ಕೆಡಕು ಮಾಡುವವರನ್ನು ದೇವರೇ ನೋಡಿಕೊಳ್ಳುತ್ತಾನೆ

KannadaprabhaNewsNetwork | Published : Dec 18, 2023 2:00 AM

ಸಾರಾಂಶ

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಎಲ್ಲರನ್ನೂ ಪ್ರೀತಿಯಿಂದ ಕಂಡವರು. ಯಾರೊಬ್ಬರ ಕೇಡು ಬಯಸದ ಇಂತಹ ವ್ಯಕ್ತಿಗೆ ಕೇಡು ಮಾಡಲು ಬಯಸಿದವರನ್ನು ಆ ದೇವರೇ ನೋಡಿಕೊಳ್ಳುತ್ತಾನೆ ಎಂದು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶ್ರೀಗಳು ವಿಷಾಧಿಸಿದರು.

- ಜಗದೀಶ ಶೆಟ್ಟರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀಶೈಲದ ಚನ್ನಬಸವ ಸ್ವಾಮೀಜಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಎಲ್ಲರನ್ನೂ ಪ್ರೀತಿಯಿಂದ ಕಂಡವರು. ಯಾರೊಬ್ಬರ ಕೇಡು ಬಯಸದ ಇಂತಹ ವ್ಯಕ್ತಿಗೆ ಕೇಡು ಮಾಡಲು ಬಯಸಿದವರನ್ನು ಆ ದೇವರೇ ನೋಡಿಕೊಳ್ಳುತ್ತಾನೆ ಎಂದು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶ್ರೀಗಳು ವಿಷಾಧಿಸಿದರು.

ಭಾನುವಾರ ಇಲ್ಲಿನ ಸವಾಯಿ ಗಂಧರ್ವ ಸಭಾಂಗಣದಲ್ಲಿ ಎಸ್.ಎಸ್. ಶೆಟ್ಟರ್ ಫೌಂಡೇಶನ್ ವತಿಯಿಂದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರ 68ನೇ ಜನ್ಮದಿನದ ನಿಮಿತ್ತ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರ ಹಾಗೂ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಜಗದೀಶ ಶೆಟ್ಟರ ಯಾರೊಬ್ಬರ ಬಗ್ಗೆ ಅಸೂಯೆ, ಕೇಡು ಬಗೆಯದ ವ್ಯಕ್ತಿ. ವಿರೋಧಿಗಳು ಇವರ ಬಗ್ಗೆ ಅಸೂಯೆಪಟ್ಟರೂ ಅವರನ್ನು ಪ್ರೀತಿಸುವ ವ್ಯಕ್ತಿತ್ವದವರು. ಮನಸ್ಸು ಖಾಲಿ ಇಟ್ಟುಕೊಂಡು ಕೈ ತುಂಬ ಕೆಲಸ ಮಾಡುವವರು. ಯಾವ ವ್ಯಕ್ತಿ, ಯಾರ ಉಸಾಬರಿಗೆ ಹೋಗಲಾರದೆ ಕೆಲಸ ಮಾಡುವವರ ಉಸಾಬರಿಗೆ ಬಂದರೆ ಅವರನ್ನು ದೇವರೆ ನೋಡಿಕೊಳ್ಳುತ್ತಾನೆ. ಧಾರ್ಮಿಕವಾಗಿಯೂ ಮನ್ನಣೆ ಗಳಿಸಿದವರು. ಈ ಹಿಂದೆ ಬಿಜೆಪಿಯಲ್ಲಿದ್ದು ಎಲ್ಲ ಸ್ಥಾನಗಳನ್ನೂ ಅನುಭವಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನಲ್ಲೂ ಎಲ್ಲ ಅಧಿಕಾರವನ್ನು ಅನುಭವಿಸುವ ಸುಯೋಗ ಅವರಿಗೆ ದೊರೆಯುವಂತಾಗಲಿ ಎಂದು ಹಾರೈಸಿದರು.

ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯರು ಅಶೀರ್ವಚನ ನೀಡಿ, ನೈಸರ್ಗಿಕವಾಗಿ ದೊರೆತಿರುವ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವುದು ಅವಶ್ಯಕ. ಸಮಯ ಉಪಯೋಗಿಸಿಕೊಂಡು ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.

ಎಲ್ಲ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯ ದೊಡ್ಡದು‌. ಕಳೆದ 35 ವರ್ಷಗಳಿಂದ ಸಮಾಜಕ್ಕಾಗಿ, ಜನಕ್ಕಾಗಿ ಸೇವೆ ಮಾಡಿರುವ ಜಗದೀಶ ಶೆಟ್ಟರ ಅವರಿಗೆ ದೇವರು ಉತ್ತಮ ಆರೋಗ್ಯ ನೀಡಿದ್ದಾನೆ. ಅವರು ದೀರ್ಘಾಯುಷಿಗಳಾಗಿ ಸಮಾಜ ಸೇವೆ ಮಾಡಲಿ ಎಂದು ಹಾರೈಸಿದರು.

ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ಫಕೀರ ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ಕಳೆದ 25 ವರ್ಷಗಳಿಂದ ಜಗದೀಶ ಶೆಟ್ಟರ ಅವರನ್ನು ನೋಡಿಕೊಂಡು ಬಂದಿದ್ದೇವೆ. ಹಲವು ಅಧಿಕಾರಗಳನ್ನು ಅನುಭವಿಸಿದರೂ ಒಂದೇ ನಿಲುವಿಗೆ ಬದ್ಧರಾಗಿರುವವರು ಎಂದು ಶ್ಲಾಘಿಸಿದರು.

ಹತ್ತಿಕ್ಕುವ ಕೆಲಸವಾಗುತ್ತಿದೆ:

ಲಿಂಗಾಯತ ಸ್ವಾಮೀಜಿಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಹಾಗೂ ರಾಜಕೀಯ ಮುಖಂಡರನ್ನು ತುಳಿಯುವ ಕಾರ್ಯ ಈ ರಾಜ್ಯದಲ್ಲಿ ನಡೆಯುತ್ತಿದೆ. ಸ್ವಾಮೀಜಿಗಳ ಹಾಗೂ ರಾಜಕೀಯ ಮುಖಂಡರ ತೇಜೋವಧೆಯನ್ನು ಯಾರು ಸಹಿಸಬಾರದು. ಮಠಾಧೀಶರು, ಸಮಾಜದ ಮುಖಂಡರು ಸಮಾಜದ ಕಂಬಗಳಿದ್ದಂತೆ. ಅವುಗಳನ್ನು ಸ್ಥಿರವಾಗಿರುವಂತೆ ಕಾಯ್ದುಕೊಳ್ಳಬೇಕು. ಸಮಾಜದ, ಮಠಗಳ ಉಳಿವಿಗೆ ಶ್ರಮಿಸಬೇಕು ಎಂದು ಭಕ್ತರಿಗೆ ಕರೆನೀಡಿದರು.

ಮೂರುಸಾವಿರ ಮಠದ ಪೀಠಾಧ್ಯಕ್ಷ ಡಾ. ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಜಗದೀಶ ಶೆಟ್ಟರ ಅವರದ್ದು ಸುಸಂಸ್ಕೃತ ವ್ಯಕ್ತಿತ್ವ. ನಮ್ಮ ಶ್ರೀ ಮಠದ ಏಳಿಗೆಗಾಗಿ ಅವರು ಸದಾ ಶ್ರಮಿಸುತ್ತಿರುವವರು. ಇಂತಹ ರಾಜಕಾರಣಿಗಳು ಸದಾ ಜನರ ಮಧ್ಯೆ ಇದ್ದು, ಜನರ ಸಮಸ್ಯೆಗಳಿಗೆ ಧ್ವನಿಯಾಗಬೇಕು ಎಂದರು.

ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ ಶೆಟ್ಟರ ಮಾತನಾಡಿ, ನಮ್ಮ ಫೌಂಡೇಶನ್ ವತಿಯಿಂದ ಹಲವು ರೀತಿ ಸಮಾಜಮುಖಿ ಕಾರ್ಯಗಳನ್ನು ಕಳೆದ 20 ವರ್ಷಗಳಿಂದ ಮಾಡಿಕೊಂಡು ಬರಲಾಗುತ್ತಿದೆ. ಬಸವಣ್ಣನ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಏನು ಎಂಬುದನ್ನು ತೋರಿಸಿದ್ದೇನೆ:

ಜೀವನದಲ್ಲಿ ಏರಿಳಿತ ಇದ್ದೇ ಇರುತ್ತವೆ. ಅವುಗಳನ್ನು ಸವಾಲಾಗಿ ಸ್ವೀಕರಿಸಬೇಕು. ಶೆಟ್ಟರ ಉಸಾಬರಿಗೆ ಬಂದವರಿಗೆ ಏನಾಗುತ್ತದೆ ಎಂಬುದು ಈಗಾಗಲೇ ಹಲವರಿಗೆ ತಿಳಿದಿದೆ. ಮತ್ತೆ ನನ್ನ ಉಸಾಬರಿಗೆ ಬಂದರೆ ಏನು ಆಗುತ್ತದೆ ಎಂಬುದನ್ನು ತೋರಿಸುತ್ತೇನೆ ಎಂದರು.

ಈ ವೇಳೆ ತಿಪಟೂರಿನ ಷಡಕ್ಷರಿ ಮಠದ ರುದ್ರಮುನಿ ಶ್ರೀಗಳು, ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿದರು. ಎಸ್‌.ಎಸ್‌. ಶೆಟ್ಟರ ಫೌಂಡೇಶನ್‌ ಅಧ್ಯಕ್ಷ ಸಂಕಲ್ಪ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಉಜ್ಜಯನಿ ಪೀಠದ ಡಾ. ಸಿದ್ಧಲಿಂಗ ಶಿವಾಚಾರ್ಯರು, ಧಾರವಾಡ ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಶ್ರೀಗಳು, ರುದ್ರಾಕ್ಷಿಮಠದ ಬಸವಲಿಂಗ ಶ್ರೀಗಳು, ಎರಡೆತ್ತಿನ ಮಠದ ಸಿದ್ಧಲಿಂಗ ಶ್ರೀಗಳು ಸೇರಿದಂತೆ 50ಕ್ಕೂ ಅಧಿಕ ಮಠಾಧೀಶರು, ಮಾಜಿ ಶಾಸಕ ನಂಜುಂಡಸ್ವಾಮಿ, ಎಸ್‌.ಐ. ಚಿಕ್ಕನಗೌಡ್ರ ಸೇರಿ ಹಲವರಿದ್ದರು. ಮಲ್ಲಿಕಾರ್ಜುನ ಸಾವುಕಾರ ಸ್ವಾಗತಿಸಿದರು.

ಅನೇಕ ಶ್ರೀಗಳಿಂದ ಆಶೀರ್ವಾದ

ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ್ ಶೆಟ್ಟರ್ ಜನ್ಮದಿನದ ಹಿನ್ನೆಲೆಯಲ್ಲಿ ಸವಾಯಿ ಗಂಧರ್ವ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಜ್ಜಯಿನಿ, ಕಾಶಿ, ಶ್ರೀಶೈಲ ಪೀಠದ ಶ್ರೀಗಳು, ಮೂರುಸಾವಿರ ಮಠದ ಶ್ರೀಗಳು, ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀಗಳು, ಧಾರವಾಡದ ಮುರುಘಾ ಮಠದ ಶ್ರೀಗಳು, ಮುಕ್ತಿಮಂದಿರದ ಶ್ರೀಗಳು, ಚಳ್ಳಗೇರಿಯ ಶ್ರೀಗಳು, ಸುಳ್ಳ, ಬೊಮ್ಮನಹಳ್ಳಿ, ರುದ್ರಾಕ್ಷಿಮಠ, ಎರಡತ್ತಿನ ಮಠ ಸೇರಿದಂತೆ 50ಕ್ಕೂ ಅಧಿಕ ಮಠಾಧೀಶರು ಜಗದೀಶ ಶೆಟ್ಟರ್‌ ಅವರನ್ನು ಆಶೀರ್ವದಿಸಿದರು. ಜನ್ಮದಿನದ ಹಿನ್ನೆಲೆ ಕಳೆದ 8 ದಿನಗಳಿಂದ ಹುಬ್ಬಳ್ಳಿಯ ವಿವಿಧ ಭಾಗಗಳಲ್ಲಿ ಉಚಿತ ಕಣ್ಣು ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ ಆಯೋಜಿಸಲಾಗಿತ್ತು.

Share this article