ಹೊಸಕೋಟೆ: ಜಮೀನಿನ ದಾಖಲೆಗಳಿಗಾಗಿ ಅರ್ಜಿ ಹಾಕಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಕಾಂಗ್ರೆಸ್ ಸರ್ಕಾರ ಕಂದಾಯ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ತಂದಿದ್ದು, ಇನ್ಮುಂದೆ ರೈತರು ಭೂ ದಾಖಲೆಗಳಿಗಾಗಿ ಅಲೆದಾಡುವಂತಿಲ್ಲ, ಮನೆ ಬಾಗಿಲಿಗೆ ಮಾಲೀಕತ್ವದ ಗ್ಯಾರಂಟಿಯನ್ನು ಅಧಿಕಾರಿಗಳು ತಲುಪಿಸಲಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ನಗರದದಲ್ಲಿ ಕಂದಾಯ ಇಲಾಖೆ, ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಿದ್ದ ಕಂದಾಯ ಇಲಾಖೆಯ ಸೇವೆಗಳ ಗ್ಯಾರಂಟಿ ಸಮರ್ಪಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯದಲ್ಲಿ 2.6 ಲಕ್ಷ ಪೋಡಿ ಪ್ರಕರಣಗಳ ದುರಸ್ತಿ ಮಾಡಲಾಗಿದೆ. ಮುಂದಿನ ಎರಡು ವರ್ಷದಲ್ಲಿ 5 ಲಕ್ಷ ಪೋಡಿ ದುರಸ್ತಿ ಮಾಡುವ ಗುರಿ ಹೊಂದಲಾಗಿದೆ. ಸರ್ಕಾರದ ಸಾವಿರ ದಿನಗಳ ಕೆಲಸ ಸಮರ್ಪಣೆ ಮಾಡುವುದು ನಮ್ಮ ಉದ್ದೇಶ. ನಾವು ಏನು ಕೆಲಸ ಮಾಡಿದ್ದೀವಿ, ಅದನ್ನು ನಿಮಗೆ ತೋರಿಸಬೇಕು ಎನ್ನುವ ಉದ್ದೇಶದಿಂದ ಸಮರ್ಪಣಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇಂದಿರಾಗಾಂಧಿ, ದೇವರಾಜ ಅರಸು ಕಾಲದಲ್ಲಿ ಜಮೀನುಗಳು ರೈತರಿಗೆ ಮಂಜೂರಾಗಿತ್ತು. ಆ ಜಮೀನುಗಳೀಗೆ ಪೋಡಿ, ಸ್ಕೆಚ್, ಕ್ರಯ, ಆಕಾರ್‌ ಬಂದ್ ಆಗಿರಲಿಲ್ಲ. ದರಕಾಸ್ತು ಜಮೀನುಗಳು ಹಾಗೆ ಉಳಿದಿದ್ದವು. ದಾಖಲೆ ಇಲ್ಲ ಅಂದ್ರೆ ನೀವು ಆ ಜಮೀನು ಮೇಲೆ ಏನು ಮಾಡಕ್ಕೆ ಆಗಲ್ಲ, ಮಾಲಿಕತ್ವಕ್ಕೆ ಗ್ಯಾರಂಟಿ ಇರಲಿಲ್ಲ. ಪೋಡಿ ಮಾಡಲು ಹಿಂದಿನ ಸರ್ಕಾರಗಳು ಆಸಕ್ತಿ ತೋರಿಸಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಇಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸರ್ವೆ, ಪೋಡಿ ದುರಸ್ತಿ, ಸ್ಕೆಚ್, ಪಹಣಿಯೊಂದಿಗೆ ಮನೆಗೆ ಭೂ ಗ್ಯಾರಂಟಿ ತರಲಾಯಿತು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, 75 ವರ್ಷಗಳಿಂದ ಸಾಕಷ್ಟು ರೈತರ ಭೂಮಿ ಪೋಡಿ, ಆಕಾರ್ ಬಂದ್, ಹಕ್ಕು ಪತ್ರ ಸಿಕ್ಕಿಲ್ಲ ಎಂಬ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೃಷ್ಣ ಬೈರೇಗೌಡ ರಿಗೆ ಕಂದಾಯ ಇಲಾಖೆ ನೀಡಿದೆ. ರೈತರು ಕಚೇರಿಗೆ ಅಲೆಯುವುದು, ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಕಂದಾಯ ಸಚಿವರು ಮನೆಮನೆಗೆ ಹಕ್ಕು ಪತ್ರ ನೀಡುವ ಕೆಲಸ ಮಾಡುತ್ತಿದ್ದಾರೆ. ರೈತರು ಇದನ್ನೆಂದಿಗೂ ಮರೆಯುವಂತಿಲ್ಲ. ರೈತರ ಬಹುತೇಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಕ್ಕಂತಾಗಿದೆ ಎಂದರು.

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಸರ್ಕಾರದ ಕಾರ್ಯಕ್ರಮ, ಯೋಜನೆಗಳು ಸಮಾಜದ ಕೆಳವರ್ಗದ ಏಳಿಗೆಗಾಗಿಯೇ ರೂಪಿಸಲಾಗಿದೆ. ದಿವಂಗತ ದೇವರಾಜ ಅರಸು ಉಳುವವನಿಗೆ ಭೂಮಿ ಎಂದು ರೈತರ ಪರ ಕ್ರಾಂತಿ ಮಾಡಿದರು. ಈಗ ಸಚಿವ ಕೃಷ್ಣಬೈರೇಗೌಡರು ಕಂದಾಯ ಇಲಾಖೆಯಿಂದ ಪೋಡಿ, ಪೌತಿಖಾತೆ, ಸಾಮಾಜಿಕ ಭದ್ರತಾ ಯೋಜನೆ ಹಾಗೂ ವಿವಿಧ ಯೋಜನೆಗಳ ಮೂಲಕ ಜನಾಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಸರ್ಕಾರಕ್ಕೆ ಜನರ ಮೇಲಿರುವ ಅಭಿವೃದ್ಧಿ ಇಚ್ಚಾಶಕ್ತಿ ರೂಪಿಸುವ ಯೋಜನೆಗಳಿಂದ ತಿಳಿಯುತ್ತೆ. ಅಂತಹ ಕಾರ್ಯಕ್ರಮಗಳನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿ ತೋರಿಸಿದೆ ಎಂದರು.

ಕಾರ್ಯಕ್ರಮದಲ್ಲಿ 3100 ದರಖಾಸ್ತು ಪೋಡಿ, 10200 ಪೌತಿ ಖಾತೆ ಹಾಗೂ 1700 ಸಾಮಾಜಿಕ ಭದ್ರತೆಯ ಅಭಿಯಾನದಡಿ ಒಟ್ಟು 15000 ಕಂದಾಯ ಸೇವೆಗಳ ದಾಖಲೆಗಳನ್ನು ವಿತರಿಸಲಾಯಿತು.


ಜಿಲ್ಲಾಧಿಕಾರಿ ಡಾ.ಕೆಎನ್.ಅನುರಾಧ, ತಹಸೀಲ್ದಾರ್ ಸೋಮಶೇಖರ್, ಬಮುಲ್ ನಿರ್ದೇಶಕ ಬಿ.ವಿ.ಸತೀಶ್‌ಗೌಡ, ೫ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ನೆಲಮಂಗಲ ಶಾಸಕ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ, ಪುಟ್ಟಣ್ಣ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಬಿ.ರಾಜಣ್ಣ, ಹೊಸಕೋಟೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎನ್.ಕೇಶವಮೂರ್ತಿ, ಹೊಸಕೋಟೆಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿಕ್ಕಹುಲ್ಲೂರು ಬಚ್ಚೇಗೌಡ ಹಾಜರಿದ್ದರು.

ಬಾಕ್ಸ್‌......

ಶೀಘ್ರದಲ್ಲೇ ಕಂದಾಯ ಇಲಾಖೆಗೆ 750 ಸರ್ವೆಯರ್ ನೇಮಕ

ಕಂದಾಯ ಕೆಲಸಗಳು ಕ್ಷಿಪ್ರವಾಗಿ ನಡೆಯಲು ಈಗಾಗಲೆ 1,219 ಲೈಸೆನ್ಸ್ ಸರ್ವೇಯರ್‌ಗಳಿದ್ದು, ಅವರಿಗೆ ರೋಬೋ ಮಿಷನರಿ ಕೊಟ್ಟು ಕೆಲಸದ ಒತ್ತಡ ಕಡಿಮೆ ಮಾಡಲಾಗಿದೆ. ವಿಎಗಳಿಗೆ ಲ್ಯಾಪ್ ಟಾಪ್ ವಿತರಿಸಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳು ರೈತರ ಮನೆಬಾಗಿಲಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೆ 1000 ಗ್ರಾಮ ಲೆಕ್ಕಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಶೀಘ್ರದಲ್ಲೇ 750 ಸರ್ವೆಯರ್ ನೇಮಕಾತಿ ಮಾಡಲಾಗುತ್ತದೆ. ರಾಜ್ಯಾದ್ಯಂತ 7850 ಗ್ರಾಮ ಲೆಕ್ಕಾಧಿಕಾರಿ ಕಚೇರಿ ಸ್ಥಾಪಿಸಲಾಗಿದೆ. ಇವೆಲ್ಲವೂ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಮಾಡುತ್ತಿರುವ ಕೆಲಸಗಳಾಗಿವೆ. ನಮ್ಮ ಸರ್ಕಾರ ಬಂದಾಗ ಆರಂಭದಲ್ಲಿ ತಹಸೀಲ್ದಾರ್, ಎಸಿ, ಡಿಸಿ ಕೋರ್ಟ್‌ಗಳಲ್ಲಿ ಸುಮಾರು 10774 ಕೇಸ್‌ಗಳು ಬಾಕಿ ಉಳಿದಿದ್ದವು. ಈಗ ಕೇವಲ ೪೮೮ ಬಾಕಿ ಇದೆ. ಶೇ.99ರಷ್ಟು ಬಾಕಿ ಕೇಸ್ ಗಳ ವಿಲೇವಾರಿ ಮಾಡಲಾಗಿದೆ. ಶಾಸಕ ಶರತ್ ಬಚ್ಚೇಗೌಡರ ಬೇಡಿಕೆಯಂತೆ ಹೊಸಕೋಟೆಯಲ್ಲಿ 16 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದು ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಶೀಘ್ರವಾಗಿ ಹಳೆಯ ತಾಲೂಕು ಕಚೇರಿ ಕೆಡವಿ ನೂತನ ಪ್ರಜಾಸೌಧ ನಿರ್ಮಾಣ ಮಾಡಲಾಗುವುದು ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಬಾಕ್ಸ್‌........

ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ

ಶಾಸಕ ಶರತ್ ಬಚ್ಚೇಗೌಡ ಮುಂಚೂಣಿಯಲ್ಲಿ

ಸರ್ಕಾರ ಯಾವುದೇ ರೀತಿಯ ಹೊಸ ಯೋಜನೆಗಳನ್ನು ಜಾರಿಗೆ ತಂದರೂ ಅದನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಲ್ಲಿ ಶಾಸಕ ಶರತ್ ಬಚ್ಚೇಗೌಡರು ಮುಂಚೂಣಿಯಲ್ಲಿರುತ್ತಾರೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು. ಶಾಸಕರಾಗಿ ಆಯ್ಕೆಯಾದ ಬಳಿಕ ಜನಪರ ಕೆಲಸಗಳನ್ನು ಅನುಷ್ಠಾನಗೊಳಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ. ಆ ಜವಾಬ್ದಾರಿಯನ್ನು ಶರತ್ ಬಚ್ಚೇಗೌಡರು ನಿಶ್ಚಿತ ಗುರಿ ಇಟ್ಟುಕೊಂಡು ಮಾಡುತ್ತಿದ್ದಾರೆ. ಅದರ ಪರಿಣಾಮವಾಗಿಯೇ ಇಂದು ಜಿಲ್ಲಾ ಮಟ್ಟದ ಕಂದಾಯ ಇಲಾಖೆ ಸವಲತ್ತುಗಳ ಸಮರ್ಪಣಾ ಕಾರ್ಯಕ್ರಮ ಹೊಸಕೋಟೆಯಲ್ಲಿ ಮಾಡುವಂತಾಗಿದೆ. ಪ್ರಮುಖವಾಗಿ ಐಟಿ ಇಲಾಖೆ ವ್ಯಾಪ್ತಿಗೆ ಬರುವ ಕಿಯೋನಿಕ್ಸ್ ಅಧ್ಯಕ್ಷರಾಗಿ ಶರತ್ ಬಚ್ಚೇಗೌಡರು ಉತ್ತಮ ಕೆಲಸ ಮಾಡುತ್ತಿದ್ದು ಅವರಿಗೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಉಜ್ವಲ ಭವಿಷ್ಯವಿದೆ. ಇನಷ್ಟು ದೊಡ್ಡ ಜವಾಬ್ದಾರಿಗಳನ್ನು ನಿಭಾಯಿಸಲಿದ್ದಾರೆ ಎಂದು ಹೇಳಿದರು.

(ಎರಡು ಫೋಟೋ ಬಳಸಿ, ಮೇಲೆ ಪ್ಯಾನಲ್ನನಲ್ಲಿ ಒಂದು ಫೋಟೋ ಬಳಸಿ)

ಫೋಟೋ : 4 ಹೆಚ್‌ಎಸ್‌ಕೆ 2, 3 ಮತ್ತು 4

ಹೊಸಕೋಟೆತಲ್ಲಿ ಕಂದಾಯ ಇಲಾಖೆ, ಜಿಲ್ಲಾಡಳಿತದ ಸಹಯೋಗದಲ್ಲಿ ಕಂದಾಯ ಇಲಾಖೆಯ ಸೇವೆಗಳ ಗ್ಯಾರಂಟಿ ಸಮರ್ಪಣಾ ಸಮಾವೇಶವನ್ನು ಸಚಿವರಾದ ಕೃಷ್ಣಬೈರೇಗೌಡ, ಕೆ.ಎಚ್.ಮುನಿಯಪ್ಪ, ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.