ಅಡುಗೆ ಅನಿಲ ಸೋರಿಕೆಯಾಗಿ ಮನೆ ಬೆಂಕಿ ಬಿದ್ದು ಅಪಾರ ನಷ್ಟ ಸಂಭವಿಸಿ, ಮನೆಯಲ್ಲಿದ್ದವರು ಕೂದಳೆಲೆ ಅಂತರದಲ್ಲಿ ಪಾರಾದ ಘಟನೆ ಡಾಣನಹಳ್ಳಿ ತೋಟದ ಮನೆಯಲ್ಲಿ ನಡೆದಿದೆ.
ಕಿಕ್ಕೇರಿ: ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಾಗಿ ಮನೆ ಬೆಂಕಿ ಬಿದ್ದು ಅಪಾರ ನಷ್ಟ ಸಂಭವಿಸಿ, ಮನೆಯಲ್ಲಿದ್ದವರು ಕೂದಳೆಲೆ ಅಂತರದಲ್ಲಿ ಪಾರಾದ ಘಟನೆ ಡಾಣನಹಳ್ಳಿ ತೋಟದ ಮನೆಯಲ್ಲಿ ನಡೆದಿದೆ. ಗ್ರಾಮದ ರಾಜನಾಯ್ಕ ತಾಯಮ್ಮ ಮನೆ ಬೆಂಕಿಗಾಹುತಿಯಾಗಿ ಅಪಾರ ನಷ್ಟವಾಗಿದೆ. ಸಿಲಿಂಡರ್ ಅಳವಡಿಕೆಯಲ್ಲಿ ಆದ ಲೋಪದಿಂದ ಅನಿಲ ಸೋರಿಕೆಯಾಗಿ ಬೆಂಕಿ ಸ್ಪರ್ಶವಾಗಿದೆ. ಇದರಿಂದ ಬೆಂಕಿ ಇಡೀ ಮನೆ ಆವರಿಸಿ ಮನೆ ಮೇಲ್ಚಾವಣಿ, ಆಹಾರ ಪದಾರ್ಥ, ಧವಸ ಧಾನ್ಯ, ಬಟ್ಟೆ ಹಾಗೂ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಕೂದಲೆಳೆಯಲ್ಲಿ ಮನೆಯಲ್ಲಿದ್ದವರು ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಅಕ್ಕಪಕ್ಕದ ತೋಟದ ಮನೆಯವರು ಬೆಂಕಿ ಉರಿಯುತ್ತಿರುವುದನ್ನು ಕಂಡು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ವಿಷಯ ತಿಳಿದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಆರ್ಥಿಕ ಪರಿಹಾರ ನೀಡಿದರು. ಸರ್ಕಾರದಿಂದ ಸೂಕ್ತ ನೆರವು ನೀಡಲು ಯತ್ನಿಸಲಾಗುವುದು ಎಂದರು. ಕೆಲವು ದಿನಗಳ ಹಿಂದೆ ಮನೆಗೆ ಆಧಾರವಾಗಿದ್ದ ತಾಯಮ್ಮಅವರಿಗೆ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಜೊತೆಗೆ ಕೆಲವು ತಿಂಗಳ ಹಿಂದೆ ಮನೆಯ ಮಗಳು ಆಕಸ್ಮಿಕವಾಗಿ ಮೃತವಾಗಿದ್ದು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.