ಕೋವಿಡ್‌ ಅಕ್ರಮ -1808 ಪುಟಗಳ, 7 ಸಂಪುಟಗಳ ವರದಿ : ನ್ಯಾ.ಕುನ್ಹಾ 2ನೇ ವರದಿಗೆ ಒಪ್ಪಿಗೆ

ಸಾರಾಂಶ

ಕೋವಿಡ್‌ 19 ನಿರ್ವಹಣೆಯಲ್ಲಿ ಆಗಿರುವ ಅವ್ಯವಹಾರಗಳ ಕುರಿತ ಪತ್ತೆಗೆ ನೇಮಿಸಿದ್ದ ನ್ಯಾ.ಮೈಕಲ್‌ ಡಿ.ಕುನ್ಹಾ ನೇತೃತ್ವದ ವಿಚಾರಣಾ ಆಯೋಗ ಸಲ್ಲಿಸಿದ್ದ 2ನೇ ವರದಿಯನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಂಗೀಕರಿಸಲಾಯಿತು.

ಚಾಮರಾಜನಗರ : ಕೋವಿಡ್‌ 19 ನಿರ್ವಹಣೆಯಲ್ಲಿ ಆಗಿರುವ ಅವ್ಯವಹಾರಗಳ ಕುರಿತ ಪತ್ತೆಗೆ ನೇಮಿಸಿದ್ದ ನ್ಯಾ.ಮೈಕಲ್‌ ಡಿ.ಕುನ್ಹಾ ನೇತೃತ್ವದ ವಿಚಾರಣಾ ಆಯೋಗ ಸಲ್ಲಿಸಿದ್ದ 2ನೇ ವರದಿಯನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಂಗೀಕರಿಸಲಾಯಿತು.

ಒಟ್ಟು ಏಳು ಸಂಪುಟಗಳಲ್ಲಿ 1,808 ಪುಟ ಹೊಂದಿರುವ ಎರಡನೇ ವರದಿಯು ಬಿಬಿಎಂಪಿಯ ನಾಲ್ಕು ವಲಯಗಳು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದ ವಿವರಗಳನ್ನು ಒಳಗೊಂಡಿದೆ.

ನ್ಯಾ. ಕುನ್ಹಾ ಆಯೋಗವು ವರದಿಯಲ್ಲಿ ಬಿಬಿಎಂಪಿಯ ನಾಲ್ಕು ವಲಯಗಳು ಹಾಗೂ ಬೆಂಗಳೂರು ಗ್ರಾಮಾಂತರ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ₹150 ಕೋಟಿಗೂ ಹೆಚ್ಚಿನ ಮೊತ್ತದ ಅಕ್ರಮ ನಡೆದಿರುವ ಕುರಿತು ಉಲ್ಲೇಖಿಸಿದ್ದಾರೆ.

ಜತೆಗೆ, ಈ ಅಕ್ರಮಗಳಿಗೆ ಸಂಬಂಧಿಸಿ ಬೆಂಗಳೂರು ಗ್ರಾಮಾಂತರ, ಗದಗ ಮತ್ತು ಕೊಪ್ಪಳ ಜಿಲ್ಲೆಗಳ ಹಿಂದಿನ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮಕ್ಕೂ ಶಿಫಾರಸು ಮಾಡಲಾಗಿದೆ. ಇದೀಗ ವರದಿಯನ್ನು ಸಂಪುಟ ಸಭೆ ಅಂಗೀಕರಿಸಿದ್ದು, ಮುಂದೆ ವರದಿ ಅನ್ವಯ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಆಕ್ಸಿಜನ್‌ ದುರಂತ-ಕಾಯಂ ನೌಕರಿ ಚರ್ಚೆ:

ಕೊವಿಡ್‌ 19 ಅವಧಿಯಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಆಕ್ಸಿಜನ್‌ ಪೂರೈಕೆಯಲ್ಲಿ ನಿರ್ಲಕ್ಷ್ಯ ತೋರಿದ ಕಾರಣದಿಂದಾಗಿ 30ಕ್ಕೂ ಹೆಚ್ಚಿನ ಕೋವಿಡ್‌ 19 ಸೋಂಕಿತರು ಮೃತಪಟ್ಟಿದ್ದರು. ಹೀಗೆ ಸಾವಿಗೀಡಾದವರ ಕುಟುಂಬದ ಒಬ್ಬರಿಗೆ ಕಾಯಂ ನೌಕರಿ ನೀಡುವುದಾಗಿ ಈ ಹಿಂದೆ ಸರ್ಕಾರ ಘೋಷಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಯಾವ ರೀತಿಯ ಉದ್ಯೋಗ ನೀಡಬೇಕು ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಕೃಷ್ಣದೇವರಾಯ ಸಮಾಧಿ

ನಿರ್ಲಕ್ಷ್ಯ: ಡೀಸಿಗೆ ನೋಟಿಸ್

ಆನೆಗೊಂದಿಯ ಶ್ರೀ ಕೃಷ್ಣದೇವರಾಯ ಸಮಾಧಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ ಕೊಪ್ಪಳ ಜಿಲ್ಲಾಧಿಕಾರಿಗೆ ಸಚಿವ ಸಂಪುಟ ಸಭೆ ನಡೆಯುತ್ತಿರುವಾಗಲೇ ನೋಟಿಸ್ ನೀಡಲಾಗಿದೆ.

ಕೆಲ ದಿನಗಳ ಹಿಂದೆ ಶ್ರೀ ಕೃಷ್ಣದೇವರಾಯ ಸಮಾಧಿ ಮೇಲೆಯೇ ಮಾಂಸ ಕತ್ತರಿಸಿದ್ದರು. ಘಟನೆ ಬೆಳಕಿಗೆ ಬಂದ ನಂತರ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಕೊಪ್ಪಳ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದಿರಲಿಲ್ಲ. ಇದರಿಂದ ಅಸಮಾಧಾನಗೊಂಡಿದ್ದ ಎಚ್.ಕೆ.ಪಾಟೀಲ್, ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು.

ವಿಷಯ ತಿಳಿದು ಗರಂ ಆದ ಸಿದ್ದರಾಮಯ್ಯ, ಕೊಪ್ಪಳ ಜಿಲ್ಲಾಧಿಕಾರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿರುವಾಗಲೇ, ಮುಖ್ಯ ಕಾರ್ಯದರ್ಶಿ ಅವರು ವಾಟ್ಸಾಪ್ ಮೂಲಕ ಕೊಪ್ಪಳ ಜಿಲ್ಲಾಧಿಕಾರಿಗೆ ನೋಟಿಸ್ ಕಳುಹಿಸಿದರು.

Share this article