ಉಜ್ಜಯಿನಿ ಜಾತ್ರಾ ಮಹೋತ್ಸವ ಯಶಸ್ಸಿಗೆ ಸಹಕರಿಸಿ: ಮಲ್ಲೇಶ್ ದೊಡ್ಡಮನಿ

KannadaprabhaNewsNetwork |  
Published : Apr 25, 2025, 11:45 PM IST
ಕೊಟ್ಟೂರು ತಾಲೂಕು ಉಜ್ಜಯಿನಿ ಪೊಲೀಸ್‌ ಉಪಠಾಣೆಯಲ್ಲಿ ನಡೆದ ಜಾತ್ರಾ ಶಾಂತಿ ಸಭೆಯನ್ನು ಉದ್ದೇಶಿಸಿ ಡಿವೈಎಸ್‌ಪಿ ಮಲ್ಲೇಶ್‌ ದೊಡ್ಡಮನಿ ಮಾತನಾಡಿದರು. | Kannada Prabha

ಸಾರಾಂಶ

ಹೆಸರಾಂತ ಉಜ್ಜಯಿನಿ ಮರುಳಸಿದ್ದೇಶ್ವರ ಸ್ವಾಮಿಯ ಮಹಾರಥೋತ್ಸವ ಮೇ 2ರಂದು ಜರುಗಲಿದ್ದು, ಉಜ್ಜಯಿನಿ ಗ್ರಾಮದ ಪೊಲೀಸ್‌ ಉಪ ಠಾಣೆಯಲ್ಲಿ ಕೊಟ್ಟೂರು ಪೊಲೀಸ್‌ ಠಾಣೆ ವತಿಯಿಂದ ಶಾಂತಿಸಭೆ ಆಯೋಜಿಸಲಾಗಿತ್ತು. ಗ್ರಾಮದ ಆಯ್ದ ಸ್ಥಳಗಳಲ್ಲಿ ಸಿಸಿ ಕ್ಯಾಮೆರಗಳನ್ನು ಅಳವಡಿಸಲು ಗ್ರಾಪಂ ಆಡಳಿತಕ್ಕೆ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಸೂಚಿಸಿದರು.

ಕೊಟ್ಟೂರು: ಹೆಸರಾಂತ ಉಜ್ಜಯಿನಿ ಮರುಳಸಿದ್ದೇಶ್ವರ ಸ್ವಾಮಿಯ ಮಹಾರಥೋತ್ಸವ ಮೇ 2ರಂದು ಜರುಗಲಿದ್ದು, ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಉಜ್ಜಯಿನಿ ಗ್ರಾಮದ ಆಯ್ದ ಸ್ಥಳಗಳಲ್ಲಿ ಸಿಸಿ ಕ್ಯಾಮೆರಗಳನ್ನು ಕಣ್ಗಾವಲಿಗೆ ಅಳವಡಿಸಲು ಗ್ರಾಪಂ ಆಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಪೊಲೀಸ್‌ ಕೂಡ್ಲಿಗಿ ಉಪವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಹೇಳಿದರು. ತಾಲೂಕಿನ ಉಜ್ಜಯಿನಿ ಗ್ರಾಮದ ಪೊಲೀಸ್‌ ಉಪ ಠಾಣೆಯಲ್ಲಿ ಕೊಟ್ಟೂರು ಪೊಲೀಸ್‌ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಜಾತ್ರೆಯ ಶಾಂತಿಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ಈಗಾಗಲೇ ಬೇಕಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದ್ದಾರೆ. ಕಿಡಿಗೇಡಿಗಳು ಜಾತ್ರಾ ಸಮಯದಲ್ಲಿ ಅನವಶ್ಯಕ ಗೊಂದಲ ಮೂಡಿಸುವ ಮತ್ತು ಇನ್ನಿತರ ಕೃತ್ಯಗಳ ಬಗ್ಗೆ ಸದಾ ಕಣ್ಗಾವಲಿರಿಸಲು ಸಿಸಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಲು ಸೂಚಿಸಲಾಗಿದೆ ಎಂದರು.

ರಥೋತ್ಸವ ಮತ್ತು ಜಾತ್ರೋತ್ಸವದ ಸಂದರ್ಭದಲ್ಲಿ ಯಾರೊಬ್ಬರು ಶ್ರೀ ಸ್ವಾಮಿಯ ಬಾವುಟ ಹೊರತುಪಡಿಸಿ ಬೇರೆ ಯಾವುದೇ ಬಾವುಟ ಪ್ರದರ್ಶಿಸಬಾರದು. ಕಳೆದ ವರ್ಷದ ರಥೋತ್ಸವದಲ್ಲಿ ಕೆಲವರು ಅನಗತ್ಯವಾಗಿ ಬಾವುಟಗಳನ್ನು ಹಿಡಿದು ಗೊಂದಲ ಮೂಡಿಸುವ ಪ್ರಯತ್ನ ಮಾಡಿದ್ದ ಹಿನ್ನೆಲೆಯಲ್ಲಿ ಅಂಥವರನ್ನು ಗುರ್ತಿಸಿ ಎಚ್ಚರಿಕೆ ನೀಡಿ, ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದರು.

ಜಾತ್ರಾ ಮಹೋತ್ಸವದ ಯಶಸ್ಸಿಗೆ ಭಕ್ತರು ಸಹಕರಿಸಬೇಕು. ಜಾತ್ರಾ ಮಹೋತ್ಸವಕ್ಕೆ ಪೊಲೀಸ್‌ ಬಂದೋಬಸ್ತ್‌ನ್ನು ನಿಯೋಜಿಸಿಕೊಳ್ಳಲು ಈಗಾಗಲೇ ಸಿದ್ಧತೆ ಕೈಗೊಂಡಿದ್ದೇವೆ ಎಂದರು.

ಸಿಪಿಐ ವೆಂಕಟಸ್ವಾಮಿ ಮಾತನಾಡಿ, ಜಾತ್ರೆಯಲ್ಲಿ ಯಾರಾದರೂ ಅನಗತ್ಯ ಗದ್ದಲ ಮಾಡಲು ಪ್ರಯತ್ನ ಮಾಡಿದರೆ ಅಂಥವರನ್ನು ತಕ್ಷಣಕ್ಕೆ ವಶಕ್ಕೆ ಪಡೆದುಕೊಂಡು ಕ್ರಮ ಜರುಗಿಸುತ್ತೇವೆ ಎಂದರು.

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಗೀತಾಂಜಲಿ ಸಿಂಧೆ, ಪಿಡಿಒ ಉಮಾಪತಿ, ಗ್ರಾಪಂ ಉಪಾಧ್ಯಕ್ಷ ರೇವಣ್ಣ, ಕಾಳಾಪುರ ಗ್ರಾಪಂ ಉಪಾಧ್ಯಕ್ಷ ಮಂಜುನಾಥ, ವೀರಪ್ಪಯ್ಯ, ಕುರುಗೋಡು ಸಿದ್ದೇಶ್‌, ರಂಗಪ್ಪ, ಮರುಳಸಿದ್ದಪ್ಪ, ಸೇರಿದಂತೆ 9 ಪಾದಗಟ್ಟೆಯ ಮುಖಂಡರು ಮತ್ತು ಇತರರು ಸಭೆಯಲ್ಲಿ ಭಾಗವಹಿಸಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌