-ರೇಣುಕಾಚಾರ್ಯ ಜಯಂತಿ, ಜಾತ್ರಾ ಮಹೋತ್ಸವದಂಗ ಧರ್ಮ ಜಾಗೃತಿ ಸಮಾರಂಭ
ಕನ್ನಡಪ್ರಭ ವಾರ್ತೆ ಸೊರಬ
ಮನುಷ್ಯ ಯಂತ್ರದಂತೆ ದುಡಿದರೂ ಜೀವನದಲ್ಲಿ ಶಾಂತಿ ನೆಮ್ಮದಿಯಿಲ್ಲ. ವ್ಯಕ್ತಿ ವಿಕಸನಕ್ಕೆ ಧರ್ಮ ಆಧ್ಯಾತ್ಮಗಳ ಕೊಡುಗೆ ಅಪಾರ. ಅರಿವಿನ ಕಣ್ಣು ತೆರೆಸಲು ಗುರು ಮತ್ತು ಗುರು ಕಾರುಣ್ಯ ಮುಖ್ಯವೆಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.ಶಾಂತಪುರ ಸಂಸ್ಥಾನ ಹಿರೇಮಠದಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ೨೩ನೇ ವರ್ಷದ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಅಶಾಂತಿ ಅಜ್ಞಾನದ ತಾಕಲಾಟದಲ್ಲಿ ಸಮಾಜ ಬಡವಾಗಬಾರದೆಂದು ಶ್ರೀಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ನಾಗರಿಕತೆಯ ನೆಪದಲ್ಲಿ ನಿಜವಾದ ಮೌಲ್ಯಗಳು ಕಣ್ಮರೆಯಾಗಬಾರದು. ಮನುಷ್ಯನಲ್ಲಿ ದೈವೀ ಗುಣಗಳು ಬೆಳೆದು ಬಂದರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಇತಿಹಾಸ ಪರಂಪರೆವುಳ್ಳ ಶಾಂತಪುರ ಸಂಸ್ಥಾನ ಹಿರೇಮಠ ಶ್ರೀರಂಭಾಪುರಿ ಪೀಠದ ಶಾಖಾ ಮಠವಾಗಿದ್ದು, ಮಲೆನಾಡಿನ ಪ್ರಾಂತದಲ್ಲಿ ಭಕ್ತ ಸಮುದಾಯಕ್ಕೆ ಸಂಸ್ಕಾರ ಮತ್ತು ಧರ್ಮದ ಅರಿವು ಮೂಡಿಸುವ ಕೆಲಸವನ್ನು ಶಿವಾನಂದ ಶಿವಾಚಾರ್ಯ ಸ್ವಾಮಿಗಳು ನಿರಂತರ ಮಾಡುತ್ತಾ ಬಂದಿದ್ದಾರೆ ಎಂದರು.
ಬಂಕಾಪುರ ಅರಳೆಲೆಮಠದ ರೇವಣಸಿದ್ದ ಶಿವಾಚಾರ್ಯಸ್ವಾಮಿ ಮಾತನಾಡಿ, ಬೆಟ್ಟದಷ್ಟು ಕಷ್ಟಗಳು ಬಂದರೂ ಅಚಲವಾಗಿರುವ ಗಟ್ಟಿತನ ಬೇಕು. ಮನಸ್ಸು ಮಾತು ಕೃತಿ ಒಂದಾಗಿ ನಡೆಯುವವನ ಜೀವನ ಉಜ್ವಲಗೊಳ್ಳುತ್ತದೆ. ದುಡಿಯುವ ಕೈಗೆ ಬಡತನವಿಲ್ಲ. ಆಲಸ್ಯದ ಬದುಕಿಗೆ ನೆಮ್ಮದಿಯಿಲ್ಲ. ಉರಿಯುವ ದೀಪ ಮತ್ತೊಂದು ದೀಪ ಬೆಳಗಿಸುತ್ತದೆ. ಆದರೆ, ಉರಿಯದಿರುವ ಹಣತೆ ಮತ್ತೊಂದು ದೀಪ ಬೆಳಗಲು ಸಾಧ್ಯವಾಗದು. ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಜೀವನದ ಮೌಲ್ಯದ ದಶಧರ್ಮ ಸೂತ್ರಗಳ ಪರಿಪಾಲನೆಯಿಂದ ಬದುಕು ವಿಕಾಸಗೊಳ್ಳುತ್ತದೆ. ಶಾಂತಪುರ ಮಠದ ಶ್ರೀಗಳವರ ಶ್ರಮ ಸಾಧನೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಳಲಿ ಸಂಸ್ಥಾನ ಮಠದ ನಾಗಭೂಷಣ ಶ್ರೀಗಳು, ಜಡೆಮಠದ ಮಹಾಂತ ಸ್ವಾಮಿಗಳು, ಸಂಗೊಳ್ಳಿ ಗುರುಲಿಂಗ ಶ್ರೀಗಳು, ಕುರವತ್ತಿ ನಂದೀಶ್ವರ ಶ್ರೀಗಳು, ಹಾರನಹಳ್ಳಿ ಶಿವಯೋಗಿ ಶ್ರೀಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದಗೌಡ್ರು ಬಿಳಗಲಿ, ಅ.ಭಾ.ವೀ. ಮಹಾಸಭಾ ಜಡೆ ಹೋಬಳಿ ಘಟಕದ ಅಧ್ಯಕ್ಷ ಕೆ.ಬಂಗಾರಪ್ಪಗೌಡ್ರು ಪಾಲ್ಗೊಂಡಿದ್ದರು.
ಫೋಟೊ: ಸೊರಬ ತಾಲೂಕಿನ ಶಾಂತಪುರ ಸಂಸ್ಥಾನ ಹಿರೇಮಠದಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ೨೩ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದಲ್ಲಿ ಡಾ.ವೀರಸೋಮೇಶ್ವರ ಜಗದ್ಗುರು ಆಶೀರ್ವಚನ ನೀಡಿದರು.