಎಂದರು.ಪ್ರಮುಖ ವೃತ್ತಗಳಲ್ಲಿ ಎಲ್‌ಇಡಿ ಟಿವಿಗಳನ್ನು ಅಳವಡಿಸಿ ಸ್ವಾಮಿಯ ಭಕ್ತಿಗೀತೆಗಳನ್ನು ನಿರಂತರ ಹಾಕುವ ಮೂಲಕ ಭಕ್ತರ ಭಾವನೆಗಳಿಗೆ ಗೌರವ ನೀಡಬೇಕು ಎಂದರು.
ರಥೋತ್ಸವದ ನಂತರ ಸ್ವಾಮಿಯ ಹಿರೇಮಠದ ಬಾಗಿಲನ್ನು ಬೆಳ್ಳಿ ಕವಚ ಅಳವಡಿಸಲು ₹1.40 ಕೋಟಿ ಅಂದಾಜು ಯೋಜನೆಯನ್ನು ರೂಪಿಸಲಾಗಿದ್ದು, ಇದರ ಕಾರ್ಯಾರಂಭ ಆರಂಭಿಸಲು ಧಾರ್ಮಿಕ ದತ್ತಿ ಇಲಾಖೆಗೆ ಅನುಮೋದನೆ ನೀಡಲಾಗಿದೆ ಎಂದರು.ಮುಖಂಡರಾದ ಬಿ. ಮರಿಸ್ವಾಮಿ, ಟಿ. ಹನುಮಂತಪ್ಪ ಶಿವಮೂರ್ತಿ ಡಿ.ಎಸ್., ಕೂಡ್ಲಿಗಿ ಕೊಟ್ರೇಶ, ಹೂಗಾರ ನಾಗರಾಜ ಸಲಹೆಗಳನ್ನು ನೀಡಿದರು. ಕ್ರಿಯಾಮೂರ್ತಿಗಳಾದ ಶಂಕರ ಸ್ವಾಮೀಜಿ, ಶಿವಪ್ರಕಾಶ್ ಕೊಟ್ರೂರು ದೇವರು, ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ್ , ಹರಪನಹಳ್ಳಿ ಸಹಾಯಕ ಆಯುಕ್ತ ಟಿ.ವಿ. ಪ್ರಕಾಶ್, ತಹಸೀಲ್ದಾರ್ ಅಮರೇಶ್ ಜಿ.ಕೆ., ಡಿವೈಎಸ್‌ಪಿ ಮಲ್ಲೇಶ್ ಮಲ್ಲಾಪುರ, ಪಪಂ ಸದಸ್ಯರಾದ ಮರಬದ ಕೊಟ್ರೇಶ್, ವಿನಯ ಹೊಸಮನಿ, ತೋಟದ ರಾಮಪ್ಪ, ಶೆಫಿ, ಕೆಂಗರಾಜ, ವೀಣಾ ವಿವೇಕಾನಂದಗೌಡ, ಬಾವಿಕಟ್ಟಿ ಶಿವಾನಂದ, ಬೋರ್ವೆಲ್ ತಿಪ್ಪೇಸ್ವಾಮಿ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಗಂಗಾದರಪ್ಪ, ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ, ವಿವಿಧ ಇಲಾಖೆಯ ಅಧಿಕಾರಿಗಳು, ಅಯಾಗಾರ ಬಳಗದವರು ಪಾಲ್ಗೊಂಡಿದ್ದರು.