ಕನ್ನಡಪ್ರಭ ವಾರ್ತೆ ಬೆಳಗಾವಿ
ಮನೆಯಲ್ಲಿನ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು 9 ತಿಂಗಳ ಮಗು ಸೇರಿ ಒಂದೇ ಕುಟುಂಬದ ಏಳು ಜನರಿಗೆ ಗಂಭೀರ ಗಾಯವಾಗಿರುವ ಘಟನೆ ಗೋಕಾಕ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದ್ದು, ಘಟನೆ ಗ್ರಾಮಸ್ಥರು ಬೆಚ್ಚಿಬೀಳುವಂತೆ ಮಾಡಿದೆ.ಅಕ್ಕತಂಗೇರಹಾಳ ಗ್ರಾಮದ ರಾಜಶ್ರೀ ಅಶೋಕ ನಿರ್ವಾಣಿ, ಅಶೋಕ ಬಸಪ್ಪ ನಿರ್ವಾಣಿ (41), ಸೋಮನಿಂಗ ಬಸಪ್ಪ ನಿರ್ವಾಣಿ (35), ದೀಪಾ ಸೋಮಲಿಂಗ ನಿರ್ವಾಣಿ ಮತ್ತು ಮಕ್ಕಳಾದ ನವೀನ ಅಶೋಕ ನಿರ್ವಾಣಿ, ವಿದ್ಯಾ ಅಶೋಕ ನಿರ್ವಾಣಿ (14) , ಹಾಗೂ ಬಸನಗೌಡ ಸೋಮಲಿಂಗ ನಿರ್ವಾಣಿ (9 ತಿಂಂಗಳು) ಗಾಯಗೊಂಡವರು.
ಮನೆಯವರು ಶನಿವಾರ ರಾತ್ರಿ ಊಟ ಮಾಡಿ ನಿದ್ರೆಗೆ ಜಾರಿದ್ದರು. ಗ್ಯಾಸ್ ಸೋರಿಕೆಯಾಗಿ ಮನೆ ತುಂಬೆಲ್ಲ ಹರಡಿದ್ದು, ಗ್ಯಾಸ್ ವಾಸನೆ ಬಂದಿದ್ದರಿಂದ ಪರಿಶೀಲನೆ ನಡೆಸಲೆಂದು ವಿದ್ಯುತ್ ಬಟನ್ ಒತ್ತುತ್ತಿದ್ದಂತೆ ಸ್ಪಾರ್ಕ್ ಆಗಿ ಏಕಾಏಕಿ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.ಸ್ಫೋಟದ ಭೀಕರತೆಗೆ ಮನೆಯ ಹೆಂಚುಗಳು ಹಾರಿ ಹೋಗಿದ್ದು, ಮನೆಯಲ್ಲಿನ ವಸ್ತುಗಲೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸ್ಫೋಟದ ಸದ್ದು ಕೇಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಕೆಲವರು ಬಾಂಬ್ ಸ್ಫೋಟ ಎಂದು ಭಾವಿಸಿದ್ದರೆ, ಇನ್ನೂ ಕೆಲವರು ವಿದ್ಯುತ್ ಪರಿವರ್ತಕ ಸ್ಫೋಟಗೊಂಡಿರಬಹುದು ಎಂದು ಭಾವಿಸಿ ಆತಂಕಗೊಂಡಿದ್ದರು. ಬಳಿಕ ನಿರ್ವಾಣಿ ಮನೆ ಅಕ್ಕಪಕ್ಕ ಕುಟುಂಬಸ್ಥರು ಗ್ರಾಮಸ್ಥರಿಗೆ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ತಿಳಿಸಿದ್ದರಿಂದ ಗ್ರಾಮಸ್ಥರು ಕೊಂಚ ನಿರಾಳರಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಮನೆಯೊಳಗೆ ನರಳಾಟ ಕೇಳಿ ಆಂಬ್ಯುಲೆನ್ಸ್ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದು, ಮನೆಯ ಒಳಗೆ ಹೋಗಿ ನೋಡಿದಾಗ ಕುಟುಂಬದ ಏಳು ಜನರು ಬೆಂಕಿಯ ಜ್ವಾಲೆಯಲ್ಲಿ ಬೆಂದು ನರಳಾಡುತ್ತಿರುವುದು ಕಂಡು ಹೌಹಾರಿದ್ದಾರೆ. ಅದರಲ್ಲೂ 9 ತಿಂಗಳ ಮಗುವಿನ ಸ್ಥಿತಿ ಕಂಡು ಗ್ರಾಮಕ್ಕೆ ಗ್ರಾಮವೇ ಮಮ್ಮಲ ಮರುಗಿದೆ. ಗಾಯಗೊಂಡವರ ನರಳಾಟ ನೋಡಿ ಅನೇಕರು ಕಣ್ಣೀರು ಹಾಕುತ್ತಿರುವ ದೃಶ್ಯ ಕಂಡುಬಂತು.ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಂಕಲಗಿ ಠಾಣೆ ಪೊಲೀಸರು, ಘಟನೆಯಲ್ಲಿ ಗಾಯಗೊಂಡವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಗಂಭೀರವಾಗಿ ಗಾಯಗೊಂಡ ಮೂವರನ್ನು ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಗೋಕಾಕ ಡಿವೈಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳಗಾವಿ ಖಾಸಗಿ ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.