ಕಂಪ್ಲಿ: ಲಿಂಗಾಯತವು ಸ್ವತಂತ್ರ ಧರ್ಮವಾಗಿದ್ದು, ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸಮಾಜದ ಎಲ್ಲರೂ ಕೈಜೋಡಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಾವಿನಹಳ್ಳಿ ಬಸವರಾಜ ಮಾತನಾಡಿ, ಲಿಂಗಾಯತರು ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಂಡು ಆಚಾರ ಸಂಪನ್ನ ಜೀವನ ನಡೆಸಬೇಕು. ಸರಳತೆ, ಸಮಾನತೆ ಹಾಗೂ ಕಾಯಕ-ದಾಸೋಹ ತತ್ವಗಳನ್ನು ಅನುಸರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಹೊಸಪೇಟೆಯ ವಿಜಯನಗರ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ. ಮೃತ್ಯುಂಜಯ ರುಮಾಲೆ ಉಪನ್ಯಾಸ ನೀಡಿ, ಲಿಂಗಾಯತರು ಕೇವಲ ಲಿಂಗ ಧರಿಸುವುದರಲ್ಲೇ ಸೀಮಿತವಾಗದೆ ನಿತ್ಯ ಲಿಂಗಾರಾಧಕರಾಗಿ ಆತ್ಮಶುದ್ಧಿ ಮತ್ತು ಸಾಧನೆಯ ಮೂಲಕ ನಿಜಾರ್ಥದಲ್ಲಿ ‘ಲಿಂಗಿ’ಗಳಾಗಬೇಕು. ಸದಾಚಾರ, ಶೀಲ ಮತ್ತು ಶಿಸ್ತುಗಳೊಂದಿಗೆ ಬಸವ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಲಿಂಗಾಯತ ಧರ್ಮದ ಮೌಲ್ಯಗಳು ಸಮಾಜದಲ್ಲಿ ಮತ್ತಷ್ಟು ಬಲಗೊಳ್ಳುತ್ತವೆ ಎಂದರು.ಈ ಸಂದರ್ಭದಲ್ಲಿ ಲಿಂಗಾಯತ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಲಾಯಿತು. ರಾಮಸಾಗರದ ಲಿಂಗಾಯತ ಸಮಾಜದ ಪ್ರಮುಖ ಎಚ್. ರಮೇಶಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಭೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಮುಖರಾದ ಜಿ. ಪ್ರಕಾಶ್, ಡಾ. ಶಾರದಾ ಜಗನ್ನಾಥ ಹಿರೇಮಠ, ಪಾಮಯ್ಯಶರಣ, ಬಸವರಾಜ ಅಂಗಡಿ, ಬಿ.ಎಂ. ಪುಷ್ಪಾ, ರುದ್ರಯ್ಯ, ಅಶೋಕ ಕುಕನೂರು, ಎಚ್. ನಾಗರಾಜ, ಬಳೆ ಮಲ್ಲಿಕಾರ್ಜುನ, ಟಿ. ತಿಪ್ಪೇಸ್ವಾಮಿ, ಶಶಿಧರ ಸಿರಿಗೇರಿ, ಗವಿವೀರನಗೌಡ, ಎಂ.ಎನ್. ಲೋಕೇಶ, ಗಣೇಶಗೌಡ, ಬೂದಾಳ್ ರವಿ, ಕೆ. ಯಂಕಾರೆಡ್ಡಿ, ಎಸ್. ರಾಮು ಸೇರಿದಂತೆ ಅನೇಕ ಸಮಾಜದ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.