ನೀಟ್‌ ವಂಚನೆ ವಿರುದ್ಧ ಸಮಾವೇಶ:ಎನ್‌ಟಿಎ-ನೀಟ್‌ ರದ್ದತಿಗೆ ಒತ್ತಾಯ

KannadaprabhaNewsNetwork | Published : Jul 14, 2024 1:32 AM

ಸಾರಾಂಶ

ಬೆಂಗಳೂರಿನಲ್ಲಿ ‘ನೀಟ್‌ನಲ್ಲಿ ನಡೆದ ಮಹಾ ವಂಚನೆ ವಿರುದ್ಧದ ರಾಜ್ಯಮಟ್ಟದ ಸಮಾವೇಶ’ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನೀಟ್ ಮತ್ತು ಇತರೆ ಪರೀಕ್ಷೆಗಳನ್ನು ನಡೆಸುವ ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿಗೆ(ಎನ್‌ಟಿಎ) ಸಂವಿಧಾನಾತ್ಮಕ ಮಾನ್ಯತೆಯೇ ಇಲ್ಲ. ನಿರಂಕುಷ ಅಧಿಕಾರದಿಂದ ಇಂತಹ ಪರೀಕ್ಷೆಗಳನ್ನು ಕಾನೂನು ಬಾಹಿರವಾಗಿ ಹೇರಲಾಗಿದೆ. ಹಾಗಾಗಿ ಕೂಡಲೇ ಎನ್‌ಟಿಎ ಮತ್ತು ನೀಟ್‌ ಎರಡನ್ನೂ ರದ್ದುಪಡಿಸಬೇಕೆಂದು ವಿವಿಧ ಕ್ಷೇತ್ರಗಳ ಪರಿಣಿತರು, ತಜ್ಞರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯು ಶನಿವಾರ ನಗರದಲ್ಲಿ ಆಯೋಜಿಸಿದ್ದ ‘ನೀಟ್‌ನಲ್ಲಿ ನಡೆದ ಮಹಾ ವಂಚನೆ ವಿರುದ್ಧದ ರಾಜ್ಯಮಟ್ಟದ ಸಮಾವೇಶ’ದಲ್ಲಿ ಮಾತನಾಡಿದ ತಜ್ಞರು ನೀಟ್‌ ವ್ಯವಸ್ಥೆ ಹಣ ಕೊಟ್ಟವರಿಗೆ ಸೀಟುಗಳನ್ನು ಮಾರಾಟ ಮಾಡುವುದು ಇದರ ಮೂಲ ಉದ್ದೇಶವಾಗಿದೆ. ರಾಜ್ಯಮಟ್ಟದಲ್ಲೇ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಮಾಜಿ ಅಡ್ವೊಕೇಟ್‌ ಜನರಲ್‌ ಪ್ರೊ.ರವಿವರ್ಮಕುಮಾರ್‌, ಕೇಂದ್ರ ಸರ್ಕಾರದ ‘ಒಂದು ದೇಶ, ಒಂದು ಪರೀಕ್ಷೆ’ ಎಂಬ ಹುಸಿ ಘೋಷಣೆ ಹಾಗೂ ಅಧಿಕಾರ ಕೇಂದ್ರೀಕರಣದ ಹುನ್ನಾರವೇ ಇಂದಿನ ನೀಟ್ -2024 ಪರೀಕ್ಷೆಯ ಭ್ರಷ್ಟಾಚಾರ-ವಂಚನೆಗಳಿಗೆ ಮುಖ್ಯ ಕಾರಣ. ನೀಟ್ ಮತ್ತು ಇನ್ನಿತರ ಹಲವಾರು ಪರೀಕ್ಷೆಗಳನ್ನು ನಡೆಸುವ ಎನ್‌ಟಿಎ ಸಂಸ್ಥೆಗೆ ಸಂವಿಧಾನಾತ್ಮಕ ಮಾನ್ಯತೆಯೇ ಇಲ್ಲ. ಆದರೂ ದೇಶದ ವೈದ್ಯಕೀಯ ಶಿಕ್ಷಣದ ಮೇಲೆ ನೀಟ್‌ ಹೇರಲಾಗಿದೆ. ದೇಶದಲ್ಲಿ ವೈದ್ಯಕೀಯ ಸೇರಿದಂತೆ ಯಾವುದೇ ಪದವಿಗಳನ್ನು ನೀಡುವುದು ವಿಶ್ವವಿದ್ಯಾಲಯಗಳು. ವಿಶ್ವವಿದ್ಯಾಲಯಗಳ ಸ್ವಾಯತ್ತತೆ ಮತ್ತು ಕಾರ್ಯನಿರ್ವಣೆಯು ರಾಜ್ಯ ಸರ್ಕಾರಗಳ ಜವಾಬ್ದಾರಿಯೆಂಬುದು ಸಂವಿಧಾನವೇ ಸ್ಪಷ್ಟವಾಗಿ ಹೇಳುತ್ತದೆ. ಹೀಗಿರುವಾಗ ಕೇಂದ್ರ ಸರ್ಕಾರ ಎನ್‌ಟಿಎ ಮೂಲಕ ಯಾವುದೇ ಪದವಿಗಳಿಗೆ ಪ್ರವೇಶ ಪರೀಕ್ಷೆಗಳನ್ನು ನಡೆಸುವುದು ಜನತಂತ್ರ ವಿರೋಧಿಯಾಗಿದೆ. ಕೂಡಲೇ ಎನ್‌ಟಿಎ, ನೀಟ್‌ ರದ್ದುಗೊಳಿಸಿ ರಾಜ್ಯ ಮಟ್ಟದಲ್ಲಿಯೇ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಎಂದು ಗ್ರಹಿಸಿದರು.

ತಮಿಳುನಾಡಿನ ನೀಟ್ ಪರೀಕ್ಷೆ ಕುರಿತ ಉನ್ನತ ಮಟ್ಟದ ಸಮಿತಿ ಸದಸ್ಯ ಪ್ರೊ.ಎಲ್.ಜವಾಹರ್ ನೇಸನ್‌ ಮಾತನಾಡಿ, ನೀಟ್‌ನಲ್ಲಿ ಭ್ರಷ್ಟಾಚಾರ, ವಂಚನೆ ನಡೆಯುತ್ತಿರುವುದು ಮಾತ್ರವಲ್ಲ ಇದೊಂದು ಕಾನೂನಿಗೆ ವಿರುದ್ಧವಾಗಿ ನಡೆಸುತ್ತಿರುವ ಪರೀಕ್ಷೆ. ಇದು ವಿದ್ಯಾರ್ಥಿಗಳನ್ನು ಆತ್ಮಹತ್ಯೆಯಂತಹ ಪರಿಸ್ಥಿತಿಗೆ ನೂಕುತ್ತಿದೆ. ಇದರಲ್ಲಿ ಶಿಕ್ಷಣದ ಕೇಂದ್ರೀಕರಣ ಮತ್ತು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆಯನ್ನು ಸಂಪೂರ್ಣ ವ್ಯಾಪಾರೀಕರಣಕ್ಕೊಳಪಡಿಸುವ ಹುನ್ನಾರವಿದೆ. ನೀಟ್ ಪರೀಕ್ಷೆಯು ಮೆರಿಟ್ ಆಧಾರಿತ ಎನ್ನುವುದೇ ವಿಡಂಬನೆ. ಕಡಿಮೆ ಅಂಕ ಇದ್ದರೂ ಹೆಚ್ಚು ಹಣ ಕೊಟ್ಟವರಿಗೆ ಸೀಟುಗಳನ್ನು ಮಾರಾಟ ಮಾಡುವುದು ಇದರ ಮೂಲ ಉದ್ದೇಶ. ಹಾಗಾಗಿ ನೀಟ್‌ ರದ್ದುಪಡಿಸುವವರೆಗೂ ಎಲ್ಲರೂ ಹೋರಾಟಕ್ಕಿಳಿಯಬೇಕು ಎಂದರು.

ವಿಶ್ರಾಂತ ಕುಲಪತಿ ಡಾ। ಎನ್. ಪ್ರಭುದೇವ, ಮಕ್ಕಳ ತಜ್ಞರಾದ ಡಾ। ಆಶಾ ಬೆನಕಪ್ಪ, ವಿಶ್ರಾಂತ ಕುಲಪತಿ ಪ್ರೊ.ಎ.ಮುರಿಗೆಪ್ಪ, ಫಾಲ್ಕನ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಅಬ್ದುಲ್ ಸುಭಾನ್, ವಿಜ್ಞಾನಿ ಆರ್.ಎಲ್.ಮೌರ್ಯನ್, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯಾಧ್ಯಕ್ಷ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ರಾಜ್ಯ ಉಪಾಧ್ಯಕ್ಷ ವಿ.ಎನ್.ರಾಜಶೇಖರ ಮಾತನಾಡಿದರು.

ಬಹುತೇಕ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ರಾಜಕೀಯ ವ್ಯಕ್ತಿಗಳ ನಿಯಂತ್ರಣದಲ್ಲಿರುವುದರಿಂದ ವೈದ್ಯಕೀಯ ಶಿಕ್ಷಣ ದಿನೇ ದಿನೇ ದುಬಾರಿಯಾಗುತ್ತಿದೆ. ನೀಟ್ -2024 ಪರೀಕ್ಷೆಯಲ್ಲಿ ಸಾಕಷ್ಟು ವಂಚನೆ ನಡೆದಿದೆ.

-ಡಾ। ಎನ್.ಪ್ರಭುದೇವ, ವಿಶ್ರಾಂತ ಕುಲಪತಿ.

Share this article