ಬಿಡಾಡಿ ದನ, ಬೀದಿ ನಾಯಿಗಳ ಹಾವಳಿ ನಿಯಂತ್ರಿಸಿ

KannadaprabhaNewsNetwork |  
Published : Dec 21, 2025, 03:30 AM IST
ಪೊಟೋ20ಎಸ್.ಆರ್‌.ಎಸ್‌3 (ನಗರದ ಅಟಲ್ ಜಿ ಸಭಾಂಗಣದಲ್ಲಿ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ ಮಾತನಾಡಿದರು.) | Kannada Prabha

ಸಾರಾಂಶ

ನಗರಸಭೆ ತನ್ನ ಮಾಲೀಕತ್ವದ ಆಸ್ತಿ ಕಬ್ಜಾ ಪಡೆಯಬೇಕು, ತೆರಿಗೆ ಸಂಗ್ರಹಣೆ ಸಮರ್ಪಕಗೊಳಿಸಬೇಕು, ಬಿಡಾಡಿ ದನ, ಬೀದಿ ನಾಯಿಗಳ ಹಾವಳಿ ನಿಯಂತ್ರಣದ ಜತೆ ಬೀದಿ ಬದಿ ವ್ಯಾಪಾರ ಕಾನೂನು ಬಿಗಿಗೊಳಿಸುವಂತೆ ನಗರಸಭೆ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಆಗ್ರಹಿಸಿದರು.

ನಗರಸಭೆ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಆಗ್ರಹ

ಬಿಡಾಡಿ ದನಗಳ ಹಾವಳಿ, ಬೀದಿ ನಾಯಿ ನಿಯಂತ್ರಣಕ್ಕೆ ಲಕ್ಷಾಂತರ ರೂ. ವೆಚ್ಚ ಮಾಡಲಾಗುತ್ತಿದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ: ಆಕ್ರೋಶ

ಕನ್ನಡಪ್ರಭ ವಾರ್ತೆ ಶಿರಸಿ

ನಗರಸಭೆ ತನ್ನ ಮಾಲೀಕತ್ವದ ಆಸ್ತಿ ಕಬ್ಜಾ ಪಡೆಯಬೇಕು, ತೆರಿಗೆ ಸಂಗ್ರಹಣೆ ಸಮರ್ಪಕಗೊಳಿಸಬೇಕು, ಬಿಡಾಡಿ ದನ, ಬೀದಿ ನಾಯಿಗಳ ಹಾವಳಿ ನಿಯಂತ್ರಣದ ಜತೆ ಬೀದಿ ಬದಿ ವ್ಯಾಪಾರ ಕಾನೂನು ಬಿಗಿಗೊಳಿಸುವಂತೆ ನಗರಸಭೆ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಆಗ್ರಹಿಸಿದರು.ನಗರದ ಅಟಲ್ ಜಿ ಸಭಾಂಗಣದಲ್ಲಿ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಜಿ.ಜಿ. ಹೆಗಡೆ ಕಡೆಕೊಡಿ ಮಾತನಾಡಿ, ನಗರಸಭೆ ಒಂದು ಚೌಕಟ್ಟಿನ ಆದಾಯದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು. ಇಂತಹ ಸಂದಿಗ್ದತೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಕೈಗೊಳ್ಳಲು ತೊಡಕಾಗುತ್ತದೆ. ಹಣಕಾಸಿನ ಸಮಸ್ಯೆ ಉದ್ಭವಿಸುತ್ತದೆ. ಆದರೆ ಆಸ್ತಿ ತೆರಿಗೆ, ನೀರಿನ ತೆರಿಗೆ, ಜಾಹಿರಾತು ಕರ, ಮಳಿಗೆಗಳ ಬಾಡಿಗೆ ಸೇರಿ ವಿವಿಧ ತೆರಿಗೆ ಸಂಗ್ರಹಣೆಯಲ್ಲಿ ನಗರಸಭೆ ವಿಫಲವಾಗಿದೆ. ಕೆಲವು ಕಟ್ಟಡಗಳ ಲೀಜ್ ನೀಡಿದ್ದು, ಅವಧಿ ಮುಗಿದರೂ ಸುಪರ್ದಿಗೆ ಪಡೆದಿಲ್ಲ. ಇದರಿಂದ ಆದಾಯ ನಷ್ಟವಾಗುತ್ತಿದೆ. ತೆರಿಗೆ ತುಂಬದವರಿಗೆ ದಂಡದ ಅಸ್ತ್ರ ಪ್ರಯೋಗ ಆಗುತ್ತಿಲ್ಲ ಎಂದರು.ಈಗಾಗಲೇ ನಗರದಲ್ಲಿ ಯುಜಿಡಿ ಕಾಮಗಾರಿ ವಿಫಲವಾಗಿದೆ. ಗುಡ್ಡಗಾಡು ಪ್ರದೇಶವಾದ ಕಾರಣ ಇಂತಹ ಅವೈಜ್ಞಾನಿಕ ಕಾಮಗಾರಿ ಮತ್ತೆ ಅನುಷ್ಠಾನ ಮಾಡಬಾರದು. ಪರಿಣಿತರ ಜತೆ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕು. ಬೀದಿಬದಿ ವ್ಯಾಪಾರಿಗಳ ಸಂಖ್ಯೆ ಮಿತಿಮೀರಿದೆ. ಇದು ವಾಹನ ದಟ್ಟಣೆಗೆ ಕಾರಣವಾಗಿದೆ. ಕಾರಣ ಬೀದಿಬದಿ ವ್ಯಾಪಾರಿ ಕಾನೂನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸಲಹೆ ನೀಡಿದ ಅವರು, ಎಲ್ಲೆಂದರಲ್ಲಿ ಹೊಟೇಲ್ ಗಳು ತಲೆ ಎತ್ತುತ್ತಿವೆ. ಸ್ವಚ್ಛತೆಗೆ ಆದ್ಯತೆಯಿಲ್ಲ. ಇದು ಸಾರ್ವಜನಿಕ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ವಾರ್ಡ್ ಸಮಿತಿ ರಚಿಸಿ, ಸಭೆ ನಡೆಸಿ ಆ ಪ್ರಕಾರ ನಗರಾಡಳಿತ ಕ್ರಮ ಕೈಗೊಂಡರೆ ಉತ್ತಮ ಆಡಳಿತ ನೀಡಲು ಸಾಧ್ಯ ಎಂದರು.ಸಾಮಾಜಿಕ ಕಾರ್ಯಕರ್ತ ಪರಮಾನಂದ ಹೆಗಡೆ ಮಾತನಾಡಿ, ನಗರದಲ್ಲಿ ಅತಿಕ್ರಮಿಸಿ ಹಲವು ಅಂಗಡಿಗಳು ತಲೆ ಎತ್ತಿವೆ. ವಿವಿಧ ಕಾಮಗಾರಿಗಳ ಕಾರಣ ಕುಡಿಯುವ ನೀರಿನ ವ್ಯವಸ್ಥೆ ಹದಗೆಟ್ಟಿದೆ. ಇವುಗಳ ಮೇಲುಸ್ತುವಾರಿ ನೋಡುವವರು ಯಾರು ಎಂದು ಪ್ರಶ್ನಿಸಿದರು. ನಗರಸಭೆ ಮಾಜಿ ಸದಸ್ಯ ಪ್ರದೀಪ ಶೆಟ್ಟಿ ಮಾತನಾಡಿ, ಸಾರ್ವಜನಿಕ ಆಸ್ತಿ ರಕ್ಷಣೆಗೆ ನಗರಸಭೆಯಿಂದ ಯಾವುದೇ ಕ್ರಮವಾಗುತ್ತಿಲ್ಲ. ಹಲವು ಆಸ್ತಿಗಳ ಕಬ್ಜಾ ಪಡೆಯುವುದು ಬಾಕಿಯಿದೆ. ಹಾಗಾಗಿ ಕಾನೂನು ಹೋರಾಟಕ್ಕೆ ಹೆಚ್ಚಿನ ಮೊತ್ತ ಮೀಸಲಿಡಬೇಕು ಎಂದರು.

ತರಕಾರಿ ಮಾರುಕಟ್ಟೆಯಲ್ಲಿ ನಗರಸಭೆ ಮಳಿಗೆ ಪಡೆದು ತರಕಾರಿ ಅಂಗಡಿ ನಡೆಸುವವರ ಹಲವು ತರಕಾರಿ ಅಂಗಡಿಗಳು ಬೀದಿ ಬದಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಶಾಶ್ವತ ತರಕಾರಿ ಮಾರುಕಟ್ಟೆ ನಿರ್ಮಿಸಲು ಕ್ರಮವಾಗಬೇಕು ಎಂದು ಸಭೆಯಲ್ಲಿ ಪಾಲ್ಗೊಂಡ ಕೆಲ ಸಾರ್ವಜನಿಕರು ಆಗ್ರಹಿಸಿದರು.

ನಗರಸಭೆ ಸ್ವಾಮಿತ್ವ ದಾಖಲಾಗುತ್ತಿಲ್ಲ

ಬಿಡಾಡಿ ದನಗಳ ಹಾವಳಿ, ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆಯಿಂದ ಲಕ್ಷಾಂತರ ರೂ. ವೆಚ್ಚ ಮಾಡಲಾಗುತ್ತಿದೆ. ಆದರೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಹೊಸ ಬಡಾವಣೆಗಳು ನಿರ್ಮಾಣ ಆಗುತ್ತಿವೆ. ಹೊಸ ರಸ್ತೆಗಳು, ಉದ್ಯಾನಗಳು ಆಗುತ್ತಿವೆ‌. ಆದರೆ ಅಲ್ಲಿ ನಗರಸಭೆ ಸ್ವಾಮಿತ್ವ ದಾಖಲಾಗುತ್ತಿಲ್ಲ. ನಗದೆಲ್ಲೆಡೆ ಅಪೂರ್ಣ ಕಾಮಗಾರಿಗಳ ಸಂಖ್ಯೆ ಹೆಚ್ಚಿದೆ. ಮಾರಿಕಾಂಬಾ ಜಾತ್ರೆಯಲ್ಲಿ ಸ್ವಚ್ಛತೆ ಸವಾಲಿನ ಕಾರ್ಯ. ಸಾಕಷ್ಟು ಹಣ ವೆಚ್ಚವಾಗುತ್ತದೆ. ಹಾಗಾಗಿ ನಗರಸಭೆಗೆ ಮಾರಿಕಾಂಬಾ ದೇವಾಲಯದಿಂದ ಬರಬಹುದಾದ ಹಣವನ್ನು ಮುಂಗಡವಾಗಿಯೇ ಭರಿಸಿಕೊಂಡರೆ ಅನುಕೂಲ ಆಗುತ್ತದೆ ಎಂದು ಜಿ.ಜಿ. ಹೆಗಡೆ ಕಡೆಕೊಡಿ ನಗರಸಭೆ ಗಮನಕ್ಕೆ ತಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''