ಕನ್ನಡಪ್ರಭ ವಾರ್ತೆ ಚಳ್ಳಕೆರೆ
ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ನಾನೊಬ್ಬನಾದರೂ ಚಿತ್ರದುರ್ಗ ಜಿಲ್ಲೆಗೆ ನಾನು ಹೊಸಬ. ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಿಜೆಪಿ ಅವಕಾಶ ಮಾಡಿಕೊಟ್ಟಿದ್ದು, ಕೂಡಲೇ ನಾನು ಒಂದೂವರೆ ತಿಂಗಳ ಅವಧಿಯಲ್ಲೇ ಇಡೀ ಕ್ಷೇತ್ರ ಸುತ್ತಾಡಿ ಜನರ ಸಂಪರ್ಕ ಪಡೆದೆ. ಆದರೆ, ನಿರೀಕ್ಷೆಗೂ ಮೀರಿ ಈ ಕ್ಷೇತ್ರದ ಮತದಾರರು ನನಗೆ ಗೆಲುವಿನ ಉಡುಗೊರೆ ನೀಡಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಎಲ್ಲಾ ಹಂತದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು, ಯುವಕರು, ಮಹಿಳೆಯರು ಮತ ನೀಡಿ ನನ್ನ ಗೆಲುವಿಗೆ ಸಹಕರಿಸಿದ್ದಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಸೇರಿದಂತೆ ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳಲ್ಲಿ ಹಣತಂದು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ನೂತನ ಸಂಸದ ಗೋವಿಂದ ಎಂ.ಕಾರಜೋಳ ತಿಳಿಸಿದರು.ಅವರು, ನಗರದ ಛೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಜೆಡಿಎಸ್, ಬಿಜೆಪಿ ಮತ್ರಿಕೂಟದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ವಿಶೇಷವೆಂದರೆ ನಾನು ಚುನಾವಣೆ ಪ್ರಚಾರದಲ್ಲಿ ಇರುವಾಗಲೇ ಗ್ರಾಮೀಣ ಭಾಗದಿಂದ ಪ್ರತಿನಿತ್ಯ ನೂರಾರು ಕರೆಗಳು ಬರುತ್ತಿದ್ದವು. ನಾವೆಲ್ಲರೂ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕೆಂಬ ಮಹದಾಸೆಯಿಂದ ಬಿಜೆಪಿಗೆ ಮತ ನೀಡುತ್ತೇವೆ. ಈ ಕ್ಷೇತ್ರದಲ್ಲಿ ನಿಮ್ಮ ಗೆಲುವು ಗ್ಯಾರಂಟಿ. ದೈರ್ಯದಿಂದ ಓಡಾಡಿ ಎಂದು ಮತದಾರರು ತಿಳಿಸುತ್ತಿದ್ದರು. ಇದು ನನಗೆ ಹೆಚ್ಚಿನ ಪ್ರಚಾರ ಮಾಡಲು ಸಹಾಯವಾಯಿತು ಎಂದರು.ಪ್ರಸ್ತುತ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿಯಿಂದ ಗೆಲುವು ಸುಲಭವಾಗಿದ್ದು ಮುಂದಿನ ದಿನಗಳಲ್ಲೂ ಎಲ್ಲಾ ಚುನಾವಣೆಯಲ್ಲೂ ಈ ಮೈತ್ರಿ ಶಾಶ್ವತವೆಂದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಯಣ್ಣ ಮಾತನಾಡಿ, ಚಿತ್ರದುರ್ಗ ಕ್ಷೇತ್ರ ನೀರಾವರಿ ಸೌಲಭ್ಯಗಳಿಂದ ಹಿಂದುಳಿದೆ. ಗೋವಿಂದ ಕಾರಜೋಳ ಯಾರು ಎಂಬ ಪ್ರಶ್ನೆಗೆ ಯುವ ಮತದಾರರು ಹೋಗದೆ ಬಿಜೆಪಿಗೆ ಮತ ನೀಡಿದ್ದಾರೆ. ಎರಡೂ ಪಕ್ಷದ ಕಾರ್ಯಕರ್ತರ ಶ್ರಮ ಗೆಲುವು ತರಲು ಸಾಧ್ಯವಾಗಿದೆ. ಕ್ಷೇತ್ರದ ಜನತೆ ನಿಮ್ಮ ಮೇಲೆ ಅಪಾರವಾದ ಗೌರವ, ವಿಶ್ವಾಸದಿಂದ ಮತ ನೀಡಿದ್ದಾರೆ. ಅದೇ ರೀತಿ ನಿಮ್ಮಿಂದ ಹೆಚ್ಚಿನ ಅಭಿವೃದ್ಧಿ ನಿರೀಕ್ಷಿಸಿದ್ದಾರೆ. ಆದ್ದರಿಂದ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿ ಎಂದರು.ಬಿಜೆಪಿ ಮುಖಂಡ ಕೆ.ಟಿ. ಕುಮಾರಸ್ವಾಮಿ ಮಾತನಾಡಿ, ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲುವು ಅಸಾಧ್ಯ. ಅಭ್ಯರ್ಥಿ ಗೋವಿಂದ ಕಾರಜೋಳ ಹೊಸಬರು ಆದ್ದರಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಗ್ಯಾರಂಟಿ ಎಂಬ ಅಭಿಪ್ರಾಯವಿತ್ತು. ಆದರೆ, ಗೋವಿಂದ ಕಾರಜೋಳ ಅವರು ಚುನಾವಣಾ ಪ್ರಚಾರ ಸಂದರ್ಭದಲ್ಲಿ ತೊಡಗಿಕೊಂಡ ರೀತಿ ನೋಡಿ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಗ್ಯಾರಂಟಿ ಎಂಬ ಭಾವನೆ ನಮ್ಮಲ್ಲಿ ಮೂಡಿತ್ತು ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಮಾತನಾಡಿ, ಚಿತ್ರದುರ್ಗ ಕ್ಷೇತ್ರದಲ್ಲಿ ಜೆಡಿಎಸ್‌ನ ಯಾವ ಶಾಸಕರು ಇಲ್ಲ, ಸಂಸದ ಗೋವಿಂದ ಕಾರಜೋಳ ಅವರೇ ಸದ್ಯದ ಸ್ಥಿತಿಯಲ್ಲಿ ನಮಗೆ ಮಾರ್ಗದರ್ಶಿಯಾಗಿದ್ದಾರೆ. ಆದ್ದರಿಂದ ಮತದಾರ ಮತ್ತು ಕಾರ್ಯಕರ್ತರ ಪರಿಶ್ರಮಕ್ಕೆ ಉತ್ತಮ ಬೆಲೆ ಸಿಗಬೇಕೆಂಬುವುದು ನನ್ನ ಅಭಿಲಾಷೆ ಎಂದರು.ಈ ವೇಳೆ ಇಲ್ಲಿನ ಛೇಂಬರ್ ಆಫ್ ಕಾಮರ್ಸ್, ದಲ್ಲಾಲರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಯವರು ನೂತನ ಸಂಸದರಿಗೆ ಶಾಲು, ಪುಪ್ಪಹಾರ ಹಾಕಿ ಗೌರವಿಸಿದರು. ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ಮುರುಳಿ, ಜಿಲ್ಲಾ ಕಾರ್ಯದರ್ಶಿ ಬಾಳೆಮಂಡಿ ರಾಮದಾಸ್, ಮುಖಂಡರಾದ ಜಯಪಾಲ್, ವೆಂಕಟೇಶ್ ಯಾದವ್, ಡಿ.ಸೋಮಶೇಖರ ಮಂಡಿಮಠ, ಎನ್. ಓಬಳೇಶ್, ಬಿ.ಎಸ್. ಶಿವಪುತ್ರಪ್ಪ, ಆದಿಭಾಸ್ಕರ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಇಂಧುಮತಿ, ಜಗದಾಂಭ, ಟಿ.ಮಂಜುನಾಥ, ನಗರಸಭಾ ಸದಸ್ಯರಾದ ಸಿ.ಶ್ರೀನಿವಾಸ್, ಪ್ರಮೋದ್, ಪಾಲಮ್ಮ ಮುಂತಾದವರು ಉಪಸ್ಥಿತರಿದ್ದರು.