ಕೊಪ್ಪಳ: ಅಡುಗೆ ಅನಿಲ ಕೃತಕ ಅಭಾವ ಸೃಷ್ಟಿಸಿ ದುಡಿವ ಜನರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ಅಡುಗೆ ಅನಿಲ ಕೊರತೆ ಆಗದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಮಾರ್ಕ್ಸ್‌ವಾದಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿಯವರು ನಗರದ ಕನಕದಾಸ ವೃತ್ತದಲ್ಲಿ ಸಿಲಿಂಡರ್ ಇಟ್ಟು ಪ್ರತಿಭಟಿಸಿದರು.
ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ಆಕ್ರಮಣ ಇಂಧನ ಪೂರೈಕೆ ಸರಪಳಿಗಳನ್ನು ಅಸ್ಥಿರಗೊಳಿಸಿದೆ ಮತ್ತು ಸರ್ಕಾರ ಮಾಡಿದ ಹೇಳಿಕೆಗಳ ಹೊರತಾಗಿಯೂ, ಜನರು ತೀವ್ರವಾಗಿ ಬಳಲುತ್ತಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಸರ್ಕಾರವು ಸಬ್ಸಿಡಿ ಸಹಿತ ಮತ್ತು ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆಗಳನ್ನು ಹೆಚ್ಚಿಸಿದೆ. ಗ್ಯಾಸ್ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ₹1,500 ರಿಂದ ₹4,000 ವರೆಗೆ ಮಾರಾಟ ಮಾಡಲಾಗುತ್ತಿದೆ. ಕಾಳ ಸಂತೆಯಲ್ಲಿ ಮಾರಾಟ ತಡೆಯಲು ಮತ್ತು ನಿಜವಾಗಿಯೂ ಅಗತ್ಯವಿರುವ ಎಲ್ಲ ವ್ಯಕ್ತಿಗಳಿಗೆ ಸಿಲಿಂಡರ್‌ಗಳ ಲಭ್ಯವಾಗುವಂತೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಮಿತಿಯ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಚಂದ್ರಪ್ಪ ಹೊಸಕೆರಾ, ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುಂಕಪ್ಪ ಗದಗ್, ಮಂಜುನಾಥ್ ಡಗ್ಗಿ, ಶಿವು ಬೆಣಕಲ್, ಬಸವರಾಜ ಆನೆಗುಂದಿ, ಮುತ್ತಣ್ಣ, ಕೃಷ್ಣಪ್ಪ, ಫಕೀರಮ್ಮ ಮಿರಗನತಂಡಿ, ರಾಮಣ್ಣ ದೊಡ್ಡಮನಿ, ಹುಲುಗಪ್ಪ ಗೋಕಾವಿ, ಗಂಗಪ್ಪ ಕೊರವರ, ಅಮರವ್ವ ಗದಗ ಇತರರಿದ್ದರು.