ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕನ್ನಡ ಸಾಹಿತ್ಯಕ್ಕೆ ವಚನ ಚಳುವಳಿ ಕೊಡುಗೆ ಅಪಾರವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಹೇಳಿದರು.ಜಿಪಂ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸಂವಿಧಾನವೆಂಬ ಸಮಾನತೆ ಸಾರುವ ಪ್ರಬಲ ಅಸ್ತ್ರಕ್ಕೂ ಸ್ಫೂರ್ತಿಯಾಗಿರುವುದು ವಚನ ಚಳವಳಿ. ಆದರೆ ಇಂದಿನ ಸಮಾಜದಲ್ಲಿ ಸಾಧಕರನ್ನು ಜಾತಿಯಿಂದ ಗುರುತಿಸುತ್ತಿರುವುದು ವಿಷಾದಕರ ಸಂಗತಿ ಎಂದು ಹೇಳಿದರು.
ಶರಣ ತತ್ವ ಚಿಂತಕ ಜೆ.ಎಸ್. ಪಾಟೀಲ ಉಪನ್ಯಾಸ ನೀಡಿ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಬಸವಣ್ಣವರ ಕಾಯಕ ಮತ್ತು ದಾಸೋಹ ಇವರೆರಡು ಆರ್ಥಿಕ ಸೂತ್ರಗಳಾಗಿದ್ದವು. ಬುದ್ಧ, ಬಸವ ಮತ್ತು ಅಂಬೇಡ್ಕರ್ ಪ್ರತಿಪಾದಿಸಿದ ಸಂಸ್ಕೃತಿ ನೆಲಮೂಲ ಸಂಸ್ಕೃತಿಯಾಗಿದ್ದು, ಅಸಮಾನತೆ, ಜಾತಿ ನಿರ್ಮೂಲನೆಗಾಗಿ ಚಳವಳಿಗಳು ಹುಟ್ಟಿಕೊಂಡವು. ಇದರ ಪರಿಹಾರವಾಗಿಯೇ ಬಸವಣ್ಣವ ಕಾಯಕ ಮತ್ತು ದಾಸೋಹ ಆರ್ಥಿಕ ಸೂತ್ರಗಳಾಗಿದ್ದವು ಎಂದು ಅಭಿಪ್ರಾಯಪಟ್ಟರು.ಸ್ವಾತಂತ್ರ್ಯ ಚಳುವಳಿಗೂ ಮುನ್ನವೇ ಆರ್ಯ, ಬುದ್ಧನ ಅಹಿಂಸೆ ಮತ್ತು ಬಸವಣ್ಣನವರ ಕ್ರಾಂತಿಯ ಮೂಲಕ ಮೂರು ಸ್ವಾತಂತ್ರ್ಯ ಸಂಗ್ರಾಮಗಳು ನಡೆದವು. ಬ್ರಿಟಿಷರ ವಿರುದ್ಧದ ಹೋರಾಟವಷ್ಟೇ ಸ್ವಾತಂತ್ರ್ಯ ಸಂಗ್ರಾಮವಲ್ಲ, ಸಾಮಾಜಿಕ, ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟಗಳು ಕೂಡ ಸ್ವಾತಂತ್ರ್ಯ ಸಂಗ್ರಾಮಗಳಾಗಿದ್ದವು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ಸಮುದಾಯದ ಮುಖಂಡರಾದ ವೈ.ವೈ. ತಿಮ್ಮಾಪೂರ, ಎ.ಎಸ್. ಚಂದಾವರೆ, ರೇಣುಕಾ ನ್ಯಾಮಗೌಡ, ಪ್ರೇಮಾನಾಥ ಗರಸಂಗಿ, ಮನೋಹರ ಇತರರು ಇದ್ದರು. ವೈಷ್ಣವಿ ಗೂಳಿ ಮತ್ತು ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.