ಸೋಮರಡ್ಡಿ ಅಳವಂಡಿ, ಕೊಪ್ಪಳ
2019ರ ಕೊನೆ ಹಾಗೂ 2020ರಲ್ಲಿ ಕಾಡಿದ ಮಹಾಮಾರಿ ಕೊರೋನಾ ವಿಪರೀತ ಹರಡಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದಂತಾಗಿತ್ತು. ಕೆಲವರು ಆಸ್ಪತ್ರೆಯ ಅಂಗಳದಲ್ಲಿ ನರಳಾಡಿ ಸಾವನ್ನಪ್ಪಿದಾಗ ಜಿಲ್ಲಾಡಳಿತ ಹಾಗೂ ಖಾಸಗಿ ಆಸ್ಪತ್ರೆಯವರು ಚಿಂತನೆ ಮಾಡಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಳ ಮಾಡಲು ನಿರ್ಧರಿಸಿದವು. ಪರಿಣಾಮ ಜಿಲ್ಲಾ ಕೇಂದ್ರ ಸೇರಿದಂತೆ ವಿವಿಧೆಡೆಯ ವಸತಿ ನಿಲಯ ಹಾಗೂ ಹೋಟೆಲ್‌ಗಳನ್ನು ಆಸ್ಪತ್ರೆಗಳಾಗಿ ಮಾರ್ಪಾಡು ಮಾಡಲಾಯಿತು.ಜಿಲ್ಲಾ ಕೆಂದ್ರ ಕೊಪ್ಪಳ ನಗರದಲ್ಲಿದ್ದ ಖಾಸಗಿ ಆಸ್ಪತ್ರೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಬೆಡ್ ಭರ್ತಿಯಾಗಿದ್ದವು. ಕೊರೋನಾ ಮತ್ತಷ್ಟು ಹರಡುತ್ತಲೇ ಇತ್ತು. ಬಂದ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಆಗುತ್ತಿರಲಿಲ್ಲ. ಆಗ ಜಿಲ್ಲಾಡಳಿತ ತುರ್ತು ಸಭೆ ನಡೆಸಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಳ ಮಾಡಲು ತೀರ್ಮಾನಿಸಿತು. ಇದಕ್ಕೆ ಖಾಸಗಿ ಆಸ್ಪತ್ರೆಗಳ ಸಹಯೋಗ ನೀಡಲಾಯಿತು.
ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಇಲ್ಲದೆ ರೋಗಿಗಳನ್ನು ಹೊರಗೆ ಕಳುಹಿಸಿದಾಗ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವವರ ವೆಚ್ಚವನ್ನು ಸರ್ಕಾರವೇ ಭರಿಸುತ್ತಿತ್ತು. ಅದರಂತೆ ಖಾಸಗಿ ಆಸ್ಪತ್ರೆಯವರಿಗೆ ಅವಕಾಶ ನೀಡಲಾಯಿತು.ಕೊಪ್ಪಳ ನಗರದ ಕೆ.ಎಸ್. ಆಸ್ಪತ್ರೆ ವತಿಯಿಂದ ಪಾರ್ಥ ಹೋಟೆಲ್ (ಲಾಡ್ಜ್ )ನ್ನು ಸಂಪೂರ್ಣವಾಗಿ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಲಾಯಿತು. ಕೇವಲ ಆರೇ ದಿನಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಆಕ್ಸಿಜನ್ ಪೂರೈಕೆ ಇರುವ ಬೆಡ್ ಸಿದ್ಧ ಮಾಡಲಾಯಿತು. ಕ್ರಮೇಣ ಈ ಬೆಡ್ ಗಳ ಸಂಖ್ಯೆ ಹೆಚ್ಚಿಸುತ್ತಲೇ ಹೋಯಿತು. ಇದೇ ರೀತಿ ಕೊಪ್ಪಳದ ವಿವಿಧ ಕಟ್ಟಡಗಳಲ್ಲಿ ಆಸ್ಪತ್ರೆಗಳು ಪ್ರಾರಂಭವಾದವು. ಇನ್ನು ಗಂಗಾವತಿ, ಕುಷ್ಟಗಿ, ಕಾರಟಗಿ ಸೇರಿದಂತೆ ಅನೇಕ ಖಾಸಗಿ ಹೋಟೆಲ್ ಗಳನ್ನು ಆಸ್ಪತ್ರೆಗಳಾಗಿ ಪರಿವರ್ತನೆ ಮಾಡಲಾಯಿತು.
ತಳಕಲ್ ಇಂಜನಿಯರಿಂಗ್ ಕಾಲೇಜು ಸಹ ಕೋವಿಡ್ ಆಸ್ಪತ್ರೆ ಮತ್ತು ಕೇರ್ ಸೆಂಟರ್ ಆಗಿ ಮಾರ್ಪಟ್ಟಿತ್ತು. ಜಿಲ್ಲೆಯಲ್ಲಿ ಎಲ್ಲಿಯೂ ಜಾಗ ಇಲ್ಲದೆ ಇದ್ದ ವೇಳೆಯಲ್ಲಿ ನೂರಾರು ರೋಗಿಗಳನ್ನು ಈ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲಾಯಿತು.ಹಾಸ್ಟೆಲ್‌ಗಳು ಕೇರ್ ಸಂಟರ್‌ಗಳಾಗಿ ಪರಿವರ್ತನೆ:
ಜಿಲ್ಲೆಯ ಮೋರಾರ್ಜಿ, ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳನ್ನು ಕೋವಿಡ್ ಕೇರ್ ಸೆಂಟರ್ ಮತ್ತು ಕ್ವಾರಂಟೈನ ಸೆಂಟರ್ ಗಳನ್ನಾಗಿ ಪರಿವರ್ತನೆ ಮಾಡಲಾಯಿತು.ಕೋವಿಡ್ ಕೇರ್ ಸೆಂಟರ್ ಗಳಲ್ಲಿ ವಾರಗಟ್ಟಲೇ ಚಿಕಿತ್ಸೆ ನೀಡಿ ನಂತರ ಅವರನ್ನು ಮನೆಗೆ ಕಳುಹಿಸಿಕೊಡಲಾಗುತ್ತಿತ್ತು.ಅದರಲ್ಲೂ ಯಾರಾದರೂ ಬೇರೆ ಊರಿನಿಂದ ಬಂದರೆ ಸಾಕು ಅವರನ್ನು ಕೆಲಕಾಲ ಕ್ವಾರಂಟೈನ ಮಾಡಿ ಮನೆಗೆ ಕಳುಹಿಸಲಾಗುತ್ತಿತ್ತು. ಅದರಲ್ಲೂ ಬೇರೆ ಬೇರೆ ರಾಜ್ಯಗಳಿಗೆ ದುಡಿಯಲು ಹೋಗಿ ಮರಳಿ ಬಂದ ಕಾರ್ಮಿಕರನ್ನು ಕ್ವಾರಂಟೈನ್ ಮಾಡಿ, ನಂತರ ಮನೆಗೆ ಕಳುಹಿಸಲಾಗುತ್ತಿತ್ತು.
ಕೋವಿಡ್ ವಿಪರೀತ ಹರಡುತ್ತಿರುವ ವೇಳೆಯಲ್ಲಿ ಆಸ್ಪತ್ರೆಯಲ್ಲಿ ಬೆಡ್ ಗಳು ಇಲ್ಲದಾಗಿದ್ದರಿಂದ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಮತ್ತು ಜನರ ಹಿತದೃಷ್ಟಿಯಿಂದ ಹೋಟೆಲ್ ಬಾಡಿಗೆ ಪಡೆದು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಲಾಯಿತು. ಕೇವಲ ಒಂದೇ ವಾರದಲ್ಲಿ 200 ಆಕ್ಸಿಜನ್ ಬೆಡ್ ನಿರ್ಮಾಣ ಮಾಡಿದ್ದು ದಾಖಲೆಯೇ ಸರಿ ಎಂದು ಕೆ.ಎಸ್ ಆಸ್ಪತ್ರೆ ಮಾಲಿಕ ಡಾ. ಬಸವರಾಜ ಕೆ., ತಿಳಿಸಿದರು.