ಶಾಂತಿ ಸೌಹಾರ್ದತೆಯ ಗಣೇಶ ಹಬ್ಬಕ್ಕೆ ಸಹಕರಿಸಿ: ಜಿಲ್ಲಾಧಿಕಾರಿ ಟಿ.ವೆಂಕಟೇಶ್

KannadaprabhaNewsNetwork |  
Published : Aug 23, 2025, 02:00 AM IST
ಚಿತ್ರ 3 | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಈ ಬಾರಿಯ ಗೌರಿ ಗಣೇಶ ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸೋಣ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲೆಯಲ್ಲಿ ಈ ಬಾರಿಯ ಗೌರಿ ಗಣೇಶ ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸೋಣ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಹಾಗೂ ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ಕುರಿತು ಅಧಿಕಾರಿಗಳು ಹಾಗೂ ಸಂಘಟಕರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಗಣೇಶ ಹಬ್ಬ ಹಾಗೂ ನಗರದಲ್ಲಿ ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಶೋಭಾ ಯಾತ್ರೆಯನ್ನು ಶಾಂತಿ ಹಾಗೂ ಸೌಹಾರ್ಧತೆಯಿಂದ ನಡೆಸಲು ಪೊಲೀಸ್ ಇಲಾಖೆಯೊಂದಿಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ಈ ಬಾರಿ ಶೋಭಾಯಾತ್ರೆಯಲ್ಲಿ ಸುಮಾರು 4 ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ. ಪೊಲೀಸ್ ಇಲಾಖೆಯಿಂದ ಈಗಾಗಲೇ ಸೂಕ್ತ ಬಂದೋಬಸ್ತ್‌ಗೆ ಕ್ರಮ ಕೈಗೊಳ್ಳಲಾಗಿದೆ. ನಗರದ ಬಿ.ಡಿ.ರಸ್ತೆ ಹಾಗೂ ಹೊಳಲ್ಕೆರೆ ರಸ್ತೆಯಲ್ಲಿ ಸುಗಮವಾಗಿ ಮೆರವಣಿಗೆ ಹಾದು ಹೋಗುವಂತೆ ನಗರಸಭೆಯಿಂದ ಬ್ಯಾರಿಕೇಡ್‍ಗಳನ್ನು ಅಳವಡಿಸಬೇಕು. ಪೊಲೀಸರು ವೀಕ್ಷಣೆಗೆ ಅನುಕೂಲವಾಗುವಂತೆ ವಾಚ್ ಟವರ್ ನಿರ್ಮಿಸಬೇಕು. ಸ್ವಚ್ಛತೆ, ಕುಡಿಯುವ ನೀರು ಹಾಗೂ ಸಂಚಾರಿ ಶೌಚಾಲಯಗಳ ವ್ಯವಸ್ಥೆ ಮಾಡಬೇಕು. ಮೆರವಣಿಗೆ ಸಾಗುವ ರಸ್ತೆ ಹಾಗೂ ಆಸು ಪಾಸಿನ ಸ್ಥಳದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮೇಲೆ ಸಾರ್ವಜನಿಕರು ಹತ್ತಿ ನಿಲ್ಲದಂತೆ ನಿರ್ಬಂಧ ವಿಧಿಸಬೇಕು. ಬೆಸ್ಕಾಂ ಅಧಿಕಾರಿಗಳು ಮೆರವಣಿಗೆ ವೇಳೆ ವಿದ್ಯುತ್ ಅಡಚಣೆಯಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಪಿಓಪಿ ಗಣೇಶ ಮೂರ್ತಿಗಳ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದ್ದು, ಪರಿಸರ ಅಧಿಕಾರಿಗಳು ತಂಡಗಳನ್ನು ರಚಿಸಿ ಗಣೇಶ ಮೂರ್ತಿಗಳ ಮಾರಾಟ ಸ್ಥಳಗಳಲ್ಲಿ ನಿರಂತರವಾಗಿ ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮೆರವಣಿಗೆಯಲ್ಲಿ ಡಿ.ಜೆ.ಬಳಸಲು ಅನುಮತಿ ನೀಡಲಾಗುವುದಿಲ್ಲ. ಕಳೆದ ಬಾರಿ ಶೋಭಾಯಾತ್ರೆಯಲ್ಲಿ ಸುಮಾರು 3 ಲಕ್ಷಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಸುಮಾರು 10ಕ್ಕೂ ಹೆಚ್ಚು ಜನರಿಗೆ ಡಿಜೆ ಶಬ್ದದಿಂದಾಗಿ ಕಿವಿಯ ತೊಂದರೆ ಉಂಟಾಗಿದೆ. ಬಂದೋಬಸ್ತ್ ಗೆ ನಿಯೋಜಿಸಿದ್ದ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಓರ್ವರು ಸಹ ಕಿವಿ ಸಮಸ್ಯೆಗೆ ತುತ್ತಾಗಿ ಚಿಕಿತ್ಸೆ ಪಡೆದಿದ್ದಾರೆ. ಡಿ.ಜೆ. ಶಬ್ದದಿಂದಾಗಿ ಪೊಲೀಸ್ ವೈರ್ ಲೆಸ್, ವಾಕಿ ಟಾಕಿಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಸಂವಹನದಲ್ಲಿ ಅಡೆ ತಡೆಯಾಗಿತ್ತು. ಇದರಿಂದಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ತೊಂದರೆಯಾಗುತ್ತದೆ. ಮೆರವಣಿಗೆಯಲ್ಲಿ ನಿಗದಿತ ಡೆಸಿಬಲ್‍ಗಿಂತ ಹೆಚ್ಚಿನ ಶಬ್ದ ಉಂಟುಮಾಡುವ ಧ್ವನಿ ವರ್ಧಕ ಸೇರಿದಂತೆ ಶಬ್ದಮಾಲಿನ್ಯ ಮಾಡುವ ಎಲೆಕ್ಟ್ರಾನಿಕ್ ಡಿವೈಸ್‍ಗಳನ್ನು ಬಳಸುವಂತಿಲ್ಲ ಎಂದು ಹೇಳಿದರು.

ಸಾರ್ವಜನಿಕರಿಗೆ ಗೊಂದಲ ಉಂಟುಮಾಡುವ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಪಟಾಕಿಗಳನ್ನು ಸಿಡಿಸುವಂತಿಲ್ಲ. ಒಂದು ವೇಳೆ ಯಾರಾದರೂ ಪಟಾಕಿ ಸಿಡಿಸಿದರೆ ಅವರನ್ನು ಸ್ಥಳದಲ್ಲಿಯೇ ಬಂಧಿಸಲಾಗುವುದು. ಮೆರವಣಿಗೆಯಲ್ಲಿ ಪ್ರಚೋಧನಕಾರಿ ಘೋಷಣೆಗಳನ್ನು ಕೂಗಬಾರದು. ಶೋಭಾಯಾತ್ರೆ ಮೆರವಣಿಗೆಗೆ ಸುಮಾರು 3000 ಪೊಲೀಸ್ ಸಿಬ್ಬಂದಿ ನೇಮಿಸಲಾಗುವುದು. ಆಗಸ್ಟ್ 24 ರಂದು ಎಲ್ಲ ಧರ್ಮಗಳ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉಮೇಶ್ ಈಶ್ವರ್ ನಾಯ್ಕ್, ಜಿಲ್ಲಾ ಪರಿಸರ ಅಧಿಕಾರಿ ಆಸಿಫ್ ಖಾನ್, ನಗರಸಭೆ ಆಯುಕ್ತೆ ರೇಣುಕಾ.ಎಂ ಸೇರಿದಂತೆ ಜಿಲ್ಲೆಯ ಎಲ್ಲಾ ವಿಭಾಗಗಳ ಪೊಲೀಸ್ ಉಪಾಧೀಕ್ಷಕರು, ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನಾ ಸಮಿತಿ ಸಂಘಟಕರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?