ಬೀದಿನಾಯಿಗಳ ಹಾವಳಿ ನಿಯಂತ್ರಿಸಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

KannadaprabhaNewsNetwork |  
Published : Nov 21, 2025, 02:15 AM IST
ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್‌ ಮಾತನಾಡಿದರು. | Kannada Prabha

ಸಾರಾಂಶ

ಬೀದಿನಾಯಿಗಳಿಂದ ಮಕ್ಕಳಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಅಪಾಯ ಉಂಟಾಗುತ್ತಿರುವ ಘಟನೆಗಳು ಕೆಲವೆಡೆ ವರದಿಯಾಗಿರುವ ಹಿನ್ನೆಲೆ, ಸಮಸ್ಯೆ ಗಂಭೀರವಾಗುವ ಮುನ್ನ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು.

ಗದಗ: ಬೀದಿನಾಯಿಗಳ ನಿಯಂತ್ರಣ ಎಂದರೆ ಅವುಗಳನ್ನು ಕೊಲ್ಲುವುದು ಅಲ್ಲ. ಮಾನವೀಯ ಮತ್ತು ಕಾನೂನುಬದ್ಧ ರೀತಿಯಲ್ಲಿ ಜನರ ಜೀವ, ಆರೊಗ್ಯ, ಸುರಕ್ಷತೆ ಕಾಪಾಡುವುದು ನಮ್ಮ ಕರ್ತವ್ಯ ಎಂದು ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್‌ ತಿಳಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ಹಾವಳಿ ನಿಯಂತ್ರಣ ಕುರಿತು ನಡೆದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಮನ್ವಯದೊಂದಿಗೆ ಬೀದಿನಾಯಿ ಜನನ ನಿಯಂತ್ರಣ ಕಾರ್ಯಕ್ರಮವನ್ನು ಹಂತ- ಹಂತವಾಗಿ ಜಾರಿಗೆ ತರಲು ಅವರು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.ಬೀದಿನಾಯಿಗಳಿಂದ ಮಕ್ಕಳಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಅಪಾಯ ಉಂಟಾಗುತ್ತಿರುವ ಘಟನೆಗಳು ಕೆಲವೆಡೆ ವರದಿಯಾಗಿರುವ ಹಿನ್ನೆಲೆ, ಸಮಸ್ಯೆ ಗಂಭೀರವಾಗುವ ಮುನ್ನ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದರು.

ಜಿಲ್ಲೆಯ ಜನರಲ್ಲಿ ಭಯ, ಆತಂಕ ದೂರ ಮಾಡಿ, ಮಾನವೀಯ ರೀತಿಯಲ್ಲಿ ಬೀದಿನಾಯಿಗಳ ಹಾವಳಿಯನ್ನು ನಿಯಂತ್ರಿಸುವುದು ನಮ್ಮ ಉದ್ದೇಶವಾಗಿದೆ ಎಂದರು.ಬೀದಿನಾಯಿಗಳನ್ನು ಸುರಕ್ಷಿತವಾಗಿ ವಶಪಡಿಸಿಕೊಳ್ಳಲು ವಿಶೇಷ ತಂಡ ರಚನೆ, ಅವುಗಳಿಗೆ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ, ರೇಬಿಸ್ ಲಸಿಕೆ, ಆರೋಗ್ಯ ತಪಾಸಣೆ ನಡೆಸಿ, ಗುರುತು ಹಾಕಿ ಹಿಂದಿರುಗಿ ಬಿಡುವ ಬಗ್ಗೆ ಪ್ರಾಥಮಿಕ ತೀರ್ಮಾನ ಕೈಗೊಳ್ಳಲಾಯಿತು. ಜತೆಗೆ ಹುಚ್ಚುನಾಯಿ ಶಂಕೆ ಇರುವ ನಾಯಿಗಳನ್ನು ಪ್ರತ್ಯೇಕವಾಗಿ ವಶಕ್ಕೆ ಪಡೆದು ಅಗತ್ಯ ವೈದ್ಯಕೀಯ ಪರೀಕ್ಷೆ ನಡೆಸುವ ವಿಷಯದಲ್ಲೂ ನಿರ್ದೇಶನ ನೀಡಲಾಯಿತು.

ಜಿಲ್ಲಾದ್ಯಂತ ಕಸದ ಸಮರ್ಪಕ ನಿರ್ವಹಣೆ ಇಲ್ಲದಿರುವುದು ಬೀದಿನಾಯಿಗಳ ಹೆಚ್ಚುವಿಕೆಗಾಗಿ ಪ್ರಮುಖ ಕಾರಣವಾಗಿದ್ದು, ಮಾರುಕಟ್ಟೆ, ಹೋಟೆಲ್, ಮಾಂಸದಂಗಡಿಗಳು, ಸಾರ್ವಜನಿಕ ಸ್ಥಳಗಳ ತ್ಯಾಜ್ಯವನ್ನು ಮುಚ್ಚಿದ ಡಬ್ಬಿಗಳಲ್ಲಿ ಸಂಗ್ರಹಿಸುವ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲು ಸಭೆ ತೀರ್ಮಾನಿಸಿತು.

ನಿಯಮ ಉಲ್ಲಂಘಿಸುವ ವಾಣಿಜ್ಯ ಸಂಸ್ಥೆಗಳ ವಿರುದ್ಧ ದಂಡ ವಿಧಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಯಿತು. ಶಾಲೆಗಳು, ಅಂಗನವಾಡಿಗಳು, ಗ್ರಾಮಸಭೆಗಳು, ಮಹಿಳಾ ಸಂಘಗಳ ಮೂಲಕ ನಾಯಿ ಕಚ್ಚಿದರೆ ತಕ್ಷಣ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ರೇಬಿಸ್ ಲಸಿಕೆಯ ಮಹತ್ವ ಕುರಿತು ಜಾಗೃತಿ ಮೂಡಿಸುವ ನಿರ್ಧಾರ ಕೈಗೊಳ್ಳಲಾಯಿತು.

ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟ್ಟೂರ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಎಚ್.ಬಿ. ಹುಲಗಣ್ಣವರ, ಜಿಪಂ ಸಹ ಕಾರ್ಯದರ್ಶಿ ಶಿವಾನಂದ ಕಲ್ಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇದ್ದರು.

PREV

Recommended Stories

8 ವರ್ಷದ ಬಾಲಕಿ ಹೊಟ್ಟೇಲಿ ಮೂರು ಕೆ.ಜಿ. ಕೂದಲು ಪತ್ತೆ! ಇದೊಂದು ಕಾಯಿಲೆ
ಜೈಪುರ ಸಾಹಿತ್ಯೋತ್ಸವ 2026ರಲ್ಲಿ ಬಾನು ಮುಷ್ತಾಕ್, ಸುಧಾಮೂರ್ತಿ