ವೈಜ್ಞಾನಿಕ ಸಮ್ಮೇಳನ ಯಶಸ್ವಿಗೆ ಸಹಕರಿಸಿ: ಹುಲಿಕಲ್ ನಟರಾಜ

KannadaprabhaNewsNetwork | Published : Dec 28, 2023 1:45 AM

ಸಾರಾಂಶ

ನಾಳೆ, ನಾಡಿದ್ದು ಲಿಂಗಸುಗೂರಿನಲ್ಲಿ ನಡೆಯಲಿರುವ ಸಮ್ಮೇಳನದ ವೇದಿಕೆ, ಸಿದ್ಧತೆ ಕುರಿತು ಅಧಿಕಾರಿಗಳು, ಗಣ್ಯರೊಂದಿಗೆ ಪರಿಶೀಲಿಸಿದ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನಿಂದ ಹಮ್ಮಿಕೊಂಡಿರುವ ರಾಜ್ಯಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ ಕರೆ ನೀಡಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಬಳಿಕ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸಮ್ಮೇಳನದ ವೇದಿಕೆ ಮತ್ತು ಇತರೆ ಸಿದ್ಧತೆಗಳ ಕುರಿತು ಗಣ್ಯರೊಂದಿಗೆ ಪರಿಶೀಲಿಸಿ ಮಾತನಾಡಿದ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಕಾರದಿಂದ ಹಮ್ಮಿಕೊಂಡಿರುವ ವೈಜ್ಞಾನಿಕ ಸಮ್ಮೇಳನ ವಿದ್ಯಾರ್ಥಿ ಯುವ ಜನರ ವೈಜ್ಞಾನಿಕ ಮನೋಭಾವ ಇಮ್ಮಡಿಗೊಳಿಸುತ್ತದೆ. ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆ ಜಾಗೃತಿ ಮೂಡಿಸುವುದು, ಮೌಢ್ಯ ದೂರ ಮಾಡುವುದು, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯ ಶಿಕ್ಷಣದ ಜೊತೆಗೆ ವೈಚಾರಿಕೆ ಚಿಂತನೆ ಜಾಗೃತಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಲಿಂಗಸುಗೂರು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಡಿ.29 ಹಾಗೂ 30ರಂದು ಎರಡು ದಿನಗಳ ಕಾಲ ನಡೆಯುವ ರಾಜ್ಯಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಲಿದ್ದಾರೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಸಮ್ಮೇಳನಾಧ್ಯಕ್ಷರ ಅಧಿಕಾರ ಹಸ್ತಾಂತರಿಸಲಿದ್ದಾರೆ ಎಂದರು.ಸಮ್ಮೇಳನದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲರು ವಿಜ್ಞಾನಿ ಸಿರಿ ಮಾಸಪತ್ರಿಕೆ ಬಿಡುಗಡೆಗೊಳಿಸಲಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ವಿಜ್ಞಾನ ಗ್ರಾಮಕ್ಕೆ ಚಾಲನೆ ನೀಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಲಿದ್ದಾರೆ. ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಇದೊಂದು ಐತಿಹಾಸಿಕ ಸಮ್ಮೇಳನವಾಗಿದ್ದು, ಈ ಭಾಗದ ಸಾಹಿತಿಗಳು, ಚಿಂತಕರು, ಕವಿಗಳು, ಸಾರ್ವಜನಿಕರು, ವಿಶೇಷವಾಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಇದರ ಸದುಪಯೋಗ ಪೆಡೆದುಕೊಳ್ಳಬೇಕೆಂದು ಹೇಳಿದರು.

ಈ ವೇಳೆ ಯುವ ಮುಖಂಡ ರವಿ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಭೂಪನಗೌಡ ಪಾಟೀಲ್, ಗುಂಡಪ್ಪ ನಾಯಕ, ಪಾಮಯ್ಯ ಮುರಾರಿ, ಬಾಬೂರಡ್ಡಿ ಮುನ್ನೂರು, ಚನ್ನಬಸವ ವಿಟ್ಲಾಪುರ, ವಿ.ಟಿ.ಸ್ವಾಮಿ, ಹನುಮಂತೇಗೌಡ, ಚಿರಂಜೀವಿ, ಶ್ರೀರಾಮಚಂದ್ರ, ವೆಂಕಟೇಶ, ರವಿ ಕುಮಾರ, ಶರಣಪ್ಪ ಗೋನವಾರ, ನಂದೇಶ ನಾಯಕ ಸೇರಿದಂತೆ ಇದ್ದರು.

Share this article