ಹುಬ್ಬಳ್ಳಿ:
ಕಾರ್ಮಿಕರನ್ನು ಗುಲಾಮರನ್ನಾಗಿಸಿರುವ 4 ಕಾರ್ಮಿಕ ಸಂಹಿತೆ ಹಿಂಪಡೆಯಬೇಕು. ರೈತರ ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ನೀಡುವ ಶಾಸನ ರೂಪಿಸಬೇಕು. ಬಿಸಿಯೂಟ ನೌಕರರು ಸೇರಿದಂತೆ ಸ್ಕೀಂ ನೌಕರರಿಗೆ ಕನಿಷ್ಠ ವೇತನ ಕಾಯ್ದೆ ಜಾರಿಗೊಳಿಸಬೇಕು. ಆಟೋ, ಹಮಾಲಿ ಮುಂತಾದ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತೆ ಕಲ್ಪಿಸಬೇಕು. ರೈಲ್ವೆ, ವಿದ್ಯುತ್ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹಕ್ಕೊತ್ತಾಯ:ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ, ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ ಬಡವರಿಗೆ ಬದುಕಲು ಅವಕಾಶ ಕಲ್ಪಿಸುವ ನೀತಿ ಜಾರಿಗೆ ತರಬೇಕು. ರೈತ ವಿರೋಧಿ ಕೃಷಿ ಕಾನೂನು ಹಿಂಪಡೆಯಬೇಕು. ದೇಶದ ಐಕ್ಯತೆ ಛಿದ್ರಗೊಳಿಸುವ, ಸೌಹಾರ್ದತೆ ಹಾಳುಮಾಡುವ ಕೃತ್ಯ ಹಾಗೂ ಶಕ್ತಿಗಳನ್ನು ನಿಗ್ರಹಿಸಬೇಕು. ಸಂವಿಧಾನದ ಧರ್ಮನಿರಪೇಕ್ಷ ಮೌಲ್ಯ ಸಂರಕ್ಷಿಸಬೇಕು. ಶಿಕ್ಷಣ ದುಬಾರಿಗೊಳಿಸುವ ಹಾಗೂ ಅವೈಜ್ಞಾನಿಕ ಹೊಸ ಶಿಕ್ಷಣ ನೀತಿ ರದ್ದುಗೊಳಿಸಬೇಕು. ಕೆಲಸದ ಅವಧಿಯನ್ನು ವಾರಕ್ಕೆ ಗರಿಷ್ಠ 36 ಗಂಟೆ ಹಾಗೂ ದಿನದ ಪಾಳಿಯನ್ನು 6ಕ್ಕೆ ಮಿತಿಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಹಕ್ಕೊತ್ತಾಯ ಮಾಡಲಾಯಿತು. ನಂತರ ತಹಸೀಲ್ದಾರ್ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.