ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಕ್ರಿಯಾ ಶರೀರ ವಿಭಾಗದ ವತಿಯಿಂದ ಒಂದು ದಿನದ ರಾಷ್ಟ್ರಮಟ್ಟದ ‘ಅಗ್ನಿಮಂಥನ- ೨೦೨೪’ ಸಮ್ಮೇಳನ ಶನಿವಾರ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿಶ್ರೀ ಧರ್ಮಸ್ಥಳ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸ್ಮರಣಾರ್ಥವಾಗಿ ಇಲ್ಲಿನ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಕ್ರಿಯಾ ಶರೀರ ವಿಭಾಗದ ವತಿಯಿಂದ ಒಂದು ದಿನದ ರಾಷ್ಟ್ರಮಟ್ಟದ ‘ಅಗ್ನಿಮಂಥನ- ೨೦೨೪’ ಸಮ್ಮೇಳನ ಶನಿವಾರ ನಡೆಯಿತು.
ಕರ್ನಾಟಕ ಸರ್ಕಾರದ ಆಯುಷ್ ಆಯುಕ್ತ ಡಾ. ಶ್ರೀನಿವಾಸಲು ಕೆ. ಅವರು ಸಮ್ಮೇಳನವನ್ನು ಉದ್ಘಾಟಿಸಿ, ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಉಳಿಸಿ ಬೆಳೆಸುವಲ್ಲಿ ಸ್ಥಳೀಯ ಆಯುರ್ವೇದ ತಜ್ಞರ ಕೊಡುಗೆ ಅಪಾರವಾಗಿದೆ. ವಿದ್ಯಾರ್ಥಿಗಳು ಈ ಪದ್ಧತಿಯ ಭವಿಷ್ಯವಾಗಿದ್ದು, ಈ ಪದ್ಧತಿಯ ಏಳಿಗೆಯ ಹೊಣೆಹೊತ್ತವರಾಗಿದ್ದಾರೆ. ಆಯುರ್ವೇದ ಶೈಕ್ಷಣಿಕ ಸಂಸ್ಥೆಗಳು ಜನ ಸಾಮಾನ್ಯರಿಗೂ ಆಯುರ್ವೇದದ ಲಾಭವನ್ನು ದೊರಕಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ ಎಂದು ಶ್ಲಾಘಿಸಿದರು.ಉಡುಪಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಸತೀಶ್ ಆಚಾರ್ಯ ಸಮ್ಮೇಳನಕ್ಕೆ ಶುಭ ಹಾರೈಸಿ, ಸಮ್ಮೇಳನದ ಪ್ರಯೋಜನವನ್ನು ಪಡೆದುಕೊಳ್ಳುವಂತಾಗಲಿ ಎಂದರು.ಇದೇ ಸಂದರ್ಭದಲ್ಲಿ ಕ್ರಿಯಾ ಶಾರೀರ ವಿಭಾಗದಿಂದ ‘ಧನಂಜಯ’ ಸಂಶೋಧನ ಪ್ರಬಂಧಗಳ ಕಿರು ಹೊತ್ತಿಗೆಯನ್ನು ಅನಾವರಣಗೊಳಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ., ಈ ಸಮ್ಮೇಳನದಲ್ಲಿ ಮಂಡಿಸಲಿರುವ ಪ್ರಬಂಧಗಳ ಸದ್ಭಳಕೆ ತಮ್ಮ ಪ್ರಾಯೋಗಿಕ ವೈದ್ಯಕೀಯ ಜ್ಞಾನದ ವೃದ್ಧಿಗೆ ಸಹಾಯಕವಾಗಲೆಂದು ಆಶಿಸಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ ಎಸ್. ಸ್ವಾಗತಿಸಿ ಪ್ರಾಸ್ತಾವನೆಗೈದರು. ಸಮ್ಮೇಳನದ ಮುಖ್ಯ ಸಂಘಟನಾ ಕಾರ್ಯದಶಿ ಡಾ. ಸುಧೀಂದ್ರ ಆರ್. ಮೊಹರೇರ್ ವಂದಿಸಿದರು. ರೋಗನಿದಾನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಅರುಣ್ ಕುಮಾರ್ ಹಾಗೂ ಕೌಮಾರಭೃತ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕಾವ್ಯ ಕಾರ್ಯಕ್ರಮ ನಿರೂಪಿಸಿದರು.ತದನಂತರ ಸಂಪನ್ಮೂಲ ವ್ಯಕ್ತಿಗಳಾದ ರಾಷ್ಟ್ರೀಯ ಆಯುರ್ವೇದ ಗುರು ನವದೆಹಲಿ ಇದರ ವೈದ್ಯ ಉಪೇಂದ್ರ ದೀಕ್ಷಿತ್, ಸರ್ಕಾರಿ ಆಯುರ್ವೇದ ಕಾಲೇಜು ಕಣ್ಣೂರಿನ ಶರೀರ ಕ್ರಿಯಾ ವಿಭಾಗ ಪ್ರಾಧ್ಯಾಪಕ ಡಾ. ಅನಂತ ಲಕ್ಷ್ಮಿ ಹಾಗೂ ಎಸ್.ಡಿ.ಎಂ. ಆಯುರ್ವೇದ ಕಾಲೇಜು ಉಡುಪಿಯ ರೋಗನಿದಾನ ವಿಭಾಗ ಸಹಪ್ರಾಧ್ಯಾಪಕ ಡಾ. ಪ್ರಸನ್ನ ಎನ್. ಮೊಗಸಾಲೆ ಇವರಿಂದ ವೈಜ್ಞಾನಿಕ ಉಪನ್ಯಾಸವು ನೆರವೇರಿತು.ರಾಷ್ಟ್ರಾದ್ಯಂತ ವಿವಿಧ ಸಂಸ್ಥೆಗಳಿಂದ ೪೦೦ ಪ್ರತಿನಿಧಿಗಳು ಆಗಮಿಸಿ, ಸುಮಾರು ೨೫೦ ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳು ಮತ್ತು ಭಿತ್ತಿಪತ್ರಗಳು ಮಂಡನೆಯಾದವು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.