ಗದಗ: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ನಿರ್ಮಾಣದಲ್ಲಿ ಎಲ್ಲರ ಸಹಕಾರ ಅತ್ಯವಶ್ಯಕ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಭಾರತ ಸರ್ಕಾರದ ರೈಲ್ವೇ ಹಾಗೂ ರಾಷ್ಟ್ರೀಯ ಹೆದ್ದಾರಿಗಳಿಗೆ ರಾಜ್ಯ ಸರ್ಕಾರವು ಭೂಮಿ ಒದಗಿಸಿಕೊಡಬೇಕು ಹಾಗಾಗಿ ಯಾವುದೇ ರಾಷ್ಟ್ರೀಯ ಹೆದ್ದಾರಿ ಡಿಪಿಆರ್ ಅಂತಿಮಗೊಳ್ಳವ ಮೊದಲು ಸಂಬಂಧಿಸಿದ ಅಭಿಯಂತರರು ಸ್ಥಳೀಯ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಗಮನಕ್ಕೆ ನಿರಂತರವಾಗಿ ವರದಿ ಸಲ್ಲಿಸಿ ಅಭಿಪ್ರಾಯಗಳು ಸಂಗ್ರಹಿಸಿ ಆದಷ್ಟು ಕೃಷಿ ಮಾಡದ ಅಥವಾ ಖರಾಬು ಭೂಮಿ ಗುರುತಿಸಿ, ರೈತರಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿ ತೊಂದರೆ ಆಗದಂತೆ ವರದಿ ತಯಾರಿಸಬೇಕು ಎಂದು ಸೂಚಿಸಿದರು.
ಹೆದ್ದಾರಿಗಳಿಗೆ ಮಂಜೂರಾದ ಅನುದಾನವು ಇಲಾಖೆಗಳ ನಡುವಿನ ಅಸಹಕಾರದಿಂದ ಮರಳಿ ಹೋದರೆ ಈ ಪ್ರದೇಶದ ಅಭಿವೃದ್ಧಿಗೆ ಮಾರಕ ಆಗುತ್ತದೆ. ಹಾಗಾಗಿ ಎಲ್ಲರ ನಡುವೆ ಸಹಕಾರ ಅತ್ಯವಶ್ಯಕ, ಯಾವುದೇ ಕಾರಣಗಳಿಗೆ ಆಸ್ಪದ ನೀಡದೆ ಎಲ್ಲ ಅಧಿಕಾರಿಗಳು ಪರಸ್ಪರ ಸಹಕಾರ ಸಮನ್ವಯದಿಂದ ಅಭಿವೃದ್ಧಿ ಕೆಲಸಗಳತ್ತ ಕಾರ್ಯಮುಖವಾಗಬೇಕು ಎಂದರು.ಸಂಸದರಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತು ಎಲ್ಲ ವಿಷಯಗಳ ಬಗ್ಗೆ ಗಂಭೀರವಾಗಿದ್ದೇನೆ, ಹಾಗೇ ಎಲ್ಲ ಅಧಿಕಾರಿಗಳು ನಿರ್ಲಕ್ಷ್ಯ ತೋರದೆ ಗಂಭೀರತೆಯಿಂದ ಕೆಲಸ ನಿರ್ವಹಿಸಿ. ರಸ್ತೆಗಳು ಸುಸ್ಥಿತಿಯಿಂದ ಇರಲು ನದಿ ಭಾಗದಲ್ಲಿ ನಡೆಯುವ ಅಕ್ರಮ ಗಣಿಗಾರಿಕೆಗಳಿಗೆ ತಡೆ ಬೀಳಬೇಕು ಇಲ್ಲದಿದ್ದರೆ ಓವರ್ ಲೋಡ್ ವಾಹನಗಳ ಸಾಗಾಟದಿಂದ ರಸ್ತೆಗಳು ಹದೆಗೆಟ್ಟುತ್ತವೆ, ನಿಯಮ ಬಾಹಿರವಾಗಿ ಅಕ್ರಮವಾಗಿ ಗಣಿಗಾರಿಕೆ ನಡೆಯದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ಕೇಂದ್ರೀಯ ವಿದ್ಯಾಲಯಕ್ಕೆ ಬೇಕಾದ ಜಾಗವನ್ನು ಈಗಾಗಲೇ ಕಾಯ್ದಿರಿಸಿದ್ದು ಹಾಗೂ ಮುಂದಿನ ಶೈಕ್ಷಣಿಕ ವರ್ಷಕ್ಕೆ ಕೇಂದ್ರೀಯ ವಿದ್ಯಾಲಯ ಪ್ರಾರಂಭಿಸಲು ತಾತ್ಕಾಲಿಕ ಕಟ್ಟಡ ಗುರುತಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಜಿಪಂ ಸಿಇಒ ಭರತ್.ಎಸ್., ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಎಂ.ಬಿ. ಸಂಕದ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ.ಎಂ., ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಮೇಶ ಪಾಟೀಲ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.