ಕನ್ನಡಪ್ರಭ ವಾರ್ತೆ ಕಲಬುರಗಿ
ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬರ ಸಹಕಾರ, ಪ್ರೋತ್ಸಾಹ ಅಗತ್ಯವಾಗಿದೆ. ನಾನು ಕೂಡ ನನ್ನ ಇತಿ ಮಿತಿಯಲ್ಲಿ ಸಹಕಾರ ನೀಡುವುದಾಗಿ ಶಾಸಕ ಅಲ್ಲಮಪ್ರಭು ಪಾಟೀಲ ಭರವಸೆ ನೀಡಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಫೆ. 26 ಮತ್ತು 27ರಂದು ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ನಡೆಯಲಿರುವ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರದ ನಿಮಿತ್ತ ಜಿಲ್ಲಾ ಕಸಾಪದಿಂದ ಹಮ್ಮಿಕೊಂಡಿದ್ದ ಬೈಕ್ ರ್‍ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕ್ರಿಯಾಶೀಲವಾಗಿದ್ದು, ವಿನೂತನ ಕಾರ್ಯಕ್ರಮ ಆಯೋಜಿಸುವ ಮೂಲಕ ಕನ್ನಡ ಸಾಹಿತ್ಯದ ಬಗ್ಗೆ ಎಲ್ಲರಲ್ಲೂ ಅಭಿಮಾನ ಮೂಡಿಸುತ್ತಿದೆ. ಸಾಹಿತ್ಯ ಪರಿಷತ್ ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಸೀಮಿತವಾಗದೆ ಸಾಮಾಜಿಕ ಕಾರ್ಯಕ್ರಮ ಆಯೋಜಿಸುತ್ತಿರವುದು ಶ್ಲಾಘನೀಯ ಎಂದರು.ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಾಹಿತ್ಯ ಸಮ್ಮೇಳನವನ್ನು ಮನೆ ಹಬ್ಬದಂತೆ ಆಚರಿಸಬೇಕಿದ್ದು, ಎರಡು ದಿನಗಳ ಕಾಲ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಬಲವರ್ಧನೆಗೆ ಸಮ್ಮೇಳನ ಪೂರಕವಾಗಿದೆ. ನಮ್ಮ ಅವಧಿಯಲ್ಲಿ ಆರು ಸಮ್ಮೇಳನ ಮಾಡುವ ಗುರಿ ಹೊಂದಲಾಗಿದ್ದು, ಈಗಾಗಲೇ ಎರಡು ಸಮ್ಮೇಳನ ಯಶಸ್ವಿಯಾಗಿ ಮಾಡಲಾಗಿದೆ. ಈ ಬಾರಿಯ ಸಮ್ಮೇಳನ ಇನ್ನೂ ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ಜನಪ್ರತಿನಿಧಿಗಳು, ಉದ್ಯಮಿಗಳು, ಅಧಿಕಾರಿಗಳು ಹಾಗೂ ಎಲ್ಲ ಕನ್ನಡಾಭಿಮಾನಿಗಳ ಸಹಕಾರ, ಪ್ರೋತ್ಸಾಹ ನೀಡಿದಾಗ ಮಾತ್ರ ಅಕ್ಷರ ಜಾತ್ರೆ ಯಶಸ್ವಿಯಾಗಲು ಸಾಧ್ಯ ಎಂದರು.
ಕನ್ನಡ ಭವನದಿಂದ ಜಗತ್ ವೃತ್ತ, ಸುಪರ್ ಮಾರ್ಕೆಟ್, ಲಾಲಗೇರಿ ಕ್ರಾಸ್, ಶ್ರೀ ಶರಣಬಸವೇಶ್ವರ ಮಂದಿರ, ಗೋವಾ ಹೋಟೆಲ್, ಆನಂದ ಹೊಟೇಲ್ ಹಾಗೂ ಸರದಾರ್ ವಲ್ಲಭಬಾಯಿ ಪಟೇಲ್ ವೃತ್ತದ ಮೂಲಕ ಮರಳಿ ಕನ್ನಡಭವನದ ವರೆಗೆ ಬೈಕ್ ರ್ಯಾಲಿ ಅದ್ಧೂರಿಯಾಗಿ ನಡೆಯಿತು.ಜಿಲ್ಲಾ ಕಸಾಪ ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಕಾರ್ಯದರ್ಶಿ ಶಿವರಾಜ ಅಂಡಗಿ, ಯಶ್ವಂತರಾಯ ಅಷ್ಟಗಿ, ಪದಾಧಿಕಾರಿಗಳಾದ ಧರ್ಮಣ್ಣ ಧನ್ನಿ, ಕಲ್ಯಾಣಕುಮಾರ ಶೀಲವಂತ, ರಾಜೇಂದ್ರ ಮಾಡಬೂಳ, ಕಾಳಗಿ ತಾಲೂಕು ಅಧ್ಯಕ್ಷ ಸಂತೋಷ ಕುಡಳ್ಳಿ, ಉತ್ತರ ವಲಯ ಅಧ್ಯಕ್ಷ ಪ್ರಭುಲಿಂಗ ಮೂಲಗೆ, ದಕ್ಷಿಣ ವಲಯದ ಅಧ್ಯಕ್ಷ ಶಾಮಸುಂದರ ಕುಲಕರ್ಣಿ, ಡಾ. ಬಾಬುರಾವ ಶೇರಿಕಾರ, ಧರ್ಮಣ್ಣ ಎಚ್. ಧನ್ನಿ, ಎಂ.ಎನ್. ಸುಗಂಧಿ, ವಿಶ್ವನಾಥ ತೊಟ್ನಳ್ಳಿ, ರವೀಂದ್ರಕುಮಾರ ಭಂಟನಳ್ಳಿ, ಸಿದ್ಧಲಿಂಗ ಬಾಳಿ, ಮಲ್ಲಿಕಾರ್ಜುನ ಇಬ್ರಾಹಿಂಪುರ, ಡಾ. ರೆಹಮಾನ್ ಪಟೇಲ್, ವಿನೋದ ಜೇನವೇರಿ, ಮಂಜುನಾಥ ಕಂಬಾಳಿಮಠ, ಮಲ್ಲಿನಾಥ ಸಂಗಶೆಟ್ಟಿ, ಜಕನ್ನಡಾಭಿಮಾನಿಗಳು ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು.