ಶ್ರೀಲಂಕಾದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಮಾದರಿ ಅನುಷ್ಠಾನಕ್ಕೆ ಸಂಪೂರ್ಣ ಸಹಕಾರ: ಡಾ. ಹೆಗ್ಗಡೆ

KannadaprabhaNewsNetwork |  
Published : Jan 24, 2025, 12:48 AM IST
11 | Kannada Prabha

ಸಾರಾಂಶ

ಲಂಕಾ ಮೈಕ್ರೋ ಫೈನಾನ್ಸ್ ಪ್ರಾಕ್ಟೀಶನರ್ಸ್ ಅಸೋಸಿಯೇಶನ್ ಅಧ್ಯಕ್ಷ ವಾಸಂತ ಗುಣವರ್ಧನ ಮಾತನಾಡಿ, ಶ್ರೀಲಂಕಾದಲ್ಲಿ ಇದೇ ಮಾದರಿ ಅನುಷ್ಠಾನಗೊಳಿಸಲು ಹೆಗ್ಗಡೆಯವರ ಅನುಮತಿ ಕೋರಿದರು. ಹೆಗ್ಗಡೆಯವರು ಸಂತೋಷದಿಂದ ಒಪ್ಪಿಗೆ ನೀಡಿ ಎಲ್ಲ ರೀತಿಯ ಸಹಕಾರ, ಮಾರ್ಗದರ್ಶನ ನೀಡುವುದಾಗಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ನಾಡಿನಾದ್ಯಂತ ಸುಮಾರು 40,000ಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳಿದ್ದು 4 ಲಕ್ಷಕ್ಕೂ ಮಿಕ್ಕಿ ಪಾಲುದಾರರನ್ನು ಹೊಂದಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವೈಖರಿಯನ್ನು ಅಧ್ಯಯನ ಮಾಡಿ ತಮ್ಮ ದೇಶದಲ್ಲೂ ಅನುಷ್ಠಾನಗೊಳಿಸುವ ಉದ್ದೇಶದಿಂದ ನೆರೆಯ ಶ್ರೀಲಂಕಾ ದೇಶದಿಂದ ಬಂದ ‘ಲಂಕಾ ಮೈಕ್ರೋ ಫೈನಾನ್ಸ್‌ ಪ್ರಾಕ್ಟೀಶನರ್ಸ್ ಅಸೋಸಿಯೇಶನ್’ನ 38 ಸದಸ್ಯರು ಧರ್ಮಸ್ಥಳಕ್ಕೆ ಆಗಮಿಸಿ ಐದು ದಿನಗಳ ತರಬೇತಿಯನ್ನು ಪಡೆದುಕೊಂಡರು.

ತರಬೇತಿಯ ಸಮಾರೋಪ ಸಮಾರಂಭದಲ್ಲಿ ಯೋಜನೆಯ ಅಧ್ಯಕ್ಷ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿ, ಮಹಾತ್ಮ ಗಾಂಧೀಜಿ ಗ್ರಾಮರಾಜ್ಯದ ಪ್ರಗತಿ ಮೂಲಕ ರಾಮರಾಜ್ಯದ ಕನಸು ಕಂಡಿದ್ದರು. ಅವರು ಸಹಕಾರಿ ಚಳವಳಿ ಮೂಲಕ ದೇಶದ ಪ್ರಗತಿಗೆ ಆದ್ಯತೆ ನೀಡಿದರು. ಮಾನವ ಸಂಪನ್ಮೂಲ ಹಾಗೂ ನೆಲ, ಜಲ ಮತ್ತು ಪ್ರಾಕೃತಿಕ ಸಂಪನ್ಮೂಲಗಳ ಸದ್ಬಳಕೆಯೊಂದಿಗೆ ಗ್ರಾಮೀಣ ಪ್ರದೇಶದ ಪ್ರಗತಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ೧೯೮೨ರಲ್ಲಿ ಪ್ರಾಯೋಗಿಕವಾಗಿ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಾರಂಭಿಸಿದ್ದು ಇದು ಯಶಸ್ವಿಯಾಗಿದೆ ಎಂದು ಹೇಳಿದರು. ಅಭಿವೃದ್ಧಿ ಮತ್ತು ಪ್ರಗತಿ ಸಾಧಿಸಲು ಎಲ್ಲರಿಗೂ ಸಮಾನ ಅವಕಾಶವಿದೆ. ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳು ಪ್ರಗತಿಯ ಪಾಲುದಾರರು. ಜನರ ಸಕ್ರಿಯ ಸಹಕಾರ ಮತ್ತು ಸಹಭಾಗಿತ್ವದಿಂದ ಯೋಜನೆ ಯಶಸ್ವಿಯಾಗಿದೆ ಎಂದು ಹೆಗ್ಗಡೆಯವರು ಸಂತಸ ವ್ಯಕ್ತಪಡಿಸಿದರು.

ಯೋಜನೆಯ ಎಲ್ಲ ವ್ಯವಹಾರಗಳು. ಕಾರ್ಯಕ್ರಮಗಳು ಪಾರದರ್ಶಕವಾಗಿದ್ದು ಯಾರು ಬೇಕಾದರೂ ಇದನ್ನು ಅನುಸರಿಸಬಹುದು ಎಂದು ಹೇಳಿದರು.

ಹೇಮಾವತಿ ವೀ. ಹೆಗ್ಗಡೆ ನೇತೃತ್ವದಲ್ಲಿ ಜ್ಞಾನದೀಪ ಮತ್ತು ಜ್ಞಾನವಿಕಾಸ ಕಾರ್ಯಕ್ರಮಗಳ ಮೂಲಕ ಮಹಿಳಾ ಸಬಲೀಕರಣವಾಗಿದೆ. ವ್ಯವಹಾರ ಪರಿಣತರಾಗಿ, ಜನಪ್ರತಿನಿಧಿಗಳಾಗಿ ಇಂದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಹೆಗ್ಗಡೆ ಮೆಚ್ಚುಗೆ ವ್ಯಕ್ತಪಡಿಸಿದರು.

ಲಂಕಾ ಮೈಕ್ರೋ ಫೈನಾನ್ಸ್ ಪ್ರಾಕ್ಟೀಶನರ್ಸ್ ಅಸೋಸಿಯೇಶನ್ ಅಧ್ಯಕ್ಷ ವಾಸಂತ ಗುಣವರ್ಧನ ಮಾತನಾಡಿ, ಶ್ರೀಲಂಕಾದಲ್ಲಿ ಇದೇ ಮಾದರಿ ಅನುಷ್ಠಾನಗೊಳಿಸಲು ಹೆಗ್ಗಡೆಯವರ ಅನುಮತಿ ಕೋರಿದರು. ಹೆಗ್ಗಡೆಯವರು ಸಂತೋಷದಿಂದ ಒಪ್ಪಿಗೆ ನೀಡಿ ಎಲ್ಲ ರೀತಿಯ ಸಹಕಾರ, ಮಾರ್ಗದರ್ಶನ ನೀಡುವುದಾಗಿ ಭರವಸೆ ನೀಡಿದರು.ಶ್ರೀಲಂಕಾದ ಡೆಗಿರಿ ದುಲಾಂಗ ಚಮೀರ, ಮಿಥಿರಾಮ್ ಚಾಮಿಕ ಮಲ್‌ಕಾಂತಿ ರಾಣಸಿಂಘ, ಕನಗರತ್ನಂ ಲಕ್ಷ್ಮಣ್‌ ಈರಜ್, ಎಸ್.ಪಿ. ಬೆನಿತಾಸ್, ರಾಮಸಾಮಿ ರಾಜೇಶ್‌ಖನ್ನಾ ಮಾತನಾಡಿ ಧರ್ಮಸ್ಥಳದ ಶಿಸ್ತು, ಆಡಳಿತ ವ್ಯವಸ್ಥೆ, ಆತಿಥ್ಯ, ಸ್ವಚ್ಛತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಾಸಂತ ಗುಣವರ್ಧನೆ ಅವರು ಡಾ. ಹೆಗ್ಗಡೆಯವರಿಗೆ ತಮ್ಮ ಸಂಸ್ಥೆಯ ವತಿಯಿಂದ ಒಪ್ಪಿಗೆ ಪತ್ರವನ್ನು ಹಸ್ತಾಂತರಿಸಿ ಸನ್ಮಾನಿಸಿದರು.

ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಹೇಮಾವತಿ ವೀ. ಹೆಗ್ಗಡೆ ಉಪಸ್ಥಿತರಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಹಣಕಾಸು ಅಧಿಕಾರಿ ಶಾಂತಾರಾಮ್ ಪೈ ಸ್ವಾಗತಿಸಿದರು. ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶೀಕ ನಿರ್ದೇಶಕ ಆನಂದ ಸುವರ್ಣ ವಂದಿಸಿದರು. ನಿರ್ದೇಶಕ ರಾಜೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಲಂಕಾದಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆಯ ಮಾದರಿ ಅನುಷ್ಠಾನಗೊಳಿಸಲು ತಮ್ಮ ಪೂರ್ಣ ಒಪ್ಪಿಗೆ ಇದೆ. ಬೇಕಾದ ಎಲ್ಲ ಮಾಹಿತಿ, ಅನುಭವ, ಮಾರ್ಗದರ್ಶನ ನೀಡಲಾಗುವುದು. ಮಾನವ ಸಂಪನ್ಮೂಲವನ್ನೂ ಒದಗಿಸಲಾಗುವುದು. ನಮ್ಮದು ಪಾರದರ್ಶಕ ಸಂಸ್ಥೆ. ಇದರ ಬಗ್ಗೆ ಮಾಹಿತಿ ಪಡೆಯಲು ಯಾವುದೇ ಹಿಂಜರಿಕೆ ಬೇಡ. ಶ್ರೀಲಂಕಾ ಸಣ್ಣ ದೇಶವಾದುದರಿಂದ ಅಲ್ಲಿ ಯೋಜನೆ ಯಶಸ್ವಿಯಾಗುತ್ತದೆ - ಡಾ. ವೀರೇಂದ್ರ ಹೆಗ್ಗಡೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!