ಡೆಂಘೀ ಜ್ವರಕ್ಕೆ ಕಾರಣವಾದ ಸೊಳ್ಳೆಯನ್ನು ನಿಯಂತ್ರಿಸಿ: ಡಾ.ಪುನೀತ್

KannadaprabhaNewsNetwork | Published : Jul 16, 2024 12:42 AM

ಸಾರಾಂಶ

ವಾರಕ್ಕೆ ಒಂದು ದಿನ ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆ ಉತ್ಪತ್ತಿ ತಾಣ ನಾಶ ಮಾಡುವ ದಿನವನ್ನಾಗಿ, ಲಾರ್ವಾ ಸಮೀಕ್ಷೆಗಾಗಿ ಮನೆಗಳಿಗೆ ಭೇಟಿ ನೀಡುವ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ನೀಡುವ ಸಲಹೆಗಳನ್ನು ಪಾಲಿಸಿ ಸಾರ್ವಜನಿಕರ ಸಹಕಾರದಿಂದ ಡೆಂಘೀ ನಿಯಂತ್ರಣ ಸಾಧ್ಯ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಡೆಂಘೀ ಜ್ವರ ಸಾಂಕ್ರಾಮಿಕ ರೋಗವಾಗಿದೆ. ಇದಕ್ಕೆ ಕಾರಣವಾದ ಸೊಳ್ಳೆಗಳ ಸಂತತಿ ನಿಯಂತ್ರಿಸಬೇಕಿದೆ ಎಂದು ಬಂಡಿಹೊಳೆ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಪುನೀತ್ ತಿಳಿಸಿದರು.

ತಾಲೂಕಿನ ಬಂಡಿಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಡೆಂಘೀ ನಿಯಂತ್ರಣ-ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿ, ತೀವ್ರ ಜ್ವರ, ತಲೆನೋವು, ಕಣ್ಣುಗಳ ಹಿಂದೆ ನೋವು, ಸ್ನಾಯು ಮತ್ತು ಕೀಲು ನೋವು, ‘ಮೂಳೆ ಮುರಿಯುವ ಜ್ವರ’, ವಾಕರಿಕೆ ಮತ್ತು ವಾಂತಿಗಳಂತ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದರು.

ಡೆಂಘೀ ಜ್ವರವನ್ನು ರಕ್ತ ಪರೀಕ್ಷೆಯಿಂದ ಮಾತ್ರ ಕಂಡು ಹಿಡಿಯಬಹುದು. ಶಂಕಿತ ಡೆಂಘೀ ಜ್ವರ ಪ್ರಕರಣಗಳ ಪರೀಕ್ಷೆ ಹಾಗೂ ಚಿಕಿತ್ಸೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿದೆ. ಡೆಂಘೀ ಜ್ವರಕ್ಕೆ ಕಾರಣವಾದ ಈಡಿಸ್ ಸೊಳ್ಳೆಗಳ ಉತ್ಪತ್ತಿ ತಡೆಗೆ ಮುಂದಾಗಬೇಕು ಎಂದರು.

ವಾರಕ್ಕೆ ಒಂದು ದಿನ ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆ ಉತ್ಪತ್ತಿ ತಾಣ ನಾಶ ಮಾಡುವ ದಿನವನ್ನಾಗಿ, ಲಾರ್ವಾ ಸಮೀಕ್ಷೆಗಾಗಿ ಮನೆಗಳಿಗೆ ಭೇಟಿ ನೀಡುವ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ನೀಡುವ ಸಲಹೆಗಳನ್ನು ಪಾಲಿಸಿ ಸಾರ್ವಜನಿಕರ ಸಹಕಾರದಿಂದ ಡೆಂಘೀ ನಿಯಂತ್ರಣ ಸಾಧ್ಯ ಎಂದರು.

ಈ ವೇಳೆ ಶಾಲೆ ಮುಖ್ಯ ಶಿಕ್ಷಕರಾದ ಕುಮಾರಸ್ವಾಮಿ, ಸಹ ಶಿಕ್ಷಕರಾದ ರೂಪ, ರಾಜೇಶ್, ಪ್ರಸನ್ನ ಕುಮಾರ್, ಸಮುದಾಯ ಆರೋಗ್ಯಾಧಿಕಾರಿ ಶಾರಧಾಂಬಿಕ ಮತ್ತು ಪ್ರೀತಿ, ಆಶಾ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಇದ್ದರು.ಪರಿಸರ ಸ್ವಚ್ಛವಾಗಿಟ್ಟುಕೊಂಡರೆ ಡೆಂಘೀ ಜ್ವರ ನಿಯಂತ್ರಿಸಬಹುದು: ಎಸ್.ಡಿ.ಬೆನ್ನೂರ

ಶ್ರೀರಂಗಪಟ್ಟಣ:ಮನೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ನೀರು ನಿಲ್ಲದಂತೆ ನೋಡಿಕೊಂಡು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿದರೆ ಡೆಂಘೀ ಜ್ವರ ನಿಯಂತ್ರಿಸಬಹುದು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಹೇಳಿದರು.

ತಾಲೂಕಿನ ಮಹದೇವಪುರ ಆಯುಷ್ಮಾನ್ ಆರೋಗ್ಯ ಮಂದಿರದಿಂದ ಬಿದರಹಳ್ಳಿಹುಂಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ನಡೆಸಿದ ಡೆಂಘೀ ನಿಯಂತ್ರಣ ಕುರಿತ ಜಾಗೃತಿ ಜಾಥಾದಲ್ಲಿ ಮಾತನಾಡಿದರು.ಈಡಿಸ್ ಹೆಣ್ಣು ಸೊಳ್ಳೆ ಕಡಿತದಿಂದ ಡೆಂಘೀ ಜ್ವರ ಕಾಣಿಸುತ್ತದೆ. ಈ ಸೊಳ್ಳೆ ಶುದ್ಧ ನೀರಿನಲ್ಲಿ ಉತ್ಪತ್ತಿ ಆಗುತ್ತಿದೆ. ಶುದ್ಧ ನೀರು ಸಿಗದಂತೆ ನೀರಿನ ಪರಿಕರಗಳನ್ನು ಮುಚ್ಚಿಟ್ಟು ಸೊಳ್ಳೆಗೆ ಶುದ್ಧ ನೀರು ಸಿಗದಂತೆ ನೋಡಿಕೊಂಡು ಹಾಗೆ ಮಲಗುವಾಗ ಸೊಳ್ಳೆ ಪರದೆ ಕಡ್ಡಾಯವಾಗಿ ಬಳಸಿಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

ಆರೋಗ್ಯ ನೀರಿಕ್ಷಣಾಧಿಕಾರಿ ಎಂ.ಎನ್ ಕೃಷ್ಣೇಗೌಡ, ಶಾಲಾ ಮಕ್ಕಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಿದರು.ಈ ವೇಳೆ ಗ್ರಾಪಂ ಸದಸ್ಯ ಅಣ್ಣಪ್ಪ, ಮುಖ್ಯ ಶಿಕ್ಷಕಿ ಶುಭಾಂಗಿಣಿ, ಸಹ ಶಿಕ್ಷಕರಾದ ಸಂತೋಷ್, ಯಶೋಧ, ಅನುಷ, ಸಮುದಾಯ ಆರೋಗ್ಯ ಅಧಿಕಾರಿ ಶರತ್ ಕುಮಾರ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಶಿಕಲಾ, ಆಶಾ ಕಾರ್ಯಕರ್ತೆ ಸುಮಾ, ರತ್ನಮ್ಮ, ನೇತ್ರಾವತಿ, ಜ್ಯೋತಿ, ನೀರು ಗಂಟೆ ಸತೀಶ್, ಶಾಲಾ ಶಿಕ್ಷಕರು, ಸಾರ್ವಜನಿಕರು ಭಾಗವಹಿಸಿದ್ದರು.

Share this article