ಸಮಾಜ ಕಟ್ಟುವ ಕಾರ್ಯಕ್ಕೆ ಭೋವಿ ಜನಾಂಗದ ಕೊಡುಗೆ: ಶಾಸಕ ಕೆ.ಎಸ್.ಆನಂದ್

KannadaprabhaNewsNetwork | Published : Feb 2, 2025 11:46 PM

ಸಾರಾಂಶ

ಕಡೂರು, ಬೆವರಿಳಿಸಿ ಶ್ರಮ ಹಾಕುವ ಮೂಲಕ ಸಮಾಜ ಕಟ್ಟುವ ಕಾರ್ಯಕ್ಕೆ ಭೋವಿ ಜನಾಂಗ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಗರುಗದಹಳ್ಳಿ ಭೋವಿ ಕಾಲೋನಿಯಲ್ಲಿ ಶ್ರೀಲಕ್ಷ್ಮಿವೆಂಕಟೇಶ್ವರ ಸ್ವಾಮಿಗೆ ಕಲಾಹೋಮ, ಕುಂಭಾಭೀಷೇಕ

ಕನ್ನಡಪ್ರಭ ವಾರ್ತೆ, ಕಡೂರು

ಬೆವರಿಳಿಸಿ ಶ್ರಮ ಹಾಕುವ ಮೂಲಕ ಸಮಾಜ ಕಟ್ಟುವ ಕಾರ್ಯಕ್ಕೆ ಭೋವಿ ಜನಾಂಗ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ತಾಲೂಕಿನ ಗರುಗದಹಳ್ಳಿ ಭೋವಿ ಕಾಲೋನಿಯಲ್ಲಿ ನಡೆದ ಶ್ರೀಲಕ್ಷ್ಮಿವೆಂಕಟೇಶ್ವರ ಸ್ವಾಮಿಗೆ ಕಲಾಹೋಮ, ಕುಂಭಾಭೀಷೇಕ, ಸುದರ್ಶನ ಹೋಮ ಮತ್ತು ಹೊಸ ಆಭರಣ ಸಮರ್ಪಣಾ ಕಾರ್ಯಕ್ರಮದ ನಿಮಿತ್ತ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು. ಕೋಟೆ, ಕೆರೆ, ಕಟ್ಟೆಗಳನ್ನು ನಿರ್ಮಿಸಿದವರು ಭೋವಿ ಸಮಾಜದವರು. ಅಷ್ಟೇ ಅಲ್ಲ ಈ ಹಿಂದೆ ನಾವು ಕುಡಿಯುವ ನೀರಿಗಾಗಿ ಬಳಸುತ್ತಿದ್ದ ಬಾವಿಗಳನ್ನು ನಿರ್ಮಿಸಿದವರು ಭೋವಿ ಸಮಾಜದವರು. ಭೋವಿ ಸಮಾಜದವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ಭೋವಿ ಸಮಾಜದ ಋಣ ತೀರಿಸುವ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ಈ ಹಿನ್ನಲೆಯಲ್ಲಿ ಕಳೆದ 2 ವರ್ಷದಲ್ಲಿ ಭೋವಿ ಕಾಲೋನಿಗಳ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಬಿ.ಕೆ.ಹೊಸೂರು ಗ್ರಾಮದಲ್ಲಿ ಶುದ್ದಗಂಗಾ ಘಟಕ ಸ್ಥಾಪನೆಗೆ ಅನುದಾನ ನೀಡಿದ್ದೇನೆ. ಹಂಪಾಪುರದಲ್ಲಿ ಸಿ.ಸಿ ರಸ್ತೆ ನಿರ್ಮಾಣಕ್ಕೆ ₹ 70 ಲಕ್ಷ, ವಕ್ಕಲಗೆರೆ ಭೋವಿ ಕಾಲೋನಿ ಒಳಗೆ ಸಿ.ಸಿ. ರಸ್ತೆ ನಿರ್ಮಾಣಕ್ಕೆ ₹25 ಲಕ್ಷ ಮತ್ತಿಹಳ್ಳಿ ಭೋವಿ ಕಾಲೋನಿಗೆ ₹5 ಲಕ್ಷ ಅನುದಾನ ನೀಡಿದ್ದೇನೆ. ಈ ಮೂಲಕ ಪ್ರತಿ ಭೋವಿ ಕಾಲೋನಿಗಳ ಅಭಿವೃದ್ಧಿ ಮೂಲಕ ಸಮಾಜ ತಲುಪುವ ಪ್ರಯತ್ನ ಮಾಡಿದ್ದೇನೆ ಎಂದರು. ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಪ್ರತಿ ಹಳ್ಳಿಯಲ್ಲೂ ದೇವಸ್ಥಾನಗಳ ನಿರ್ಮಾಣವಾಗುತ್ತಿರುವುದು ಜನರಲ್ಲಿ ಧಾರ್ಮಿಕ ಜಾಗೃತಿ ಹೆಚ್ಚಾಗುತ್ತಿರುವುದರ ಸಂಕೇತ ಎಂದು ಹೇಳಿದರು. ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಮತ್ತು ಗ್ರಾಮದ ಮುಖಂಡ ಷಣ್ಮುಖ ಭೋವಿ ಮಾತನಾಡಿ, ಭೋವಿ ಜನಾಂಗದವರು ಶ್ರಮಿಕ ವರ್ಗಕ್ಕೆ ಸೇರಿದ ವರಾಗಿದ್ದಾರೆ. ಯಾರ ಮುಂದೆಯೂ ಕೈಚಾಚುವವರಲ್ಲ. ಕೆರೆ, ಕಟ್ಟೆ ಮತ್ತು ಬಾವಿಗಳನ್ನು ಕಟ್ಟಿದವರು ಭೋವಿ ಸಮಾಜದವರಾಗಿದ್ದಾರೆ. ಅಷ್ಟೇ ಏಕೆ ಹಿಂದೆ ಕೋಟೆಗಳನ್ನು ಕಟ್ಟಿದವರು ಕೂಡ ಭೋವಿಗಳಾಗಿದ್ದಾರೆ. ಆದರೆ ಇತ್ತೀಚೆಗೆ ಯಂತ್ರಗಳು ಬಂದಿರುವುದರಿಂದ ಭೋವಿ ಸಮಾಜದವರಿಗೆ ಬೇಡಿಕೆ ಕಡಿಮೆಯಾಗಿದೆ ಎಂದರು. ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಸಂತೋಷ್, ಸದಸ್ಯ ಎಂ.ಮುರುಳಿ, ಜೆಡಿಎಸ್ ಮುಖಂಡ ಚೇತನ್ ಕೆಂಪರಾಜ್, ಮುಖಂಡರಾದ ದೊಣ್ಣೆಕೋರನಹಳ್ಳಿ ಉಮೇಶ್, ಪಿ.ಸಿ.ಪ್ರಸನ್ನ, ತಿಮ್ಮಲಾಪುರ ದಿನೇಶ್, ಯರದಕೆರೆ ರಾಜಣ್ಣ,ಬಿ.ಎನ್.ಗಿರೀಶ್, ಎಚ್.ಟಿ.ತಿಪ್ಪೇಶ್ ಮತ್ತಿತರರು ಇದ್ದರು. 2ಕೆಕೆಡಿಯು2.

ಕಡೂರು ತಾಲೂಕಿನ ಗರುಗದಹಳ್ಳಿ ಭೋವಿ ಕಾಲೋನಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಶಾಸಕ ಕೆ.ಎಸ್.ಆನಂದ್ ಗ್ರಾಮಕ್ಕಾಗಿ ದುಡಿದ ಷಣ್ಮಖ ಭೋವಿ ಅವರನ್ನು ಸನ್ಮಾನಿಸಿದರು. ಭಂಡಾರಿಶ್ರೀನಿವಾಸ್ ಗ್ರಾಮಸ್ಥರು ಇದ್ದರು.

Share this article