ಕಾಂಗ್ರೆಸ್ ಸರ್ಕಾರದಿಂದ ತನಿಖಾ ಸಂಸ್ಥೆಗಳ ನಿಯಂತ್ರಣ : ನಿಖಿಲ್ ಕುಮಾರಸ್ವಾಮಿ ಆರೋಪ

KannadaprabhaNewsNetwork | Updated : Feb 08 2025, 12:49 PM IST

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಸ್ಐಟಿ ಸೇರಿ ಎಲ್ಲಾ ತನಿಖಾ ಸಂಸ್ಥೆಗಳನ್ನು ನಿಯಂತ್ರಿಸುತ್ತಿದೆ. ಈ ಬಗ್ಗೆ ಮಾತನಾಡಲಾಗದ ಪರಿಸ್ಥಿತಿಯಲ್ಲಿ ತನಿಖಾ ಸಂಸ್ಥೆಯ ಮುಖ್ಯಸ್ಥರು ಇದ್ದಾರೆ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ದೂರಿದರು.

  ಕೆ.ಆರ್.ಪೇಟೆ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಸ್ಐಟಿ ಸೇರಿ ಎಲ್ಲಾ ತನಿಖಾ ಸಂಸ್ಥೆಗಳನ್ನು ನಿಯಂತ್ರಿಸುತ್ತಿದೆ. ಈ ಬಗ್ಗೆ ಮಾತನಾಡಲಾಗದ ಪರಿಸ್ಥಿತಿಯಲ್ಲಿ ತನಿಖಾ ಸಂಸ್ಥೆಯ ಮುಖ್ಯಸ್ಥರು ಇದ್ದಾರೆ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ದೂರಿದರು.

ಮನ್ಮುಲ್ ಚುನಾವಣೆಯಲ್ಲಿ ಪರಾಜಿತ ಜೆಡಿಎಸ್ ಕಾರ್ಯಕರ್ತ, ಪಟ್ಟಣದ ಜಯನಗರ ಬಡಾವಣೆಯ ನಾಟನಹಳ್ಳಿ ಮಹೇಶ್ ಅವರ ನಿವಾಸಕ್ಕೆ ಔಪಚಾರಿಕ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಮುಡಾ ಹಗರಣದ ಪಾರದರ್ಶಕ ತನಿಖೆಯನ್ನು ಎದುರಿಸಿ ಮುಖ್ಯಮಂತ್ರಿಗಳು ಆರೋಪ ಮುಕ್ತರಾಗಬೇಕು ಎಂದರು.

ಮುಡಾ ಹಗರಣದ ಬಗ್ಗೆ ನಾವು ಪಾದಯಾತ್ರೆ ಮಾಡಿ ಜನಜಾಗೃತಿ ಮೂಡಿಸಿದ್ದೇವೆ. ಇಲ್ಲಸಲ್ಲದ ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳದೆ ಮುಖ್ಯಮಂತ್ರಿಗಳು ತನಿಖೆ ಎದುರಿಸಿ ಆರೋಪ ಮುಕ್ತರಾಗಬೇಕು ಎಂದು ಆಗ್ರಹಿಸಿದರು.

ರಾಜಕೀಯಕ್ಕೆ ಬರುವುದಕ್ಕೂ ಮುನ್ನ 1985ರಲ್ಲಿಯೇ ನನ್ನ ತಂದೆ ಎಚ್.ಡಿ.ಕುಮಾರಸ್ವಾಮಿ ಸಿನಿಮಾ ಹಂಚಿಕೆದಾರರಾಗಿದ್ದರು. ಸುಮಾರು 300ಕ್ಕೂ ಅಧಿಕ ಚಿತ್ರಗಳನ್ನು ಹಂಚಿಕೆ ಮಾಡಿದ್ದಾರೆ. ಬಿಡದಿ ಕೇತಗಾನಹಳ್ಳಿಯ ಬಳಿ ನಾವು ಕೊಂಡುಕೊಂಡಿರುವ ಜಮೀನು ಕುಮಾರಣ್ಣ ರಾಜಕೀಯಕ್ಕೆ ಬರುವುದಕ್ಕೂ ಮುನ್ನವೇ ಸಂಪಾದಿಸಿದ್ದು ಎಂದರು.

ನಾವು ಈಗ ಅದೇ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಕಳೆದ 40 ವರ್ಷಗಳಿಂದಲೂ ವಾಸವಾಗಿದ್ದೇವೆ. ಕೇತಗಾನಹಳ್ಳಿಯ ಜಮೀನಿನ ಬಗ್ಗೆ ನಮ್ಮ ಕುಟುಂಬ ಯಾವುದೇ ತನಿಖೆ ಎದುರಿಸಲೂ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು.

ಮನ್ಮುಲ್ ಚುನಾವಣೆಯಲ್ಲಿ ಶಾಸಕ ಎಚ್.ಟಿ.ಮಂಜು ಮತ್ತು ನಾಟನಹಳ್ಳಿ ಮಹೇಶ್ ಅವರ ಸೋಲಿನ ಬಗ್ಗೆ ಉತ್ತರಿಸಿದ ನಿಖಿಲ್, ಮನ್ಮುಲ್ ಸೇರಿದಂತೆ ಎಲ್ಲಾ ಸಹಕಾರ ಸಂಸ್ಥೆಗಳ ಚುನಾವಣೆಗಳು ಬೇರೆ ಬೇರೆ ರೀತಿ ನಡೆಯುತ್ತವೆ. ನಾನಾ ಕಾರಣಗಳು ಅಭ್ಯರ್ಥಿಗಳ ಸೋಲು- ಗೆಲುವಿನ ಮೇಲೆ ಪ್ರಭಾವ ಬೀರುತ್ತವೆ ಎಂದರು.

ರಾಜಕಾರಣದಲ್ಲಿ ಎಲ್ಲರನ್ನೂ ಸಮಾಧಾನಪಡಿಸಲು ಸಾಧ್ಯವಿಲ್ಲ. ಕೆಲವೊಂದು ವಿಚಾರಗಳನ್ನು ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸಬೇಕಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಭದ್ರವಾಗಿದೆ. ಮುಂಬರುವ ಸ್ಥಳೀಯ ಸಂಸ್ಥೆ ತಾಪಂ ಮತ್ತು ಜಿಪಂ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕರ್ತರ ಆಶಯಕ್ಕೆ ಅನುಗುಣವಾಗಿ ಜೆಡಿಎಸ್ ಪಕ್ಷವನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಯಿಂದ ಶೀಘ್ರದಲ್ಲಿಯೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಅವರ ನೇತೃತ್ವದಲ್ಲಿ ಶಾಸಕ ಎಚ್.ಟಿ.ಮಂಜು ಸೇರಿ ಜಿಲ್ಲೆಯ ಎಲ್ಲಾ ಮಾಜಿ ಶಾಸಕರ ಸಭೆ ಕರೆದು ಚರ್ಚಿಸಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ನಿಖಿಲ್ ತಿಳಿಸಿದರು.

ಕಳೆದ ಒಂದುವರೆ ತಿಂಗಳ ಹಿಂದೆ ನಮ್ಮ ಕಾರ್ಯಕರ್ತ ನಾಟನಹಳ್ಳಿ ಮಹೇಶ್ ಅವರ ತಾಯಿ ವಿಧಿವಶರಾಗಿದ್ದರು. ಆ ವೇಳೆ ನಾನು ಬರಲಾಗಲಿಲ್ಲ. ಇದೀಗ ತಾಲೂಕಿನ ಬೋಳಮಾರನಹಳ್ಳಿಯಲ್ಲಿ ಲಕ್ಷ್ಮೀದೇವಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದರು. ದೇವಾಲಯ ಕಾರ್ಯಕ್ರಮಕ್ಕೆ ಹೋಗುವ ಮುನ್ನ ಕಾರ್ಯಕರ್ತನ ನೋವಿನಲ್ಲಿ ಪಾಲ್ಗೊಳ್ಳಲು ಮಹೇಶ್ ನಿವಾಸಕ್ಕೆ ಆಗಮಿಸಿರುವುದಾಗಿ ಹೇಳಿದರು.

ತಾಲೂಕಿಗೆ ಆಗಮಿಸಿದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರನ್ನು ಶಾಸಕ ಎಚ್.ಟಿ.ಮಂಜು ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ತಾಲೂಕಿನ ಗಡಿ ಭಾಗವಾದ ಅಶೋಕನಗರದ ಬಳಿ ಸಂಭ್ರಮದಿಂದ ಬರಮಾಡಿಕೊಂಡರು.

ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿರ್ದೇಶಕ ಚೋಳೇನಹಳ್ಳಿ ಪುಟ್ಟಸ್ವಾಮಿಗೌಡ, ಯುವ ಮುಖಂಡ ಬಿ.ಎಂ.ಕಿರಣ್, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಎಚ್.ಟಿ.ಲೋಕೇಶ್, ನಾಟನಹಳ್ಳಿ ಬೋರ್‌ವೆಲ್ ಮಹೇಶ್, ತಾಪಂ ಮಾಜಿ ಸದಸ್ಯ ಹೊಸಹೊಳಲು ರಾಜು, ವಡ್ಡರಹಳ್ಳಿ ಮಹದೇವ, ಶಾಸಕರ ಆಪ್ತ ಸಹಾಯಕ ಅರಳುಕುಪ್ಪೆ ಪ್ರತಾಪ ಸೇರಿ ನೂರಾರು ಕಾರ್ಯಕರ್ತರು ಹಾಜರಿದ್ದರು.

Share this article