- ಮೂರು ಸಾವಿರ ರಾಜ್ಯ-ನೆರೆ ರಾಜ್ಯದ ವೈದ್ಯರು ಭಾಗಿ - ಪಾರಂಪರಿಕ ವೈದ್ಯರ ಮಾಹಿತಿ ಕೋಶ ಬಿಡುಗಡೆ ಕನ್ನಡಪ್ರಭ ವಾರ್ತೆ ಮಂಡ್ಯ ನಾಗಮಂಗಲ ತಾಲೂಕು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ಅ.೨೬ರಿಂದ ಮೂರು ದಿನಗಳ ಕಾಲ ಪಾರಂಪರಿಕ ವೈದ್ಯರ ರಾಷ್ಟ್ರೀಯ ಮತ್ತು ೧೪ನೇ ರಾಜ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪಾರಂಪರಿಕ ವೈದ್ಯ ಪರಿಷತ್ತಿನ ಸಂಚಾಲಕ ಮಂಜುನಾಥ್ ತಿಳಿಸಿದರು. ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಸಹಯೋಗದಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ರಾಜ್ಯದ ನಾನಾ ಭಾಗಗಳಿಂದ ಸುಮಾರು ೨೫೦೦ ಮಂದಿ ಹಾಗೂ ನೆರೆ ರಾಜ್ಯಗಳಿಂದ ೫೦೦ ಜನರು ಸೇರಿದಂತೆ ೩೦೦೦ ಪಾರಂಪರಿಕ ವೈದ್ಯರು ಭಾಗವಹಿಸುವರು. ಸಮ್ಮೇಳನದಲ್ಲಿ ೩೦೦೦ ಮಂದಿ ಪಾರಂಪರಿಕ ವೈದ್ಯರ ಬಗ್ಗೆ ಮಾಹಿತಿಯುಳ್ಳ ಮಾಹಿತಿ ಕೋಶವನ್ನು ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬಿಡುಗಡೆ ಮಾಡುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಅ.೨೬ರಂದು ಬೆಳಗ್ಗೆ ೧೦.೩೦ ಗಂಟೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಮ್ಮೇಳನ ಉದ್ಘಾಟಿಸುವರು. ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು. ಪಾರಂಪರಿಕ ವೈದ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಜಿ.ಮಹದೇವಯ್ಯ ಅಧ್ಯಕ್ಷತೆ ವಹಿಸುವರು. ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಭಾಗವಹಿಸುವರು ಎಂದರು. ಗದಗ್ ಜಿಲ್ಲೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ವಿಷ್ಣುಕಾಂತ ಚಟಪಲ್ಲಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಆಯುಷ್ ಇಲಾಖೆಯ ಆಯುಕ್ತೆ ಡಾ.ಲೀಲಾವತಿ, ರಾಜ್ಯ ಔಷಧ ಗಿಡಮೂಲಿಕಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ವಿ.ಸುದರ್ಶನ್, ಕರ್ನಾಟಕ ಜೀವವೈವಿಧ್ಯ ಮಂಡಳಿಯ ಸದಸ್ಯ ಕಾರ್ಯದರ್ಶಿ ಜಗತ್‌ರಾವ್, ಪಾರಂಪರಿಕ ವೈದ್ಯ ಪರಿಷತ್ತಿನ ಸಂಸ್ಥಾಪಕ ಶ್ರೀಕಂಠಯ್ಯ, ಹರಿರಾಮಮೂರ್ತಿ, ಡಾ. ಸತ್ಯನಾರಾಯಣಭಟ್ ಭಾಗವಹಿಸುವರು ಎಂದು ವಿವರಿಸಿದರು. ಮೂರು ದಿನಗಳ ಸಮ್ಮೇಳನದಲ್ಲಿ ಪ್ರಮುಖವಾಗಿ ೬ ಗೋಷ್ಠಿಗಳು ನಡೆಯಲಿವೆ. ಸಾಂಕ್ರಾಮಿಕ ರೋಗಗಳು ಮತ್ತು ಜ್ವರ, ಸ್ತ್ರೀರೋಗ, ಸಂವಾತ, ಚರ್ಮರೋಗ, ಪಶುವೈದ್ಯ ಹಾಗೂ ಮಧುಮೇಹ ರೋಗದ ವಿಷಯದ ಬಗ್ಗೆ ಗೋಷ್ಠಿಗಳಲ್ಲಿ ಚರ್ಚೆ ಹಾಗೂ ಸಂವಾದ ನಡೆಯಲಿದೆ. ಐದು ಮಂದಿ ಅನುಭವಿ ಪಾರಂಪರಿಕ ವೈದ್ಯರಿಗೆ ಪಾರಂಪರಿಕ ವೈದ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು ಪಂಚಲೋಹದ ಧನ್ವಂತರಿ ವಿಗ್ರಹ, ೧೦ ಸಾವಿರ ರು. ನಗದನ್ನು ಒಳಗೊಂಡಿದೆ ಎಂದರು. ಕರ್ನಾಟಕ ವೈದ್ಯ ಪರಿಷತ್ತಿನ ಸದಸ್ಯರಾದ ಎನ್.ತಮ್ಮಣ್ಣ, ಎಂ.ಇಂದುಕುಮಾರ್, ಶಿವಕುಮಾರ್, ಸಿಂಧು, ಮಂಗಳರಾಜ್, ವಿನಯ್ ಗೋಷ್ಠಿಯಲ್ಲಿದ್ದರು.