ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರೇಗೌಡ ಸಭಾಂಗಣದಲ್ಲಿ ಹಿರಿಯ ಗಮಕಿ ಗಾಯಕ ಕಲಾಶ್ರೀ ವಿದ್ಯಾಶಂಕರ್ ನೇತೃತ್ವದ ಶ್ರೀ ರಂಜಿನಿ ಕಲಾವೇದಿಕೆ, ಕರ್ನಾಟಕ ಸಂಘ, ಪುತಿನ ಟ್ರಸ್ಟ್, ಜೈ ಕರ್ನಾಟಕ ಪರಿಷತ್, ಎಲ್ಲರೂಳಗೊಂದಾಗೋ, ಮಂಕುತಿಮ್ಮ ಟ್ರಸ್ಟ್, ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್ ನ ಸಹಯೋಗದಲ್ಲಿ ಆಯೋಜಿಸಿದ್ದ 2 ದಿನಗಳ ವಿಶಿಷ್ಟ ಕಾವ್ಯಗಳ ಗಮಕ ಸಂಭ್ರಮದ ಸಮಾರೋಪ ಭಾಷಣ ಮಾಡಿದರು.
ಕರ್ನಾಟಕದ ಸಾಹಿತ್ಯ ಸಂಪತ್ತು, ಸಂಸ್ಕೃತಿ ಅತ್ಯಂತ ಶ್ರೇಷ್ಠ ವಾಗಿದೆ. ಗಮಕ ಕಲೆ ಮೂಲಕ ಸಾಹಿತ್ಯದ ಸೊಬಗು, ಮಹತ್ವದ ಕುರಿತು ಎಲ್ಲರನ್ನು ತಲುಪಿ ಎಲ್ಲರೂ ಕನ್ನಡ ಭಾಷೆ ಬಗ್ಗೆ ಜಾಗೃತಿ, ಅಭಿಮಾನ ಬೆಳೆಸಿಕೊಳ್ಳಬೇಕು. ಇಂದಿನ ತಾಂತ್ರಿಕ ಯುಗದಲ್ಲಿ ಓದುವ, ಆಲಿಸುವ ಆಸ್ವಾದಿಸುವ ಪ್ರವೃತ್ತಿ, ತಾಳ್ಮೆ ಇಂದಿನ ಯುವ ಜನಾಂಗ, ವಿದ್ಯಾರ್ಥಿಗಳಿಗೆ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಮನೆ ಮನೆಗಳಲ್ಲಿ ಗಮಕ ಹಾಗೂ ಸಾಹಿತ್ಯ ಸಂಬಂಧಿತ ಕಾರ್ಯಕ್ರಮಗಳನ್ನು ಆಯೋಜಿಸಿ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ಕಾರ್ಯವನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಶ್ರೀ ರಂಜಿನಿ ಕಲಾ ವೇದಿಕೆ ಕಾಳಜಿ ಮೆಚ್ಚುವಂಥದ್ದು ಎಂದರು.
ಕಾರ್ಯಕ್ರಮವನ್ನು ಜೈ ಕರ್ನಾಟಕ ಪರಿಷತ್ ನ ರಾಜ್ಯಾಧ್ಯಕ್ಷ ಡಾ.ಎಸ್.ನಾರಾಯಣ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯದ 5 ಜಿಲ್ಲೆಗಳಿಂದ ಆಗಮಿಸಿದ್ದ ಖ್ಯಾತ ಗಮಕಿಗಳಿಂದ ತುಳಸಿ ರಾಮಾಯಣ, ಯುಗ ಸಂಧ್ಯಾ, ದಶಾವತಾರ, ಮಂಕುತಿಮ್ಮ ನ ಕಗ್ಗ, ರನ್ನನ ಗದಾ ಯುದ್ಧ, ಕನಕದಾಸರ ಕೃತಿ ಗಾಯನ, ಗಿಟಾರ್ ವಾದನ, ವಿದ್ಯಾರ್ಥಿಗಳು ನಡೆಸಿಕೊಟ್ಟ ಜೈಮಿನಿ ಭಾರತದ ವೀರ ಲವ ವಾಚನ ವ್ಯಾಖ್ಯಾನ ಕಾರ್ಯಕ್ರಮಗಳು ಸೇರಿದ್ದ ಅಪಾರ ಸಂಖ್ಯೆಯ ರಸಿಕರನ್ನು ರಂಜಿಸುವಲ್ಲಿ ಯಶಸ್ವಿಯಾದವು.ಇದೇ ಸಂದರ್ಭದಲ್ಲಿ ಖ್ಯಾತ ಗಮಕಿ ವ್ಯಾಖ್ಯಾನಕಾರ ಡಾ.ಕೃ.ಪಾ.ಮಂಜುನಾಥ್ ಅವರನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು. ವೇದಿಕೆ ಅಧ್ಯಕ್ಷ ಕಲಾಶ್ರೀ ವಿದ್ಯಾಶಂಕರ್ ಸ್ವಾಗತಿಸಿದರು. ನಾರಾಯಣ ಸ್ವಾಮಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.