ಅಡುಗೆ ಅನಿಲ ದರ ಏರಿಕೆ: ಪ್ರತಿಭಟನೆ

KannadaprabhaNewsNetwork |  
Published : Mar 11, 2026, 01:30 AM IST
ಪೋಟೋ: 10ಎಸ್‌ಎಂಜಿಕೆಪಿ05ಶಿವಮೊಗ್ಗ ನಗರದ ಸೀನಪ್ಪಶೆಟ್ಟಿ ವೃತ್ತದಲ್ಲಿ ಅಡುಗೆ ಅನಿಲ ಬೆಲೆಯನ್ನು ಏರಿಸಿರುವುದನ್ನು ವಿರೋಧಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ಸೌದೆ ಒಲೆಯನ್ನು ಹಚ್ಚಿ ಟೀ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಅಡುಗೆ ಅನಿಲ ಬೆಲೆಯನ್ನು ಏರಿಸಿರುವುದನ್ನು ವಿರೋಧಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ಸೀನಪ್ಪಶೆಟ್ಟಿ (ಗೋಪಿ) ವೃತ್ತದಲ್ಲಿ ಸೌದೆ ಒಲೆಯನ್ನು ಹಚ್ಚಿ ಟೀ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಡುಗೆ ಅನಿಲ ಬೆಲೆಯನ್ನು ಏರಿಸಿರುವುದನ್ನು ವಿರೋಧಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ಸೀನಪ್ಪಶೆಟ್ಟಿ (ಗೋಪಿ) ವೃತ್ತದಲ್ಲಿ ಸೌದೆ ಒಲೆಯನ್ನು ಹಚ್ಚಿ ಟೀ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪದೇ ಪದೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಗಧಾಪ್ರಹಾರ ಮಾಡುತ್ತಿದ್ದು, ಇದನ್ನು ಜಿಲ್ಲಾ ಯುವ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ತೆರಿಗೆ ಹೊರೆ ಅಧಿಕವಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಬಡ ಮತ್ತು ದಿನಗೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಜನಸಾಮಾನ್ಯರಿಗೆ ಹಾಗೂ ಮಧ್ಯಮವರ್ಗದ ಕುಟುಂಬಗಳ ಮೇಲೆ ಭಾರೀ ಹೊರೆಯಾಗಿವೆ. ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅಡುಗೆ ಅನಿಲದ ಬೆಲೆಯನ್ನು 60 ರು. ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 115 ರು.ಗಳಿಗೆ ಹೆಚ್ಚಿಸಿರುವುದು ಖಂಡನೀಯವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೂ ಉದ್ಯೋಗ ಸೃಷ್ಟಿಮಾಡುವುದನ್ನಾಗಲೀ, ಜನಸಾಮಾನ್ಯರ ಜೀವನವನ್ನು ಸರಳಗೊಳಿಸುವ ಕೆಲಸವನ್ನಾಗಲಿ ಮಾಡುತ್ತಿಲ್ಲ. ಬದಲಿಗೆ ಜನರಿಂದ ಮಿತಿಮೀರಿ ತೆರಿಗೆ ವಸೂಲಿ ಮಾಡುವ ಮೂಲಕ ಜನರನ್ನು ಸುಲಿಗೆ ಮಾಡಲು ಹೊರಟಿದೆ ಎಂದು ದೂರಿದರು.

ರಾಷ್ಟ್ರಪತಿಗಳು ಮಧ್ಯಪ್ರವೇಶಮಾಡಿ ಕೇಂದ್ರ ಸರ್ಕಾರದ ಬೆಲೆ ಏರಿಕೆಯ ನಿರ್ಧಾರವನ್ನು ಹಿಂಪಡೆಯಲು ನಿರ್ದೇಶನ ನೀಡಬೇಕು. ಇಲ್ಲವೇ ಜನವಿರೋಧಿ ಕೇಂದ್ರ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ನೀಡಿರುವ ಮನವಿಯಲ್ಲಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜವಳಿ ನಿಗಮದ ಅಧ್ಯಕ್ಷ ಕೆ. ಚೇತನ್‌ಗೌಡ, ಯುವ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಹರ್ಷಿತ್‌ಗೌಡ, ನಗರಾಧ್ಯಕ್ಷ ಚರಣ ಜೆ.ಶೆಟ್ಟಿ, ಪಾಲಿಕೆ ಮಾಜಿ ಸದಸ್ಯ ಎಚ್.ಸಿ. ಯೋಗೀಶ್, ಪ್ರಮುಖರಾದ ಮಧು, ಶಿವಕುಮಾರ್, ಸುವರ್ಣ ನಾಗರಾಜ್, ಚಿನ್ನಪ್ಪ, ವಿಜಯ್ ಸೇರಿದಂತೆ ಹಲವರಿದ್ದರು.

ಮೋದಿ, ಟ್ರಂಪ್ ಮತ್ತು ಸೌದೆ ಒಲೆ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಣತಿಯತೆ ನಡೆದುಕೊಳ್ಳುತ್ತಿದ್ದಾರೆ. ಪ್ರತಿ ವಿಷಯಕ್ಕೂ ಟ್ರಂಪ್ ಒಪ್ಪಿಗೆ ಪಡೆಯುತ್ತಿದ್ದಾರೆ ಎಂಬ ಅಣಕು ಪ್ರದರ್ಶನವನ್ನು ಪ್ರತಿಭಟನಕಾರರು ಮಾಡಿದರು. ಅಲ್ಲದೆ ಗೋಪಿ ವೃತ್ತದಲ್ಲಿ ಸೌದೆ ಒಲೆ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿಗೆ ಬಲಗೈ ಸಮಾಜ ಪ್ರತಿಭಟನೆ
ಎನ್‌ಆರ್‌ ಪುರ ರಸ್ತೆ ವಿಸ್ತರಣೆಗೆ 30ಕ್ಕೆ ಸಿಎಂ ಶಂಕುಸ್ಥಾಪನೆ: ಶ್ರೀನಿವಾಸ್