ಛತ್ರಪತಿ ಶಿವಾಜಿ ತಂದೆ ಬೋಂಸ್ಲೆರ 361ನೇ ಪುಣ್ಯರಾಧನೆ
ಹಿಂದೂ ಸ್ವರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿರಾಜೇ ಬೋಂಸ್ಲೆ ಅವರ ಸಮಾದಿ ನಮ್ಮ ರಾಜ್ಯದ ಹೊದಿಗೆರೆ ಗ್ರಾಮದಲ್ಲಿರುವುದು ನಮ್ಮ ಪೂರ್ವಜನ್ಮದ ಪುಣ್ಯವಾಗಿದ್ದು ಈ ಸಮಾಧಿ ಸ್ಥಳವನ್ನು ಅಭಿವೃದ್ಧಿಪಡಿಸಲು ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಜಿ.ಮಾರುತಿರಾವ್ ಮೂಳೆ ಹೇಳಿದರು.
ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ಗುರುವಾರ ಷಹಾಜಿರಾಜೇ ಬೋಂಸ್ಲೆ ಅವರ ಸಮಾಧಿ ಅವರಣದಲ್ಲಿ ಬೋಂಸ್ಲೆ ಸ್ಮಾರಕ ಅಭಿವೃದ್ದಿ ಮತ್ತು ಸೇವಾ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಬೋಂಸ್ಲೆ ಅವರ 361ನೇ ಪುಣ್ಯರಾಧನೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಈ ಸಮಾಧಿಯ ಸ್ಥಳ ಪ್ರಾಚ್ಯವಸ್ತು ಪುರಾತತ್ವ ಇಲಾಖೆಗೆ ಸೇರಿದ ಪ್ರದೇಶವಾಗಿದ್ದು ಈ ಸಮಾಧಿಯ ಸ್ಥಳದ ಅಭಿವೃದ್ದಿಗೆ ಕೇಂದ್ರ ಸರ್ಕಾರಕ್ಕೆ ಷಹಾಜಿಮಹಾರಾಜರ ಬಗ್ಗೆ ಮನವರಿಕೆ ಮಾಡಿಕೊಟ್ಟು ಸಮಾಧಿ ಸ್ಥಳದ ಅಭಿವೃದ್ದಿಗೆ ಅನುಮತಿ ಪಡೆಯಬೇಕಾಗಿದೆ ಎಂದರು.ಜಿ.ಪಂ ಮಾಜಿ ಸದಸ್ಯ ಹೊದಿಗೆರೆ ರಮೇಶ್ ಮಾತನಾಡಿ, ಷಹಾಜಿಮಹಾರಾಜರು ಯಾವುದೇ ಆಸೆ, ಅಮಿಷಗಳಿಗೆ ಬಲಿಯಾಗದೆ ಈ ದೇಶದ ನೆಲ. ಜಲ, ಸಂಸ್ಕೃತಿಯನ್ನು ಕಾಪಾಡಿದಂತಹ ಮಹಾ ಪ್ರರಾಕ್ರಮಿಗಳಾಗಿದ್ದು ಇಂತಹ ಮಹಾವೀರರ ಸಮಾಧಿ ಸ್ಥಳ ಅಭಿವೃದ್ದಿ ಹೊಂದದೆ ಇರುವುದು ದುರಾದೃಷ್ಟಕರವಾಗಿದೆ. ನಾವು ಸಹ ಷಹಾಜಿ ಮಹಾರಾಜರನ್ನು ಪುಣ್ಯಸ್ಮರಣೆಯ ದಿನ ಮತ್ತು ಜಯಂತಿ ದಿನಗಳಲ್ಲಿ ಮಾತ್ರ ನೆನಪಿಸಿಕೊಳ್ಳುತ್ತಿದ್ದು ಇದು ಆಗಬಾರದು, ನಿರಂತರವಾಗಿ ಈ ಸ್ಥಳಗಳಿಗೆ ಭೇಟಿ ನೀಡುತ್ತಿರಬೇಕು ಎಂದರು.
ಈ ಸಮಾಧಿ ಸ್ಥಳದ ಅಭಿವೃದ್ದಿಗೆ ಈ ಹಿಂದೆ ನಾನು ಒಂದು ಲಕ್ಷ ರು. ಹಣವನ್ನು ದೇಣಿಗೆ ನೀಡಿದ್ದೆ. ಮತ್ತೆ ಅವಶ್ಯಕತೆ ಇದ್ದರೆ ಧನ ಸಹಾಯ ಮಾಡುವ ಜತೆಗೆ ರಾಜ್ಯದ ಲೋಕೋಪಯೋಗಿ ಇಲಾಖೆಯ ಸಚಿವರಾಗಿರುವ ರಮೇಶ್ ಜಾರಕಿಹೊಳಿ ಇವರನ್ನು ಸಮಾಜ ಬಾಂಧವರು ಭೇಟಿ ಮಾಡಿದರೆ ಅವರಿಂದಲೂ ಅನುದಾನ ಕೊಡಿಸುವುದಾಗಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಷಹಾಜಿರಾಜೆ ಬೌಂಸ್ಲೆ ಸ್ಮಾರಕ ಅಭಿವೃದ್ದಿ ಮತ್ತು ಸೇವಾ ಸಂಸ್ಥೆಯ ಅಧ್ಯಕ್ಷ ವೈ.ಮಲ್ಲೇಶ್ ರಾವ್ ಶಿಂಧೆ ವಹಿಸಿದ್ದರು.