ಕನ್ನಡಪ್ರಭ ವಾರ್ತೆ ಮಂಡ್ಯ
ಒಂದು ಕುಟುಂಬವನ್ನು ಮತಾಂತರ ಮಾಡಿದರೆ ಕನಿಷ್ಠ ೨ ರಿಂದ ೩ ಲಕ್ಷ ರು. ಸಿಗುವುದಂತೆ. ಹಣಕ್ಕೆ ಒಪ್ಪದಿದ್ದರೆ ಬೆದರಿಸಿ ಮತಾಂತರ ಮಾಡುವುದು. ಮತಾಂತರ ಆಗದಿದ್ದರೆ ಬ್ರೈನ್ ಟ್ಯೂಮರ್, ಕ್ಯಾನ್ಸರ್ ಬರುತ್ತೆ. ಕ್ರಿಶ್ಚಿಯನ್ ಧರ್ಮ ಅನುಸರಿಸಿದರೆ ಕ್ಯಾನ್ಸರ್ ಗುಣವಾಗುತ್ತೆ ಎಂದೆಲ್ಲಾ ನಂಬಿಸಿ ಮತಾಂತರ ಮಾಡಿದ್ದಾರೆ ಎಂತು ತಿಳಿದುಬಂದಿದೆ.
ಬಲವಂತದ ಮತಾಂತರಕ್ಕೆ ಒಪ್ಪದ ಪತ್ನಿ ಲಕ್ಷ್ಮೀ, ಅತ್ತೆ ಶ್ರುತಿ ಅವರ ಮೇಲೆ ಶ್ರೀಕಾಂತ್ ನಡೆಸಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾವನ ಕರಾಳ ಮುಖವನ್ನು ಬಾಮೈದ ರವಿಕಿರಣ್ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.ಶ್ರೀಕಾಂತ್, ಹರೀಶ್, ಪ್ರಶಾಂತ್ ಹಾಗೂ ಅವರ ತಾಯಿ ಕೃಷ್ಣವೇಣಿ ಮತಾಂತರದ ಹೆಡ್ ಆಫೀಸರ್ಸ್. ಮೊಗರಹಳ್ಳಿ ಮಂಟಿಯಲ್ಲಿ ಚರ್ಚ್ ಮಾಡಿಕೊಂಡಿದ್ದಾರೆ. ಇವರಿಗೆಲ್ಲಾ ಕುಮ್ಮಕ್ಕು ನೀಡುತ್ತಿರುವುದು ಪಾತ್ರೆ ಅಂಗಡಿ ರವಿ. ಅವರ ದಂಧೆ ಬೀದಿಗೆ ಬರುತ್ತಿರುವುದಕ್ಕೆ ನಮ್ಮ ಕುಟುಂಬವನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಕಷ್ಟದಲ್ಲಿರುವ ಕುಟುಂಬಗಳ ಸದಸ್ಯರನ್ನು ಗುರುತಿಸಿ ಚರ್ಚ್‌ಗೆ ಕರೆದುಕೊಂಡು ಹೋಗುವರು. ನಿಮಗೆ ದುಡ್ಡು ಸಿಗುತ್ತದೆ, ಮತಾಂತರವಾದರೆ ಕಷ್ಟಗಳೆಲ್ಲಾ ಪರಿಹಾರವಾಗುವುದಾಗಿ ನಂಬಿಸುವರು. ಬಳಿಕ ಬೈಬಲ್ ಕೊಟ್ಟು ಪ್ರಾರ್ಥನೆ ಮಾಡಿಸುತ್ತಾರೆ. ಆ ವಿಡಿಯೋ ತೆಗೆದು ವಿದೇಶಕ್ಕೆ ಕಳುಹಿಸುತ್ತಾರೆ. ಬಳಿಕ ನೀವು ದುಡಿದ ಹಣದಲ್ಲಿ ಇಂತಿಷ್ಟು ಹಣವನ್ನು ಚರ್ಚ್‌ಗೆ ಕೊಡಬೇಕು. ಇಲ್ಲದಿದ್ದರೆ ಕ್ಯಾನ್ಸರ್, ಬ್ರೈನ್ ಟ್ಯೂಮರ್ ಬರುತ್ತೆ ಅಂತ ಹೆದರಿಸುತ್ತಾರೆ ಎಂದು ಆಪಾದಿಸಿದರು.
ವಾರವಾರವೂ ಚರ್ಚ್ ಹೆಸರಿನಲ್ಲಿ ಸುಲಿಗೆ ಮಾಡುತ್ತಾರೆ. ಪಾಲಹಳ್ಳಿ ಗ್ರಾಮದಲ್ಲೇ ನೂರಕ್ಕೂ ಹೆಚ್ಚು ಜನರು ಮತಾಂತವಾಗಿದ್ದಾರೆ. ಶ್ರೀರಂಗಪಟ್ಟಣ, ಪಾಂಡವಪುರ, ಮೈಸೂರಿನಲ್ಲೂ ಮತಾಂತರ ಮಾಡಿದ್ದಾರೆ. ಮತಾಂತರ ಮಾಡಿಕೊಂಡೇ ಕೋಟ್ಯಂತರ ರುಪಾಯಿ ಹಣ ಮಾಡಿದ್ದಾರೆ ಎಂದು ದೂಷಿಸಿದರು.ಒಂದು ಕುಟುಂಬವನ್ನು ಮತಾಂತರಿಸಿದರೆ ಎರಡರಿಂದ ಮೂರು ಲಕ್ಷ ರು. ಹಣ ಸಿಗುತ್ತದೆ. ಕೆಲವರು ಹಣಕ್ಕಾಗಿ, ಮತ್ತೆ ಕೆಲವರು ಭಯದಿಂದ ಮತಾಂತರ ಆಗಿದ್ದಾರೆ. ಮತಾಂತರ ಆಗುತ್ತಿದ್ದಂತೆ ಅವರ ಹೆಸರನ್ನು ಬದಲಾಯಿಸುತ್ತಾರೆ. ಆದರೆ, ಸರ್ಕಾರಿ ಸವಲತ್ತು ಪಡೆಯುವ ಸಲುವಾಗಿ ದಾಖಲೆಗಳಲ್ಲಿ ಹಳೇ ಹೆಸರೇ ಮುಂದುವರೆದಿರುತ್ತದೆ. ಮತಾಂತರ ಮಾಡುವ ಸಲುವಾಗಿಯೇ ಸುಮಾರು ೩೦ ಜನರು ಗುಂಪು ಮಾಡಿಕೊಂಡಿದ್ದಾರೆ. ಅಮಾಯಕರನ್ನೇ ಗುರಿಯಾಗಿಸಿಕೊಂಡು ಮಾನಸಿಕವಾಗಿ ಪರಿವರ್ತನೆ ಮಾಡುತ್ತಿದ್ದಾರೆ. ನೋಡುವುದಕ್ಕೆ ಹಿಂದೂಗಳ ರೀತಿಯೇ ಕಾಣುವ ಮತಾಂತರಿಗಳ ಮನೆಗಳಿಗೆ ಹೋದರೆ ರಾಶಿಗಟ್ಟಲೆ ಬೈಬಲ್ ಸಿಗುತ್ತವೆ ಎಂದು ಹೇಳಿದರು.