ಶುದ್ಧ ಕನ್ನಡದಲ್ಲೇ ಸಂವಾದ: ರಾಘವೇಶ್ವರ ಶ್ರೀ ಆದೇಶ

KannadaprabhaNewsNetwork |  
Published : Jul 30, 2025, 12:48 AM IST
 ನಾಗ ಬನದಲ್ಲಿ ಪೂಜೆ ಸಲ್ಲಿಸುತ್ತಿರುವ ಶ್ರೀಗಳು  | Kannada Prabha

ಸಾರಾಂಶ

ಸ್ವಭಾಷೆ ಬಗ್ಗೆ ಆತ್ಮಾಭಿಮಾನ ಮೂಡಿಸುವ ನಿಟ್ಟಿನಲ್ಲಿ ಇನ್ನು ಮುಂದೆ ಶ್ರೀರಾಮಚಂದ್ರಾಪುರ ಮಠದ ವ್ಯಾಪ್ತಿಯಲ್ಲಿ ಎಲ್ಲ ಸಂಘಟನೆಗಳ ಸಂವಾದಗಳು ಸ್ವಭಾಷೆಯಲ್ಲೇ ನಡೆಯಲಿವೆ

ಗೋಕರ್ಣ: ಸ್ವಭಾಷೆ ಬಗ್ಗೆ ಆತ್ಮಾಭಿಮಾನ ಮೂಡಿಸುವ ನಿಟ್ಟಿನಲ್ಲಿ ಇನ್ನು ಮುಂದೆ ಶ್ರೀರಾಮಚಂದ್ರಾಪುರ ಮಠದ ವ್ಯಾಪ್ತಿಯಲ್ಲಿ ಎಲ್ಲ ಸಂಘಟನೆಗಳ ಸಂವಾದಗಳು ಸ್ವಭಾಷೆಯಲ್ಲೇ ನಡೆಯಲಿವೆ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಪ್ರಕಟಿಸಿದರು.ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು ೨೦ನೇ ದಿನವಾದ ಮಂಗಳವಾರ ಹುಬ್ಬಳ್ಳಿ-ಧಾರವಾಡ ವಲಯದ ಶಿಷ್ಯಭಕ್ತರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಭಾಷಾಭಿಮಾನ ಮೂಡಿಸುವ ಪ್ರಯತ್ನವಾಗಿ ಹವ್ಯಕ ಮಹಾಮಂಡಲದಿಂದ ಹಿಡಿದು ಘಟಕಗಳ ವರೆಗೆ ಎಲ್ಲ ಸಭೆಗಳನ್ನು ಶುದ್ಧ ಕನ್ನಡದಲ್ಲೇ ನಿರ್ವಹಿಸಬೇಕು ಎಂದು ಪದಾಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ವಭಾಷಾ ತತ್ವ ಎಲ್ಲ ಹಂತಗಳಲ್ಲಿ ಅನುಷ್ಠಾನಕ್ಕೆ ಬರಬೇಕು. ಸ್ವಭಾಷಾ ಅಭಿಯಾನ ಕೇವಲ ಔಪಚಾರಿಕವಾಗದೇ ನಮ್ಮ ದೈನಂದಿನ ವ್ಯವಹಾರಗಳಲ್ಲಿ ಸ್ವಭಾಷೆಗೇ ಒತ್ತು ನೀಡುವ ಮೂಲಕ ಮುಂದಿನ ಪೀಳಿಗೆಗೆ ನಮ್ಮ ಭಾಷೆ- ಸಂಸ್ಕೃತಿ ಉಳಿಸುವ ಮಹತ್ವದ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಎಚ್ಚರಿಸಿದರು.

ನಾವು ಪರಸ್ಪರ ಸೇರಿದಾಗ ಮನೆ ಮಾತು ಆಡೋಣ; ಸಮಾಜದ ಬೇರೆಯವರ ಜತೆ ಸಂವಾದ ನಡೆಸುವಾಗ ಶುದ್ಧ ಕನ್ನಡ ಮಾತನಾಡೋಣ. ಕನ್ನಡ ಈಗಾಗಲೇ ಸಾಕಷ್ಟು ಹದಗೆಟ್ಟಿದ್ದು, ಕನ್ನಡದ ಜತೆ ಇತರ ಭಾಷೆಗಳ ಕಲಬೆರಕೆ ಮುಂದುವರಿದರೆ ಮುಂದಿನ ಪೀಳಿಗೆಗೆ ಕನ್ನಡ ಭಾಷೆಯೇ ನಾಶವಾಗುವ ಅಪಾಯವಿದೆ ಎಂದರು.

ನಮ್ಮ ಹಿರಿಯರು ಬಳಸುತ್ತಿದ್ದ ಬಹಳಷ್ಟು ಪದಗಳು ಈಗಾಗಲೇ ಅನ್ಯಭಾಷೆಯ ಪ್ರಭಾವದಿಂದ ಮರೆಯಾಗಿದ್ದು, ಅವುಗಳನ್ನು ಹುಡುಕಿ ತೆಗೆದು ಮರು ಚಾಲ್ತಿಗೆ ತರಬೇಕು ಎಂದು ಸೂಚಿಸಿದರು.

ಹುಬ್ಬಳ್ಳಿ-ಧಾರವಾಡ ವಲಯದ ನೂತನ ಅಧ್ಯಕ್ಷರಾಗಿ ಆರ್.ಜಿ. ಹೆಗಡೆ ಮತ್ತು ಕಾರ್ಯದರ್ಶಿಯಾಗಿ ಗಜಾನನ ಭಾಗ್ವತ್ ಅವರನ್ನು ನಿಯುಕ್ತಿಗೊಳಿಸಲಾಯಿತು. ಪ್ರತಿಯೊಬ್ಬ ಶಿಷ್ಯರೂ ಒಂದಲ್ಲ ಒಂದು ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಸೇವಾಶೂನ್ಯ ಶಿಷ್ಯರು ಯಾರೂ ಇರದಂತೆ ನೋಡಿಕೊಳ್ಳುವ ಹೊಣೆ ಆಯಾ ಹಂತದ ಪದಾಧಿಕಾರಿಗಳದ್ದು ಎಂದು ಹೇಳಿದರು.

ನಾಗರ ಪಂಚಮಿ ಅಂಗವಾಗಿ ಅಶೋಕೆಯ ನಾಗಬನಕ್ಕೆ ತೆರಳಿ ಪರಮಪೂಜ್ಯರು ನಾಗದೇವತೆಗೆ ವಿಶೇಷ ಪೂಜೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ