ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಹಕಾರ ಅಗತ್ಯ

KannadaprabhaNewsNetwork | Published : Mar 1, 2025 1:01 AM

ಸಾರಾಂಶ

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದು ವಡಗೇರಾ ಗ್ರೇಡ್-2 ತಹಸೀಲ್ದಾರ್ ಪ್ರಕಾಶ ಹೊಸಮನಿ ಹೇಳಿದರು.

ತಹಸೀಲ್ದಾರ್ ಪ್ರಕಾಶ ಹೊಸಮನಿ ಅಭಿಪ್ರಯ । ಪೂರ್ವಭಾವಿ ಸಭೆ, ಕಾರ್ಯಪಡೆ ಸಮಿತಿ ಸಭೆ

ಕನ್ನಡಪ್ರಭ ವಾರ್ತೆ ವಡಗೇರಾ

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದು ವಡಗೇರಾ ಗ್ರೇಡ್-2 ತಹಸೀಲ್ದಾರ್ ಪ್ರಕಾಶ ಹೊಸಮನಿ ಹೇಳಿದರು.

ಪ್ಯಾನ್ ಇಂಡಿಯಾ ರಕ್ಷಣೆ ಮತ್ತು ಪುನರ್ ವಸತಿ ಅಭಿಯಾನ - ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಒಂದು ಹೆಜ್ಜೆ ಅಂಗವಾಗಿ ಪಟ್ಟಣದಲ್ಲಿ ನಡೆದ ತಾಲೂಕು ಮಟ್ಟದ ಪೂರ್ವಭಾವಿ ಸಭೆ ಹಾಗೂ ಕಾರ್ಯಪಡೆ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ರಕ್ಷಿಸಿ, ಪುನರ್ ವಸತಿಗೊಳಿಸಿ ಶಿಕ್ಷಣ ಮುಂದುವರಿಕೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಜ.10 ರಂದು ಮಾ.31ರವೆಗೆ ಹಮ್ಮಿಕೊಂಡಿರುವ ರಕ್ಷಣಾ ಕಾರ್ಯಚರಣೆಗೆ ಸಾರ್ವಜನಿಕರು ಹಾಗೂ ಸರಕಾರದ ಪ್ರತಿಯೊಂದು ಇಲಾಖೆಯು ಕೈಜೊಡಿಸಿದಾಗ ಮಾತ್ರ ತಾಲೂಕಿನಾದ್ಯಂತ ಬಾಲಕಾರ್ಮಿಕ ಪದ್ಧತಿ ಎಂಬ ಅನಿಷ್ಠ ಪದ್ಧತಿ ನಿರ್ಮೂಲನೆ ಮಾಡಲು ಸಾಧ್ಯವೆಂದರು.

ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಪ್ರತಿ ತಿಂಗಳು 15 ತಪಾಸಣೆ ಮತ್ತು ಹಠಾತ್ ದಾಳಿ, ತಪಾಸಣೆ ಆಯೋಜಿಸಿವುದು. ಪ್ರತಿ ತಿಂಗಳು 2 ಕಾನೂನು ಅರಿವು-ನೆರವು ಮತ್ತು ಜನಜಾಗೃತಿ ಕಾರ್ಯಕ್ರಮ ಆಯೋಜಿಸುವಂತೆ ಹಾಗೂ ಬಾಲಕಾರ್ಮಿಕ ಎಂಬ ಅನಿಷ್ಠ ಪದ್ಧತಿಯನ್ನು ನಿರ್ಮೂಲನೆ ಮಾಡಲು ಎಲ್ಲಾ ಇಲಾಖೆಯ ಅಧಿಕಾರಿಗಳು ಕೈಜೋಡಿಸಬೇಕೆಂದು ತಿಳಿಸಿದರು.

ಸಭೆಯ ನಂತರ ನಗರದ ವಾಲ್ಮೀಕಿ ವೃತ್ತದಿಂದ ಕುರಕುಂದ ರಸ್ತೆಯಲ್ಲಿರುವ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, ಗ್ಯಾರೇಜ್‌ಗಳು ಮತ್ತು ಹೊಟೇಲ್‌ಗಳಲ್ಲಿ ಹಠಾತ್ ದಾಳಿ, ತಪಾಸಣೆ ನಡೆಸಿ ಒಂದು ಕಿಶೋರ ಕಾರ್ಮಿಕ ಮಗುವನ್ನು ರಕ್ಷಿಸಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಯಿತು.

ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ ಮಾತನಾಡಿ, ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಬೇಕೆಂದು ಕಾರ್ಮಿಕ ಇಲಾಖೆಯಿಂದ ನಿರಂತರವಾಗಿ ಜನಜಾಗೃತಿ, ಕಾನೂನು ಅರಿವು-ನೆರವು ಕಾರ್ಯಕ್ರಮ, ಬೀದಿನಾಟಕ ಮತ್ತು ಆಟೋಪ್ರಚಾರ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಇದನ್ನು ಮೀರಿಯೂ ಸಹ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ಅಂತಹ ಅಂಗಡಿ ಮಾಲೀಕರ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.

ವಡಗೇರಾ ಕಾರ್ಮಿಕ ನಿರೀಕ್ಷಕ ಪ್ರಿಯಾಂಕ ಬಾಸೂತ್ಕರ್ ಮಾತನಾಡಿ,ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಲ್ಲಿ ಅಂತಹ ಅಂಗಡಿ ಮಾಲೀಕರ ವಿರುದ್ಧ 20,000-50,000 ರು. ವರೆಗೆ ದಂಡ ಮತ್ತು 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನು ಸಹ ವಿಧಿಸಲಾಗುವುದು ಎಂದು ತಿಳಿಸಿದರು.

ತಾಲೂಕು ಪಂಚಾಯಿತಿಯ ಯೋಜನಾಧಿಕಾರಿ ರಾಘವೇಂದ್ರ ಕೆ., ಶಿರಸ್ತೇದಾರ ರಾಮನಗೌಡ ಕೆಳಗೇರಿ, ಕಂದಾಯ ನಿರೀಕ್ಷಕ ಸಂಜೀವ ಕವಲಿ, ಆರೋಗ್ಯ ಇಲಾಖೆಯ ವಿಜಯಕುಮಾರ್ ಎಂ., ಪೊಲೀಸ್ ಇಲಾಖೆಯ ಎ.ಎಸ್.ಐ. ನಂದಗೋಪಾಲ, ಮಕ್ಕಳ ಸಹಾಯವಾಣಿ 1098/112ನ ರೇಣುಕಾ, ಡಾನ್ ಬಾಸ್ಕೋ ಸಂಸ್ಥೆಯ ಫ್ರಾನ್ಸಿಸ್ ಶಾಬು, ಮಲ್ಲಿಕಾರ್ಜುನ ಕುರಕುಂದಿ, ಮಾರ್ಗದರ್ಶಿ ಸಂಸ್ಥೆಯ ಆಶಾ ಬೇಗಂ, ತಾಯಮ್ಮ ಎಸ್., ಕಾರ್ಮಿಕ ಇಲಾಖೆಯ ಜಾವೀದ್ ಪಾಷಾ, ಅಮೃತ್ ರಾವ್ ಕೊತ್ವಾಲ್ ಇದ್ದರು.

Share this article